Saakshatv aavathiyathe episode

ಆವತೀಯತೆ: ( Saakshatv aavathiyathe episode )

ಪ್ರಾಯಶಃ ಈ ಕಥೆಯ ಶೇಡ್‌ ಹೊಳೆದಿದ್ದು ೨೦೧೨ರಲ್ಲಿ ಇರಬಹುದು. ಎಲ್ಲೋ ಕೇಳಿದ್ದ, ಓದಿದ್ದ ಆವತಿ ಸಂಸ್ಥಾನ, ಯಲಹಂಕ ನಾಡಪ್ರಭು ಕೆಂಪೇಗೌಡರ ಪೂರ್ವಜರಾದ ರಣಭೈರೇಗೌಡರು, ಗ್ರಾಮಸ್ಥರಿಗಾಗಿ ಪ್ರಾಣಬಿಟ್ಟ ರಣಭೈರೇಗೌಡರ ಪುತ್ರಿ ವೀರಕೆಂಪಮ್ಮನ ಕಥೆ ಇತ್ಯಾದಿಗಳನ್ನು ಕೇಳಿದ್ದೆ. ಆಗ ಇದರೊದ್ದೊಂದು ಕಾಲ್ಪನಿಕ ಕಥಾಹಂದರ ಸೃಷ್ಟಿಯಾಗಿತ್ತು. ಅನಂತರ ಬಾಹುಬಲಿ ಸಿನಿಮಾ ಬಂತಲ್ಲ, ಅದರ ಕಾಲ್ಪನಿಕ ಸಾಮ್ರಾಜ್ಯ ಮಾಹಿಷ್ಮತಿಯ ಪ್ರಭೆಯ ಮುಂದೆ ನನ್ನ ಆವತಿ ಸಾಮ್ರಾಜ್ಯದ ಕಾಂತಿ ಕೊಂಚ ಕುಂದಿತು. ಆನಂತರದ ದಿನಗಳಲ್ಲಿ ಈ ಕಥೆಯ ಮೂಲವನ್ನು ಡೆವಲಪ್‌ ಮಾಡುವುದನ್ನೇ ಬಿಟ್ಟುಬಿಟ್ಟೆ. ನನಗೆ ತರಾಸು ಅವರ ಚಿತ್ರದುರ್ಗದ ಪಾಳೆಯಗಾರರ ವಂಶದ ಸರಣಿಯಂತೆ ಆವತಿ ನಾಯಕರ ಕಥೆಯನ್ನು ಜನಪದದ ಶೈಲಿಯಲ್ಲಿ ಬರೆಯುವ ಆಸೆಯಿತ್ತು. ಅರಮನೆ ಮತ್ತು ಗುರುಮನೆಗಳ ಒಳ ರಾಜಕಾರಣಗಳನ್ನು ನಿರಂಜನರ ಮೃತ್ಯುಂಜಯ ಕಾದಂಬರಿಯಂತೆ ಪೋಷಿಸಿ ಬರೆಯುವ ಯೋಜನೆಯಿತ್ತು. ನಾಡದೇವಿ ಆವತೇಶ್ವರಿ ಸೂಲಂಗಿಯನ್ನು ನಮ್ಮ ಚಾಮುಂಡೇಶ್ವರಿಯಂತೆ ಮೆರೆಸಿ ಬರೆಯುವ ಇರಾದೆಯಿತ್ತು. ಆದರೆ ಸ್ವಭಾವತಃ ಶುದ್ಧ ಸೋಮಾರಿಯಾದ ನಾನು ಇದನ್ನು ಮುಂದುವರೆಸುವ ಗೋಜಿಗೆ ಹೋಗಲಿಲ್ಲ. Saakshatv aavathiyathe episode

ಈ ಮಧ್ಯೆ ೨೦೧೪ರಲ್ಲಿ ಜನಶ್ರೀಯಲ್ಲಿ ಕೆಲಸ ಮಾಡುತ್ತಿದ್ದಾಗ ಗುರುಗಳಾದ ರವಿ ಬೆಳಗೆರೆಯವರು ಆಗ ಆ ಚಾನೆಲ್‌ ನ ಸಿಇಒ ಆಗಿದ್ದರು. ಅವರ ಚೇಂಬರ್‌ ಗೆ ಮುಕ್ತವಾಗಿ ಹೋಗಿ ಮಾತಾಡಬಹುದಾದ ಅವಕಾಶವಿತ್ತು. ಆದರೆ ಅವರು ಬರುವುದೇ ಅಪರೂಪ, ಬಂದರೂ ಹಿಂಡುಗಟ್ಟಲೇ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರಲ್ಲ ಈ ಕಥೆಯ ವಿಷಯ ಅವರ ಬಳಿ ಮಾತಾಡಲು ಆಗುತ್ತಿರಲಿಲ್ಲ. ಒನ್‌ ಫೈನ್‌ ಡೇ ಶುಭಸಮಯದಲ್ಲಿ ಅವರ ಬಿಡುವಿನ ಸಮಯದಲ್ಲಿ ಕಥೆಯ ಎಳೆಯನ್ನು, ವಿಸ್ತಾರವನ್ನು, ಅದು ಹೊರಳಿಕೊಳ್ಳುವ ಮಗ್ಗುಲುಗಳನ್ನು, ಪಡೆದುಕೊಳ್ಳುವ ತಿರುವುಗಳನ್ನು ಕ್ಲುಪ್ತವಾಗಿ ಹೇಳಿದೆ. ಈ ಆಲೋಚನೆ ಅವರಿಗೆ ಇಷ್ಟವಾಗಿತ್ತು, ಅದರಲ್ಲೂ ನಾಡದೇವಿ ಸೂಲಂಗಿಯ ಫ್ಯಾಂಟಸಿ ಸಂಗತಿಗಳನ್ನು ಕೇಳಿದ ಅಕ್ಷರ ಮಾಂತ್ರಿಕ ಎಕ್ಸೈಟ್‌ ಆಗಿಬಿಟ್ಟಿದ್ದರು. ಬೇಕಿದ್ದರೆ ರಜೆ ಕೊಡಿಸುತ್ತೇನೆ ಒಂದು ತಿಂಗಳು ಸಮಯ ತೆಗೆದುಕೊಂಡು ಮೊದಲ ಅಧ್ಯಾಯದ ಕನಿಷ್ಟ ೨೦೦ ಪುಟಗಳನ್ನು ಬರೆದುಬಿಡು. ನಾನೇ ತಿದ್ದಿಕೊಡುತ್ತೇನೆ, ನಮ್ಮ ಪ್ರಕಾಶನದಲ್ಲಿ ಪ್ರಕಟಿಸೋಣ ಅಂದು ಆಶ್ವಾಸನೆ ನೀಡಿದ್ದರು. ಆದರೆ ದುರದೃಷ್ಟವಶಾತ್‌ ಅವರ ಆರೋಗ್ಯ ಆ ಸಮಯದಲ್ಲಿ ಆಗಾಗ ಬಿಗಡಾಯಿಸುತ್ತಿದ್ದ ಕಾರಣ ಅವರು ಮತ್ತೆ ಜನಶ್ರೀ ಅಂಗಳಕ್ಕೆ ಬರುವುದು ನಿಲ್ಲಿಸಿದರು, ನಾನೂ ಜನಶ್ರೀ ಬಿಟ್ಟೆ. ಆನಂತರವೂ ಯಾವಾಗಲಾದರೂ ಒಮ್ಮೆ ಭೇಟಿಯಾದಾಗ ನೆನಪು ಮಾಡಿಕೊಂಡು ಇದರ ಬಗ್ಗೆ ವಿಚಾರಿಸುತ್ತಿದ್ದರು ನಾನು ಹ್ಹಿ ಹ್ಹಿ ಹ್ಹಿ ಎಂದು ಹಲ್ಲುಬಿಟ್ಟು ಬರುತ್ತಿದ್ದೆ.

ಈಗೀಗ ಯಾಕೋ ಈ ಕಥಾ ಹಂದರ ನಿದ್ದೆ ಮಾಡಲು ಬಿಡದೇ ತಿವಿಯಲು ಶುರುಮಾಡಿದೆ. ಇದಕ್ಕೊಂದು ಮುಕ್ತಿ ಕಾಣಿಸಲೇ ಬೇಕು ಅನ್ನುವ ತಹತಹಿಕೆ ಮತ್ತೆ ಪೆನ್ನಿನ ಕ್ಯಾಪ್‌ ತೆರೆಸಿದೆ. ಆವತೀಶ್ವರಿ ಸೂಲಂಗಿಯ ಕೃಪೆಯಿಂದ ನನ್ನ ಶ್ರದ್ಧೆ ಅಲುಗಾಡದೇ ಒಂದೇ ಕಡೆ ಕುಳಿತರೆ ವಾರ ವಾರ ಒಂದಷ್ಟು ಎಪಿಸೋಡ್‌ ನಂತೆ ಬರೆದರೂ ಬರೆದೇನು. ಇದಕ್ಕೆ ಆವತೀಯತೆ (ಭಾರತೀಯತೆಯಂತೆ) ಎನ್ನುವ ಹೆಸರಿಟ್ಟರೆ ಹೇಗೆ ಎಂದು ೨೦೧೨ರಿಂದಲೂ ಯೋಚಿಸಿ ಅಂತೂ ಕೊನೆಗೆ ಇದೇ ಸರಿ ಅನ್ನುವ ನಿರ್ಧಾರಕ್ಕೆ ಬಂದೆ. ಇತಿಹಾಸದ ಪ್ರಕಾರ ಅತ್ತೂರು ಪಾಳೆಯಗಾರರ ಕಾಟ ತಡೆಯಲಾರದೆ ಕಂಚಿಯಿಂದ ವಲಸೆಬಂದ ಮಲ್ಲಭೈರೇಗೌಡರ ವಂಶ ಆವತಿ ನಾಡನ್ನು ಆಳಿತು. ರಣಭೈರೇಗೌಡರ ಮರಿಮಗ ಕೆಂಪನಾಚಪ್ಪಗೌಡರ ಮಗನೇ ನಾಡಪ್ರಭು ಕೆಂಪೇಗೌಡರು. ರಣಭೈರೇಗೌಡರ ವಂಶವೃಕ್ಷದಲ್ಲಿ ಜಯಗೌಡ, ಗಿಡ್ಡಪ್ಪಗೌಡ, ನಾಚಪ್ಪಗೌಡ ಮತ್ತು ಕೆಂಪನಾಚಪ್ಪಗೌಡ ಮುಂತಾದ ನಾಯಕರಿದ್ದಾರೆ. ಆವತಿ, ಮಾಗಡಿ, ಯಲಹಂಕ ಮುಂತಾದ ಕಡೆ ಇವರ ರಾಜ್ಯಭಾರ ನಡೆಯುತ್ತದೆ. ಆದರೆ ಈ ಕಾಲ್ಪನಿಕ ಕಥಾನಕದಲ್ಲಿ ಆವತಿ ಸಾಮ್ರಾಜ್ಯವನ್ನು ಕಟ್ಟುವ ವೀರ ಮಾದನಾಯಕ ಆನೆಗಳನ್ನು ಪಳಗಿಸಿ ಮಾರುತ್ತಿದ್ದ ಬುಡಕಟ್ಟು ಕಲ್ಲುಕುರುಬರ ಮುಖಂಡ. ಕಾಡಿನಲ್ಲೇ ನೆಮ್ಮದಿಯಾಗಿ ವಾಸವಿದ್ದ ಈ ಆದಿವಾಸಿ ಜನ ಕಾಡು ತೊರೆದು ನಾಡು ಕಟ್ಟಲು ಕಾರಣವಾಗಿದ್ದೇ ಇವರ ಹಾಡ್ಯದ ದೇವಿ ಸೂಲಂಗಿ, ಹಿಮಾಲಯದಿಂದ ಬಂದಿದ್ದ ಗುರು ತಿರುಕಪ್ಪ, ಕಾಡಿನ ಬೆಂಕಿ ಮತ್ತು ಇವರೇ ಆನೆಗಳನ್ನು ಸರಬರಾಜು ಮಾಡುತ್ತಿದ್ದ ಪುಂಡು ಪಾಳೆಯಗಾರರ ಹೆಣ್ಣು ಬಾಕತನ. ಕಥೆ ತೆರೆದುಕೊಳ್ಳುವುದೇ ಕುರುಚುಲು ಕಾಡಿನ ನಡುವಿನ ದೊಡ್ಡಯನ ಕೆರೆ ಹಾಡ್ಯದ ಮಾದನಾಯಕನ ನಾಯಕತನ, ಚಾಣಾಕ್ಷತನ, ಮೇಧಾವಿತನದ ಮುಖೇನ.

ಮಾದನಾಯಕ ವೀರ ಮಾದನಾಯಕನಾಗುತ್ತಾನೆ, ತನ್ನ ಆದಿವಾಸಿ ಜನರ ರಕ್ಷಣೆಗಾಗಿ ಶಸ್ತ್ರ ಹಿಡಿಯುತ್ತಾನೆ. ತಾನೇ ಪಳಗಿಸಿದ ಆನೆಗಳನ್ನು ಬಳಸಿ, ಬೋಳು ಬೆಟ್ಟದಲ್ಲಿ ನಾಡು-ಕೋಟೆ ಕಟ್ಟುತ್ತಾನೆ. ತನ್ನದೇ ರಟ್ಟೆಯಲ್ಲಿ ಬೆವರ ಬಸಿದು ನೀರಿನ ಒರತೆಗಳ ಹುಡುಕಿ ಬಾವಿಗಳ ತೋಡುತ್ತಾನೆ, ಕಾಡುಕೋಣಗಳನ್ನು ಬಗ್ಗಿಸಿ ಒಕ್ಕಲುತನ ಮಾಡುತ್ತಾನೆ. ಮೈಜಟ್ಟಿಗಳ ಪಡೆ ಕಟ್ಟಿ ಕೋಲು ಕವಣೆಗಳ ತರಭೇತಿ ನೀಡುತ್ತಾನೆ. ಸುತ್ತಮುತ್ತಲ ಪಾಳೆಯಗಾರರ ಗಡಿಯೊಳಗೆ ನುಗ್ಗಿ ದರೋಡೆ ಮಾಡಿ ತನ್ನ ಜನರ ಹೊಟ್ಟೆ ತುಂಬಿಸುತ್ತಾನೆ. ಕಡಲಿನಲ್ಲಿ ನಾವೆ ಕಳಿಸಿ ಪರ್ಷಿಯ ಯವನರ ಸಂಗಡ ವ್ಯಾಪಾರದ ಒಪ್ಪಂದ ಮಾಡಿಕೊಳ್ಳುತ್ತಾನೆ. ಜಿಂಕೆಗಳ ತೊಗಲು, ಕಾಡು ಅರಿಷಿಣದ ಕಷಾಯ, ದಾಲ್ಚಿನ್ನಿ ಎಲೆಗಳು, ಕಾಡೆಮ್ಮೆಯ ತುಪ್ಪ, ಜೇನು, ಬೆತ್ತದ ಪೀಠೋಪಕರಣಗಳನ್ನು ಕೊಟ್ಟು ಕತ್ತಿ, ಕೊಡಲಿ, ಈಟಿಗಳಿಗೆ ಬೇಕಾದ ಲೋಹವನ್ನು ತರಿಸಿ ಎರಕ ಹೊಯ್ದು ಆಯುಧ ಮಾಡಿಕೊಳ್ಳುತ್ತಾನೆ. ಬಲಿತ ಪರ್ಷಿಯನ್‌ ಕುದುರೆಗಳನ್ನು ಆಮದು ಮಾಡಿಕೊಳ್ಳುತ್ತಾನೆ. ಸುದೀರ್ಘ ೪೦ ವರ್ಷಗಳ ಕಾಲ ಯಾವುದೇ ಅಂತಃಕಲಹಗಳಿಲ್ಲದೇ, ತೊಂದರೆ ತಾಪತ್ರಯಗಳಿಲ್ಲದೇ, ಭಿನ್ನ ಧ್ವನಿಗಳಿಲ್ಲದೇ, ಬಿರುಕು ಅಸಮಾಧಾನಗಳಿಲ್ಲದೇ ಆಡಳಿತ ನಡೆಸುತ್ತಾನೆ.
Saakshatv aavathiyathe episode

ವೀರ ಮಾದನಾಯಕನಿಗೆ ಹೆಜ್ಜೆ ಹೆಜ್ಜೆಗೂ ನಿಂತು ಮಾರ್ಗದರ್ಶನ ನೀಡುವ ಗುರುವೇ ತಿರುಕ. ಕಾಡು ಬಿಟ್ಟು ನಾಡು ಕಟ್ಟಲು ಸೂಚಿಸುವುದರಿಂದ ಹಿಡಿದು, ನೆರೆಯ ಪಾಳೆಯಗಳ ದೋಚುವ ತನಕ, ಸೈನ್ಯ ಕಟ್ಟುವ, ವ್ಯವಸಾಯ ಮಾಡುವ, ವಿದೇಶಗಳ ವ್ಯವಹಾರದವರೆಗೆ ಎಲ್ಲವನ್ನೂ ನಿರ್ದೇಶಿಸಿ ಅಣತಿ ಜಾರಿ ಮಾಡುವುದೇ ತಿರುಕ. ವೀರ ಮಾದನಾಯಕನಿಗೆ ಭವಂತಿ ಇದ್ದರೇ ತಿರುಕನಿಗೆ ಊರಾಚೆಯ ಹುಣುಸೇತೋಪಿನ ಗುಡಿಸಲೇ ಅರಮನೆ. ತಿರುಕ ಯಾವುದೇ ರಾಜಾಶ್ರಯವಾಗಲೀ ಅಥವಾ ನಾಯಕ ಕೃಪಾಶ್ರಯವನ್ನಾಗಲೀ ಬಯಸದ, ನಿಜವಾದ ಅರಿಷಡ್ವರ್ಗಗಳನ್ನು ಮೀರಿನಿಂತ ಭಿಕ್ಷುಕ. ಚಂದ್ರಗುಪ್ತನ ಬೆನ್ನು ಕಾದ ಚಾಣಕ್ಯನಂತಹ ಗುರು. ಸೂರ್ಯ ಮುಳುಗಿದ ಒಂದು ಕಡೆಯ ದಿನ ತಿರುಕನ ಅವತಾರವೂ ಪೂರ್ತಿಯಾಗುತ್ತದೆ, ಅಂದೇ ಮಾದನಾಯಕನು ತನ್ನ ೧೨ರಲ್ಲಿ ಒಬ್ಬ ಸಮರ್ಥ ಪುತ್ರನಿಗೆ ಪಟ್ಟಕಟ್ಟಿ ತನ್ನ ಮೂಲನೆಲೆ ಕಾಡಿನ ಹಾಡ್ಯಕ್ಕೆ ವಾನಪ್ರಸ್ಥಾಶ್ರಮಕ್ಕೆ ತೆರಳುತ್ತಾನೆ ಎಂಬಲ್ಲಿಗೆ ಮೊದಲ ಅಧ್ಯಾಯ ಪೂರ್ತಿಯಾಗುತ್ತದೆ.

ದೊಡ್ಡಯ್ಯನ ಕೆರೆ ಹಾಡ್ಯದ ಬುಡಕಟ್ಟು ಸುಂದರಿಯರು ಸದೃಢ ಅಂಗಸೌಷ್ಠವ ಹೊಂದಿದ ಸುರಸುಂದರಿಯರು. ಈ ಸುಂದರಿಯರ ಕಾರಣದಿಂದಲೇ ಪುಂಡು ಪಾಳೆಯಗಾರರು ಉಪಟಳ ಕೊಡುವುದು ಹೆಚ್ಚು ಮಾಡಿದ್ದು. ಮಾದನಾಯಕ ತನ್ನ ಜನರೊಂದಿಗೆ ಕಾಡು ತೊರೆದಿದ್ದು. ವೀರ ಮಾದನಾಯಕನ ಮೂವರು ಪತ್ನಿಯರಲ್ಲಿ ಇಬ್ಬರು ಇವನದ್ದೇ ಹಾಡ್ಯದ ಆದಿವಾಸಿಗಳ ಹಿರೀಕರ ಪುತ್ರಿಯರು. ಮೂರನೆಯವಳು ಪರ್ಷಿಯಾದಿಂದ ಆಮದಾದ ಗುಲಾಮಳು. ಆದರೆ ಮಾನವೀಯತೆಯ ಪ್ರತಿಪಾದಕನಾದ ಮಾದನಾಯಕ ಹೆಣ್ಣಿನ ಗೌರವಕ್ಕೆ ಮಹತ್ವ ಕೊಡುವವನು. ಅದೇ ಕಾರಣದಿಂದ ಆ ಪರ್ಷಿಯನ್‌ ಕನ್ಯೆಯನ್ನು ತನ್ನ ಉಪಪತ್ನಿಯನ್ನಾಗಿ ಸ್ವೀಕರಿಸುತ್ತಾನೆ. ಗುರು ತಿರುಕನೂ ಇದಕ್ಕೆ ಸಮ್ಮತಿಸುತ್ತಾನೆ. ಆ ಪರ್ಷಿಯನ್‌ ಕನ್ಯೆಯ ೧೨ ವರ್ಷದ ಮಗನನ್ನೇ ವೀರ ಮಾಸದನಾಯಕ ತನ್ನ ಉತ್ತರಾಧಿಕಾರಿಯೆಂದು ಘೋಷಿಸುತ್ತಾನೆ. ಆವತಿಯ ಅಂತಃ ಕಲಹ ಶುರುವಾಗುವುದೇ ಅಲ್ಲಿಂದ ನಂತರ. ಆವತಿಯ ವರ್ಣವ್ಯವಸ್ಥೆ, ಆಡಳಿತ ವೈಖರಿ, ನಾಣ್ಯಗಳ ಠಂಕಸಾಲೆ, ಗೋಶಾಲೆ, ಕಾಡುಕೋಣಗಳ ಕಾರ್ಯಾಗಾರ, ಪರ್ಷಿಯನ್‌ ಕುದುರೆಗಳ ತರಬೇತಿ, ಮೈಜೆಟ್ಟಿ ಯೋಧರ ನಿತ್ಯದ ಸಮರಾಭ್ಯಾಸದ ಅಂಕಣ, ಜಗಜೆಟ್ಟಿ ಸಾಮಯ್ಯನ ರಾಜನಿಷ್ಟೆ, ಮಂತ್ರಿ ಸೋಪಯ್ಯನ ಕುಶಾಗ್ರಮತಿ, ತೃಣಧಾನ್ಯಗಳ ತಿನಿಸು ವೈವಿಧ್ಯ, ಆವತೇಶ್ವರಿ ಸೂಲಂಗಿಯ ವಿಶೇಷ ಆರಾಧನೆ, ತಿರುಕ ನುಡಿವ ವಾರ್ಷಿಕ ಕಾರಣಿಕ, ಮಾಧನಾಯಕ ಸಾಲು ಸಾಲಾಗಿ ನಡೆಸುವ ದಿಗ್ವಿಜಯಗಳು ಇತ್ಯಾದಿ ವೈವಿಧ್ಯಮಯ ಸಂಗತಿಗಳು ಈ ಕಾಲ್ಪನಿಕ ಕಥಾನಕದಲ್ಲಿ ಅಡಕವಾಗಿವೆ. ಆವತಿಪುರ ಜನರು ಅನೇಕ ವಿಚಿತ್ರ ಶಕುನಗಳನ್ನು ನಂಬುತ್ತಾರೆ, ಇವರ ಮೂಲಪುರುಷ ಕಿರುಬನ ಸವಾರಿ ಮಾಡುವ ಕೊರಮಜ್ಜನ ಬಗೆಗಿನ ವಿಸ್ಮಯಕಾರಿ ಚಿತ್ರವಿಚಿತ್ರದ ದಂತಕಥೆಗಳಿವೆ. ತಾಯಂದಿರು ತಮ್ಮ ಮಕ್ಕಳಿಗೆ ಕಾಡಿನಲ್ಲಿದ್ದಾಗ ಕಾಟಿಯ ಹಾಲು ಕುಡಿಸುವಾಗಿಂದ, ನಂತರದ ದಿನಗಳಲ್ಲಿ ಆವತಿ ನಾಡಿಗೆ ವಲಸೆ ಬಂದ ನಂತರವೂ ಬರಗು ರೊಟ್ಟಿಯನ್ನು ತಿನ್ನಿಸಿ ಮಲಗಿಸುವ ವೇಳೆ ಈ ಕಥೆಗಳನ್ನು ಇನ್ನಿಲ್ಲದ ರೋಚಕ ಕಥೆಯ ಸಂಗಡ ಹೇಳಿ ಮಲಗಿಸುತ್ತಾರೆ. ಕೊರಮಜ್ಜನ ನುಡಿಮುತ್ತುಗಳೇ ಇವರ ಪಾಲಿನ ಧರ್ಮಗ್ರಂಥ. ಕೊರಮಜ್ಜ ಸಾಕ್ಷಾತ್‌ ಸೂಲಂಗಮ್ಮನ ವರಪುತ್ರ. Saakshatv aavathiyathe episode
Saakshatv aavathiyathe episode

ವೀರ ಮಾದನಾಯಕ – ವೀರ ಮಾಚನಾಯಕ – ವೀರ ಕೆಂಚನಾಯಕ – ವೀರ ಚಾಮನಾಯಕ – ವೀರ ಚೋಳನಾಯಕ – ವೀರ ಸೋಪನಾಯಕ – ವೀರ ಗುರಪ್ಪನಾಯಕ ಹೀಗೆ ಈ ಸಾಮ್ರಾಜ್ಯದ ಪಾಳೆಯಗಾರರ ವಂಶಾವಳಿ ಮುಂದುವರೆಯುತ್ತದೆ. ಆವತಿಯ ಸಂಸ್ಥಾಪಕ ವೀರ ಮಾದನಾಯಕನ ಮೂವರು ಪತ್ನಿಯರ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಿಂದ ಆವತಿ ಆಡಳಿತ ಮೂರು ಕವಲಾಗುತ್ತದೆ. ಆದರೆ ನಾಲ್ಕೂ ಕಡೆ ವೈರಿಗಳನ್ನೇ ಹೊಂದಿರುವ ಆವತಿ ರಾಜ್ಯ ರಕ್ಷಣೆಯ ವಿಚಾರದಲ್ಲಿ ದಾಯಾದಿಗಳ ನಡುವೆ ಒಡಕನ್ನೂ ಮುಚ್ಚಿ ಒಂದುಗೂಡಿಸುತ್ತದೆ. ಕಡಲಿನ ನಡುವಿನ ದ್ವೀಪದಲ್ಲಿ ಆವತಿಯ ಖಜಾನೆ ಇದೆ. ಅದರ ರಹಸ್ಯ ಆವತಿಯನ್ನು ಆಳುವ ನಾಯಕ ಸಾಯುವ ತನಕ ರಹಸ್ಯವಾಗಿ ಕಾಪಾಡಿಕೊಳ್ಳಲೇಬೇಕು ಅನ್ನುವುದು ಆವತೀಶ್ವರಿ ಸೂಲಂಗಿಯ ಮೇಲೆ ಇಟ್ಟು ಮಾಡಬೇಕಾದ ಪ್ರತಿಜ್ಞೆ ಇದನ್ನು ಯಾರೂ ಮೀರುವಂತಿಲ್ಲ, ಯಾರೂ ಮೀರುವುದೂ ಇಲ್ಲ. ಆವತಿಯ ರಾಜಧಾನಿ ಮಾದಾಪುರ; ವೀರಾಪುರ, ಸೋಮಪುರ, ಗುರಯ್ಯನೂರು ಉಪರಾಜಧಾನಿಗಳು ಅಥವಾ ಮೂರು ದಿಕ್ಕುಗಳ ಆಯಕಟ್ಟಿನ ಪ್ರದೇಶಗಳು. ಇಲ್ಲೆಲ್ಲಾ ಕಿರುಕೋಟೆಗಳಿವೆ. ವೀರ ಮಾದನಾಯಕನೇ ಕಟ್ಟಿಸಿದ ರಕ್ಷಣಾ ಕೋಟೆಗಳಿವು. ಪದೇ ಪದೇ ದಾಳಿಗಳಾಗುವುದು ಇದೇ ಕೋಟೆಗಳ ಮೇಲೆ. ಈ ಕೋಟೆಗಳಿಂದ ಮುಂದಕ್ಕೆ ಅಡಿಯಿಡಲು ಶತ್ರುಗಳಿಗೆ ಸಾಧ್ಯವಿಲ್ಲ, ಒಂದು ವೇಳೆ ನುಗ್ಗಿದರೂ ಬಾನೆತ್ತರದ ಬೋಳುಗುಡ್ಡದ ಮೇಲಿನ ಒಂಬತ್ತು ಸುತ್ತಿನ ಕೋಟೆಯೊಳಗಿದೆ ರಾಜಧಾನಿ ಮಾದಾಪುರ, ಇದನ್ನು ತಲುಪುವುದು ಕಷ್ಟಸಾಧ್ಯ. ಭವಿಷ್ಯದಲ್ಲಿ ಜರುಗಲಿರುವ ವಿದ್ಯಮಾನಗಳಿಗೆ ಇತಿಹಾಸದ ರಾಜಧಾನಿಯ ಒಂಬತ್ತು ಸುತ್ತಿನ ಕೋಟೆಯೂ ಭದ್ರವಲ್ಲ. ಐದನೇ ದಿಕ್ಕಿನಲ್ಲಿ ಸಮುದ್ರವಿದೆ, ಅದೇ ಗುತ್ತಿಬಾಗಿಲು ಎಂಬ ಹೆಸರಿನ ಬಂದರು. ಆವತಿಯ ಆದಿಗುರು ತಿರುಕಪ್ಪನ ಸ್ಮರಣಾರ್ಥ ತಿರುಕಪ್ಪನ ಪಾಳೆಯ ಅನ್ನುವ ಹೊಸ ಊರನ್ನು ಮಾದನಾಯಕನೇ ತನ್ನ ಅಂತಿಮ ದಿನಗಳಲ್ಲಿ ಕಟ್ಟಿಸುತ್ತಾನೆ. ತಿರುಕನ ನಂತರವೂ ಆವತಿಗೆ ಅನೇಕ ಗುರುಗಳು ತಾನೇ ತಾನಾಗಿ ಬರುತ್ತಾರೆ. ನಾಯಕರನ್ನು ಬದಲಾಯಿಸುವ ಅನೇಕ ಷಡ್ಯಂತ್ರಗಳು ಆವತಿಯ ಗುರುಮನೆಯಲ್ಲಿಯೂ ನಡೆಯುತ್ತವೆ. ಮುಂದೆ ಮುಂದೆ ಆವತಿ ಪಡೆದುಕೊಳ್ಳುವ ತಿರುವುಗಳಿಗೆ ಲೆಕ್ಕವೇ ಇರುವುದಿಲ್ಲ. ಎಲ್ಲವನ್ನೂ ಅರ್ಧಮರ್ದ ಮಾಡುವೆನಂಬ ಆಪಾದನೆಯಿಂದ ಆವತೀಶ್ವರಿ ಸೂಲಂಗಿ ನನ್ನ ಮುಕ್ತಗೊಳಿಸಲಿ ಎನ್ನುವ ಬೇಡಿಕೆಯೊಂದಿಗೆ, ಎನಿ ವೇ ಸಿಳ್ಳೆ-ಚಪ್ಪಾಳೆ ಬಿದ್ದರೇ ಮಾತ್ರ ಮುಂದಿನ ಅಪ್ಡೇಟ್ಸ್‌ ಕೊಡ್ತೀನಿ. ಕಾಯ್ತಿರಿ..

ವಿಪ್ರಭಾ (ವಿಶ್ವಾಸ್‌ ಪ್ರಭಾಕರ್‌ ಭಾರದ್ವಾಜ್)
***

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd