ಆವತೀಯತೆ ಆರಂಭದ ಮುಂದುವರೆದ ಭಾಗ..

1 min read

ಆವತೀಯತೆ ಆರಂಭದ ಮುಂದುವರೆದ ಭಾಗ.. Saakshatv aavathiyathe episode 1 continued

ವೀರಮಾದನ ಧಾರಣೆ, ತಿರುಕನ ಹರಕೆ ಮತ್ತು ಸುರಗಿರಿಯಲ್ಲಿ ನಾಯಕನ ಮೊತ್ತಮೊದಲ ದಿಗ್ವಿಜಯ:

ವೀರಮಾದ ಈ ಏಳು ಸಂವತ್ಸರಗಳಲ್ಲಿ ಹನ್ನೊಂದು ಬಾರಿ ದಿಗ್ವಿಜಯ ಯಾತ್ರೆ ಕೈಗೊಂಡಿದ್ದಾನೆ. ತನ್ನ ಅರೆನಿರ್ಮಿತ ವಿಶಾಲ ಭವ್ಯ ಭವಂತಿಯಲ್ಲಿ ಕೂತು ಅದನ್ನೇ ಯೋಚಿಸುತ್ತಾನೆ ಮಾದನಾಯಕ. ನಡೆದ ಘಟನೆಗಳಲ್ಲೆವೂ ಒಂದೊಂದಾಗಿ ಕಣ್ಮುಂದೆ ಹಾದು ಹೋದಂತಾಗುತ್ತದೆ. ಅದನ್ನೇ ಮತ್ತೆ ಮತ್ತೆ ಯೋಚಿಸುತ್ತಾನೆ. ಹೇಗಿದ್ದ ನಮ್ಮ ಜನರು ಹೇಗಾಗಿಬಿಟ್ಟರು. ಅಸಲಿಗೆ ತಾನಾದರೂ ಹೇಗಿದ್ದೆ, ಈಗ ತನ್ನೊಳಗೆ ಇಂತದ್ದೊಂದು ಅಗಾಧ ಕಸುವು ಹೇಗೆ ಬೆಳೆದುಬಿಟ್ಟಿತು. ದೊಡ್ಡಯ್ಯನಕೆರೆ ಹಾಡ್ಯದಿಂದ ಹೊರಡಿಸಿಕೊಂಡು ಬರುವ ಮಾರ್ಗ ಮಾಧ್ಯದಲ್ಲಿ ಝರಿಯ ಕೊರಕೊಲೊಂದರ ಬಳಿ ಶಿಷ್ಯ ದೀಕ್ಷೆ ಕೊಟ್ಟ ತಿರುಕ, ವೀರಮಾದನಿಗೆ ತನ್ನ ಐದಂಶದ ತಪಃಶ್ಯಕ್ತಿಯನ್ನು ಧಾರೆ ಎರೆದುಕೊಟ್ಟಿದ್ದ. ಅಂದು ತಿರುಕ ಹೇಳಿದ ಪ್ರತೀ ಮಾತುಗಳು ವೀರಮಾದನಿಗೆ ಮನಸಿನಲ್ಲಿ ಅಚ್ಚು ಒತ್ತಿದಂತೆ ನಾಟಿದ್ದವು. “ಹರಿವ ಗಂಗವ್ವನ ಸಾಕ್ಷಿಯಾಗಿ, ಮೊರೆವ ವನರಾಜನ ಸಾಕ್ಷಿಯಾಗಿ, ಕರೆವ ಪ್ರಕೃತಿದೇವಿಯ ಸಾಕ್ಷಿಯಾಗಿ, ಪೊರೆವ ಸೂಲಂಗಿಯ ಸಾಕ್ಷಿಯಾಗಿ ಈ ಶಕ್ತಿಯನ್ನು ದಾನ ಮಾಡುತ್ತೇನೆ. ನಾನು ಗಳಿಸಿದ, ಸಾಧಿಸಿದ ಸಂಘರ್ಷಿಸಿದ ಸಂಪಾದಿಸಿದ ಈ ದಿವ್ಯ ಶಕ್ತಿಯ ಒಂದಂಶ, ಈ ನನ್ನ ಶಿಷ್ಯ ಮಾದನಿಗೆ ಅರ್ಪಿಸುತ್ತಿದ್ದೇನೆ. ನನ್ನ ಶಸ್ತ್ರ, ಶಾಸ್ತ್ರ, ಶರೀರ, ಶಾರೀರ ಮತ್ತು ಶಕುನಗಳನ್ನು ಮಾದನಿಗೆ ಧಾರೆ ಎರೆಯುತ್ತಿದ್ದೇನೆ..” ಊರ್ದ್ವ ಮುಖಿಯಾಗಿ ಕೇವಲ ಸೊಂಟದ ಮೇಲೊಂದು ಕೌಪೀನ ತೊಟ್ಟು ಒಂಟಿಕಾಲಿನಲ್ಲಿ ನಿಂತಿದ್ದ ತಿರುಕನ ಧ್ವನಿ ತಾರಕದಲ್ಲಿತ್ತು. ಬೊಗಸೆ ಚಾಚಿದ್ದ ಅಂಗೈನಲ್ಲಿ ಸ್ವಾತಿಯ ಮೊದಲ ಹನಿ ತೊಟ್ಟಿಕ್ಕಿತ್ತು.
Saakshatv aavathiyathe episode 1 continued

ಒಂದರೆಕ್ಷಣ ಜಗತ್ತಿನ ಎಲ್ಲ ವ್ಯವಹಾರಗಳು ಸ್ತಬ್ಧವಾದಂತಾಯಿತು. ಗಾಳಿ ಬೀಸುವುದನ್ನೇ ನಿಲ್ಲಿಸಿತು, ಝರಿಯಲ್ಲಿ ಧುಮುಕುತ್ತಿದ್ದ ನೀರು ಹರಿಯುವುದನ್ನೇ ಮರೆಯಿತು, ಅನಂತ ಆಕಾಶವೂ ತೆರೆದ ಕಣ್ಣಿನಿಂದ ಈ ವಿದ್ಯಮಾನವನ್ನು ವೀಕ್ಷಿಸುವಂತೆ ಕಂಡಿತು. ವೀರಮಾದನ ಮೈ ನಡುಗಿತು. ತನ್ನ ದೇಹದೊಳಗೆ ಹೊಸ ಶಕ್ತಿ ಸೃಷ್ಟಿಯಾದಂತೆ, ತಾನೆಲ್ಲೋ ತೇಲುತ್ತಿರುವಂತೆ, ಸ್ವಚ್ಛಂದವಾಗಿ ಈಜುತ್ತಿರುವಂತೆ ಅವನಿಗೆ ಭಾಸವಾಯಿತು. ಮಾದನಾಯಕನ ತೋಳಿನ ಮಾಂಸ ಖಂಡರಗಳು ಬಿಗಿಯಾದವು. ನರನಾಡಿಗಳಲ್ಲಿ ಬಿಸಿಯಾದ ದ್ರವ ಹರಿದಾಡಿದಂತಾಯಿತು. ಗಂಟಲು ಉಬ್ಬಿತು, ಎದೆ ಕಲ್ಲಾಯಿತು, ಕಾಲಿನ ಮೀನಖಂಡಗಳು ಕಡುಬಿನಂತೆ ಉಬುಕಿದವು. ಎದೆಗೂಡಿನ ಪೊದೆಗೂದಲು, ಮೈ ರೋಮಗಳು ನಿಮರಿ ನಿಂತವು. “ಗುರುವೇ, ನಿನ್ನ ಮೊಣಕಾಲಿನ ಕೆಳಗೆ ನನ್ನ ಶಿರ-ಶರೀರವಿರಲಿ..” ಮಾದನಾಯಕನ ಧ್ವನಿ ಕಂಚಿಗೆ ಕಂಚು ಬಡಿದಷ್ಟು ಗಟ್ಟಿಯಾಯಿತು. ಅದು ಧ್ವನಿಯಂತಿರಲಿಲ್ಲ, ಧರೆತುದಿಯಲ್ಲಿ ನಿಂತು ಮಿಕದ ಬೇಟೆಗೆ ಸಂಚುಹೂಡಿ ನೆಗೆಯುವ ಮೊದಲಿನ ವ್ಯಾಘ್ರವೊಂದರ ಘರ್ಜನೆಯಂತಿತ್ತು. ಮಾದನಾಯಕನ ಕ್ಷೀಣ ಧ್ವನಿ ಹೋಗಿ ಹೊಸದಾಟಿಯ ಆರ್ಭಟಿಸುವ ಘಟ ಶಾರೀರ ಬಂದಿತ್ತು.

ಕಾಡಿನ ಯಾವುದೋ ಮೂಲೆಯಲ್ಲಿ ಮರದ ಕೊಂಬೆಗೆ ತನ್ನ ಬಣ್ಣಬಣ್ಣದ ಗರಿ ತಾಕಿಸಿಕೊಂಡು ಕೂತಿದ್ದ ಪ್ರಬುದ್ಧ ವಯಸ್ಸಿನ ಮಂಗಟ್ಟೆ ಹಕ್ಕಿಯೊಂದು ರೆಖ್ಖೆ ಪಟಪಟಿಸಿಕೊಂಡು ಹಾರಿ ಬಂದು ಮಾದನಾಯಕನ ಎಡಭುಜದ ಮೇಲೆ ಕೂತಿತು. ಕಿವಿಯ ಬಳಿ ಸುಳಿದ ಕರ್ಣ ಪಿಶಾಚಿ ಅದೇನೋ ಪಿಸುಗುಟ್ಟಿತು. ತಕ್ಷಣವೇ ವೀರ ಮಾದನ ಕಣ್ಣುಗಳಲ್ಲಿ ರಕ್ತಪ್ರವಹಿಸಿತು. ತನ್ನ ಮುಂದೆ ಭಯಭೀತರಾಗಿ ನೋಡುತ್ತಿದ್ದ ತನ್ನ ಜನರಲ್ಲಿ ಕೆಲವರನ್ನು ನಿರ್ದಿಷ್ಟವಾಗಿ ಗುರುತಿಸಿ ಅವರ ಬಳಿ ತೆರಳಿದ; ನೆತ್ತಿಯ ಮೇಲೆ ತನ್ನ ಹಸ್ತದಿಂದ ಲಘುವಾಗಿ ಅಪ್ಪಳಿಸಿದ. ಹತ್ತಿಪ್ಪತ್ತು ಜನ ದೃಢಕಾಯರು ನೆಲಕ್ಕೆ ಬಿದ್ದವರೇ ತೆವಳುತ್ತಾ ಮಾದನ ಹಿಂದೆ ತಿರುಕ ಕೂತಿದ್ದ ಕೊರಕಲಿನ ತನಕ ಉರುಳಿದರು. ತಿರುಕ ಅಷ್ಟೂ ಮಂದಿಗೆ ಇಸುಬು ಸೊಪ್ಪನ್ನು ಅರೆದರೆದು ತಿನ್ನಿಸಿದ. ಅದಾಗುತ್ತಿದ್ದಂತೆ ಅವರೊಳಗೆ ವಿಚಿತ್ರವಾದ ಬದಲಾವಣೆಗಳಾದವು. ಕಾಟಿಯಂತೆ ಬುಸುಗುಡುತ್ತಾ, ಆನೆಯಂತೆ ಘೀಳಿಡುತ್ತಾ ಎದ್ದು ನಿಂತರವರು. ಅವರ ಉಗುರುಗಳು ಹರಿತವಾದವು, ಹಲ್ಲು ಮೊನಚಾಯಿತು.

ತಾನು ಕೂತಿದ್ದ ಜಾಗದಲ್ಲಿ ವೀರಮಾದನನ್ನು ಕೂರಿಸಿದ ತಿರುಕ, ತನ್ನ ಅರೆನಿಮಿಲೀತ ಕಣ್ಣಗಳಲ್ಲಿ ಅವರೆಡೆಗೆ ನೋಡುತ್ತಾ ಏನೋ ಇಶಾರೆ ಮಾಡಿದ. ಕಾಡೇ ಅಬ್ಬರಿಸುವಂತೆ ಕೂಕು ಹಾಕಿದ ಆ ಮಂದಿ, ತಮ್ಮ ಚೂಪಾದ ಉಗುರುಗಳಿಂದ ಹಣೆಯ ನರ ಕುಯ್ದುಕೊಂಡು, ಹರಿದ ನೆತ್ತರನ್ನು ಬೊಗಸೆಯಲ್ಲಿ ಹಿಡಿದು, ಒಬ್ಬರಾದ ನಂತರ ಒಬ್ಬರಂತೆ ಮಾದನ ತಲೆಯ ಮೇಲೆ ಸುರಿದರು. ಕಗ್ಗಲ್ಲಿನಲ್ಲಿ ಕಡೆದ ದೈತ್ಯ ವಿಗ್ರಹದಂತಿದ್ದ ಹತ್ತಿಪ್ಪತ್ತು ಜನ ರಕ್ಕಸ ರೂಪಿ ಸೈಂದವರು, ಮಾದನ ಸುತ್ತಲೂ ಕೂಕು ಹಾಕುತ್ತಾ ಕುಣಿಯತೊಡಗಿದರು. ಅವರಲ್ಲಿ ತುಂಬುಮೊಲೆಯ, ನೀಳಕಟಿಯ ಸ್ಪುರದ್ರೂಪಿ ಚೆದಲುವೆಯರೂ ಇದ್ದರು. ಆದರೆ ಅವರ ಮುಖದಲ್ಲಿದ್ದ ಲಾಲಿತ್ಯ ಮತ್ತು ಶೃಂಗಾರಗಳು ಮರೆಯಾಗಿ ಅಲ್ಲೊಂದು ಭೀಬತ್ಸತೆ ಮನೆ ಮಾಡಿತ್ತು.
Saakshatv aavathiyathe episode1

ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಕಲ್ಲುಕುರುಬ ಜನರಲ್ಲಿ ಬಹುಪಾಲು ಜನ ಮೂರ್ಚೆ ತಪ್ಪಿದರು. ಅಂದು ಹುಣ್ಣಿಮೆ, ನಡುರಾತ್ರಿಯ ತುಂಬು ದೇಹದ ಚಂದ್ರ ಪವಡಿಸುವ ಹೊತ್ತಲ್ಲಿ ತಿರುಕ ಒಂದಷ್ಟು ಸೂಚನೆಗಳನ್ನು ಕೊಟ್ಟ. ಆ ರಕ್ಕಸ ಪಡೆ ಅಪ್ಪಣೆ ಪಡೆದವರಂತೆ ತಲೆಯಾಡಿಸಿ ದಕ್ಷಿಣದ ಕಡಲತೀರದ ಕಡೆ ಹೊರಟರು. ಅವರಿನ್ನು ಮಾನವ ಪ್ರಪಂಚಕ್ಕೆ ಸೇರಿದವರಲ್ಲ. ಅವರು ಮಾತಾಡುವುದಿಲ್ಲ, ನಗುವುದಿಲ್ಲ-ಅಳುವುದಿಲ್ಲ ಭಾವನೆಗಳನ್ನೂ ವ್ಯಕ್ತಪಡಿಸುವುದಿಲ್ಲ. ಅವರಲ್ಲಿರುವ ಐದಾರು ಹೆಂಗಸರಲ್ಲಿಯೂ ಮಾನವೀಯತೆಯ ಸೆಲೆ ಬತ್ತಿ ಹೋಗುತ್ತದೆ. ಅವರು ಸಾತ್ವಿಕ ಆಹಾರ ಸೇವಿಸುವುದನ್ನು ನಿಲ್ಲಿಸುತ್ತಾರೆ, ಹುಲಿ-ಕಿರುಬ-ತೋಳಗಳಂತೆ ಹಸಿಮಾಂಸವೇ ಅವರ ಆಹಾರ, ಕಾಡುಕರಡಿಗಳಂತೆ ಹಸಿ ಗೆಡ್ಡೆ, ಹಣ್ಣುಗಳನ್ನು ಹುಡುಕಿ ತಿಂದು ಬದುಕುತ್ತಾರೆ. ಮುಖ್ಯವಾಗಿ ಅವರು ಈ ಅಡವಿ, ಹಾಡ್ಯ, ಜನಸಮೂಹ ಬಿಟ್ಟು ಹೋಗುತ್ತಾರೆ. ಕಡಲ ಈಜಿ ದೂರದ ದ್ವೀಪ ಸೇರಿಕೊಳ್ಳುತ್ತಾರೆ. ಅಲ್ಲಿನ ಕಾಡುಗಳಲ್ಲಿ ಮುಂದೆ ನರಭಕ್ಷಕರಾಗಿ ಬದುಕುತ್ತಾರೆ. ವೀರಮಾದ ಕೊಡುವ ಅಪ್ಪಣೆಗಳ ಹೊರತಾಗಿ ಮತ್ತೇನೂ ಅವರ ಜ್ಞಾನವಾಹಿನಿ ನರವನ್ನು ತಲುಪುವುದಿಲ್ಲ. ಸಾಯುವ ತನಕ ಮಾದನಾಯಕನ ಅಡಿಯಾಳುಗಳಾಗಿ ಬದುಕುತ್ತಾರೆ, ನಾಯಕ ಹೇಳುವ ಪ್ರತೀ ಮಾತುಗಳನ್ನು ಇಂಚಿಂಚೂ ಪಾಲಿಸುತ್ತಾರೆ. ನಾಯಕ ಕರೆದಾಗಷ್ಟೆ ಬರುತ್ತಾರೆ, ಹೋಗೆಂದರೆ ಮತ್ತದೇ ದ್ವೀಪಕ್ಕೆ ಈಜಿಕೊಂಡು ಹೋಗುತ್ತಾರೆ.

ಅವರು ಶಕ್ತಿಶಾಲಿಗಳು, ಬಲಾಢ್ಯರು, ಸೈಂದವರು ಮತ್ತು ಯಾರನ್ನೂ ಕೊಲ್ಲಲು ಹೇಸದ ನರರೂಪಿ ರಾಕ್ಷಸರು. ಅವರಲ್ಲಿರುವ ಹೆಂಗಸರೂ ರಾಕ್ಷಸಿಯರಾಗುತ್ತಾರೆ. ಮಕ್ಕಳನ್ನು ಹೆತ್ತು ಅವರನ್ನೂ ಹೀಗೆಯೇ ದಾನವರನ್ನಾಗಿಸಿ ಬೆಳೆಸುತ್ತಾರೆ. ಭವಿಷ್ಯದಲ್ಲಿ ಮಾದನಾಯಕ ಮತ್ತು ಅವನ ವಂಶಾವಳಿ ಕೂಡಿಡುವ ಖಜಾನೆಗೆ ಕಾವಲಾಗುತ್ತಾರೆ. ನಾಯಕ ಯಾರೇ ಆದರೂ ನಿಷ್ಟೆ ಇಟ್ಟುಕೊಳ್ಳುತ್ತಾರೆ. ಅಗತ್ಯ ಬಿದ್ದರೇ ನಾಯಕನ ಪರವಾಗಿ ದಂಡು ದಾಳಿಗೆ ತೆರಳುತ್ತಾರೆ. ಅವರನ್ನು ಸದಾ ಕಾಯುವ ಕರ್ಣಪಿಶಾಚಿ ಮಾದನಾಯಕನ ಎಡಭುಜದ ಮೇಲೆ ಕೂತಿರುತ್ತದೆ. ನಾಯಕ ಮನಸಿನಲ್ಲಿ ಅಂದುಕೊಂಡರೂ ಆ ಕರ್ಣಪಿಶಾಚಿ ಆ ಸಂದೇಶವನ್ನು ಗಾವುದ ಗಾವುದ ದೂರದಲ್ಲಿರುವ ಕಡಲ ಮಧ್ಯದ ದ್ವೀಪದೊಳಗಿರುವ ರಾಕ್ಷಸ ಸಮೂಹಕ್ಕೆ ತಿಳಿಸುತ್ತದೆ. ಇದಿಷ್ಟೂ ವ್ಯವಸ್ಥೆಯನ್ನು ಮಾಡಿದ್ದ ಗುರು ತಿರುಕ.
Saakshatv aavathiyathe episode 1 continued
***
Saakshatv aavathiyathe episode
ದೊಡ್ಡಯ್ಯನಕೆರೆ ಹಾಡ್ಯದಲ್ಲಿ ಬದುಕುತ್ತಿದ್ದಾಗ ಕಾಟ ಕೊಡುತ್ತಿದ್ದ ಪೂರ್ವ ಮತ್ತು ಉತ್ತರದ ಪಾಳೆಯಗಾರರ ಮೇಲೆ ಸೇಡು ತೀರಿಸಿಕೊಳ್ಳಬೇಕು. ಇದು ತಿರುಕ ಮಾದನಾಯಕನಿಗೆ ಕೊಟ್ಟ ಎರಡನೇ ಅಪ್ಪಣೆ. ಮೊದಲನೆಯ ಅಪ್ಪಣೆ ಕೊಟ್ಟು ಅದಾಗಲೇ ಎರಡು ಮಳೆಗಾಲ ಕಳೆದಿತ್ತು. ಆದಿವಾಸಿ ಕಲ್ಲುಕುರುಬ ಜನರೀಗ ಸೂರುಗಳಲ್ಲಿ ವಾಸ ಮಾಡುವಷ್ಟು ಉತ್ತಮ ಸ್ಥಿತಿಗೆ ಬಂದಿದ್ದರು. ಕೃಷಿ ಕಲಿಯತೊಡಗಿದ್ದರು, ಹೈನುಗಾರಿಕೆ ನಡೆಯುತ್ತಿತ್ತು. ಕೋಟೆಯ ಮೂರು ಸುತ್ತುಗಳು ಮುಗಿದಿದ್ದವು. ಧೂಪದ ಮರದ ತೊಗಟೆಯ ಸೀಳನ್ನು ರಾಳದ ಅಂಟಿನೊಂದಿಗೆ ಹದಮಾಡಿ, ಸುಣ್ಣದ ಕಲ್ಲುಗಳ ಜೊತೆ ಪಾಕ ಹೊಯ್ದು ಕಾಡುಕಲ್ಲುಗಳ ನಡುವೆ ಗಾರೇ ಮಾಡಿ ಕಟ್ಟುತ್ತಿದ್ದ ಕೋಟೆ ರಣಮಾರಿಯಂತೆ ಎದ್ದು ನಿಲ್ಲತೊಡಗಿತ್ತು. ಹತ್ತು ಸಲಗಗಳು ಒಂದೇ ಸಲಕ್ಕೆ ಗುದ್ದಿದರೂ ಚೂರೇ ಚೂರು ಐಬಾಗದಷ್ಟು ಗಟ್ಟಿಮುಟ್ಟಾಗಿ ನಿಂತಿತ್ತು ಕೋಟೆ. “ಇನ್ನ ನಡೆ, ಉತ್ತರದ ಕಡೆ.. ಐದು ಬೆಟ್ಟ ಹದಿನಾರು ಹಳ್ಳ ದಾಟಿ ಹೋಗು. ಕೊನೇ ದಿಬ್ಬದಲ್ಲಿ ಒಬ್ಬ ಅಡಿಯಾಳು ಸಿಗ್ತಾನೆ, ಅವನೇ ಮುಂದಿನ ಪಾಳೆಯಪತ್ತಿನ ಮಾಹಿತಿ ಕೊಡ್ತಾನೆ. ದಂಡು ಹೊರಡಿಸು, ಹೆಂಗಸರ ಮೈ ಮುಟ್ಟಬೇಡ, ಮಕ್ಕಳ ಕಣ್ಣಿಗೆ ಬೀಳಬೇಡ. ಎರಡು ಗಂಡಾಳುಗಳನ್ನು ಊರಬಾಗಿಲಿನಲ್ಲೇ ಸೀಳಿ, ಹಸಿದ ಕರ್ಣಪಿಶಾಚಿಗೆ ರಕ್ತಕುಡಿಸು. ಹತ್ತು ಕಾಟಿ ಬಂಡಿಯಷ್ಟಾದರೂ ಸಂಗ್ರಹಿಸಿ ದೋಚಿ ತಾ..” ಮಳೆಗಾಲದ ಕೊನೆಯ ಹನಿ ನಿಂತ ದಿನ ಅಪ್ಪಣೆ ಹೊರಡಿಸಿದ್ದ ತಿರುಕ.

ಆ ರಾತ್ರಿ ಸೂಲಂಗಿ ಗುಡಿಯ ಮುಂದೆ ತನ್ನ ಸತ್ತ ತಂದೆ ತೇಮಯ್ಯನ ಬುರುಡೆಯ ಚಿಪ್ಪಿಗೆ ಚಕಮಕಿ ಪುಡಿ ಹಾಕಿ ದೀಪಬೆಳಗಿ ಆರತಿ ಎತ್ತಿದವನೇ, ಮುನ್ನೂರು ಮೈಜೆಟ್ಟಿ ಆಳುಗಳ ಪಡೆಯೊಂದಿಗೆ ಮಾದಾಪುರದ ಬೆಟ್ಟವಿಳಿದ ಮಾದನಾಯಕ. ಪಡೆಯ ಮುಂದೆ ವೀರಮಾದನ ತಮ್ಮ ಸೋಲದೇವ ಒಂದು ಗುಂಪಾಗಿ ಮತ್ತು ಜಗಜೆಟ್ಟಿ ಸೋಪಯ್ಯ ಇನ್ನೊಂದು ಗುಂಪಿನ ನೇತೃತ್ವ ವಹಿಸಿ ಸಾಗಿದರು. ಕೊನೆಯಲ್ಲಿ ಐವತ್ತು ಮೈಜೆಟ್ಟಿ ಆಳುಗಳ ಗುಂಪಿನಲ್ಲಿದ್ದ ವೀರಮಾದ. ಇಪ್ಪತ್ತು ಕಾಟಿ ಬಂಡಿಗಳು ದಂಡಿನಲ್ಲಿದ್ದವು. ಎರಡು ತಿಂಗಳಿಗೆ ಬೇಕಾದ ಗೆಣಸು, ಒಣಗಿಸಿದ ಕಡವೆ ಮಾಂಸ, ಕಾಲುಕಟ್ಟಿದ ಕಾಡುಕೋಳಿಗಳು, ಬರಗಿನ ಹಿಟ್ಟು, ಮೆಣಸಿನ ಕಾಳು ಪುಡಿ, ಮಡಿಕೆ ಕುಡಿಕೆಗಳು, ಬೆಂಕಿ ಉರಿಸಲು ಬೇಕಿದ್ದ ಚಕಮಕಿ ಪುಡಿ ಬಂಡಿಯಲ್ಲಿ ಶೇಖರಿಸಿ ಒಯ್ಯಲಾಗುತ್ತಿತ್ತು. ಈ ದಂಡಿನ ಯಾತ್ರೆಗೆ ಪರ್ಯಾಯವಾಗಿ ಕಾಡಿನ ದಾರಿಯಲ್ಲಿ ಅಗೋಚರವಾಗಿ ಬರುತ್ತಿತ್ತು ೧೦ ಮಂದಿಯ ರಕ್ಕಸ ಪಡೆ. ಅವರು ತಮಗಿಂತ ಎರಡು ದಿನ ಹಿಂದಿದ್ದಾರೆ ಎಂದು ಕರ್ಣಪಿಶಾಚಿ ವೀರಮಾದನಿಗೆ ಹೇಳಿದಾಗ, ಪಡೆ ಮೂರನೆಯ ಬೆಟ್ಟ ಹತ್ತುತ್ತಿತ್ತು. ಪಾಳೆಯದ ಗಡಿದಿಬ್ಬವನ್ನು ತಲುಪುವ ಹೊತ್ತಿಗೆ ತಮಗಿಂತ ಮೊದಲು ರಕ್ಕಸ ಪಡೆ ತಲುಪುತ್ತದೆ ಮತ್ತು ಉತ್ತರದ ಪಾಳೆಯಗಾರನ ಇಬ್ಬರು ದೃಢಕಾಯ ಸೈನಿಕರನ್ನು ಸೀಳಿ ಊರಬಾಗಿಲಿಗೆ ಕಟ್ಟಿರುತ್ತದೆ. ತನ್ನ ಭುಜದ ಮೇಲೆ ಹಸಿದು ಮಲಗಿರುವ ಕರ್ಣ ಪಿಶಾಚಿ ತೃಪ್ತಿಯಾಗುವಷ್ಟು ರುದಿರಪಾನ ಮಾಡುತ್ತದೆ ಎನ್ನುವ ಸಂಗತಿ ವೀರಮಾದನಿಗೆ ಮಾತ್ರ ಗೊತ್ತಿತ್ತು; ಬಿಟ್ಟರೇ ಕೋಟೆಯೊಳಗೆ ಅರ್ಧ ಪದ್ಮಾಸನ ಹಾಕಿ ಕುಳಿತಿದ್ದ ತಿರುಕನಿಗೆ. Saakshatv aavathiyathe episode 1 continued
***

ಆ ಉತ್ತರ ಭಾಗದ ಪಾಳೆಯಗಾರನ ರಾಜ್ಯದ ಹೆಸರು ಸುರಗಿರಿ; ಅದನ್ನು ಆಳುತ್ತಿದ್ದವನು ನಿಡಮಾಡಿ ವಂಶದ ಪೆಂಗಳರಾಯ. ಕೋಲುಮುಖದ ಗಿಡ್ಡನೆಯ ಆಕೃತಿಯಾದರೂ ಕಡುಕ್ರೂರಿ ಎಂದೆ ಕುಖ್ಯಾತನಾದ ಪಾಳೆಯಗಾರ. ಗಡಿದಿಬ್ಬದ ಬಳಿ ಮೈಜೆಟ್ಟಿ ಪಡೆ ಹಿಡಿದು ತಂದ ಸುರಗಿರಿ ಅರಮನೆಯ ಸೈನಿಕನೊಬ್ಬ ಆಯಕಟ್ಟಿನ ಜಾಗಗಳ ಬಗ್ಗೆ ಮಾಹಿತಿ ನೀಡಿದ್ದ. ಒತ್ತೆಯಾಳು ಸೈನಿಕನ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಪಡೆದುಕೊಂಡಿದ್ದ ಸೋಲದೇವ, ಅಷ್ಟೂ ರಹಸ್ಯಗಳನ್ನು ತನ್ನ ಪಡೆಗೆ ತಿಳಿಸಿದ. ರಾಜಬೀದಿಯ ಕೊನೆಯಲ್ಲಿ ಅರಮನೆಯಿದೆ. ಅರಮನೆಯ ಹಿಂದೆ ಪರಮೇಶ್ವರ ದೇವಾಲಯವಿದೆ. ಅದರ ಪಕ್ಕದಲ್ಲಿ ರಾಜಗುರುವಿನ ಮಹಲಿದೆ. ಸುರಪರದ ಅರ್ಧ ಸಂಪತ್ತು ರಾಜಗುರು ಮಹಲಿನ ಒಳಕೋಣೆಯಲ್ಲಿರುವ ಮರದ ಸಂದೂಕುಗಳಲ್ಲಿದೆ. ಆಭರಣಗಳ ಹಳದಿಲೋಹ, ಬಣ್ಣಬಣ್ಣದ ಹೊಳೆಯ ಅನರ್ಘ್ಯ ಮಣಿಗಳು, ಜರಿತಾರೆ ವಸ್ತ್ರಗಳು, ಪಚ್ಚೆ-ಹವಳ-ವಜ್ರ-ತಾಮ್ರದ ಪಾತ್ರೆ ಇತ್ಯಾದಿ. ಇನ್ನರ್ಧ ಸಂಪತ್ತು ಸೇನಾಧಿಪತಿಯ ಖಾಸಗಿ ಪಡೆಯ ಸರ್ಪಗಾವಲಿನಲ್ಲಿರುವ ಅರಮನೆಯ ಈಶಾನ್ಯ ದಿಕ್ಕಿನ ನೆಲಮಹಡಿಯಲ್ಲಿದೆ. ಮಾದನಾಯಕ ನಿರ್ಧಾರಿಸಿದ್ದ; ದೋಚಿದರೆ ಈ ಎರಡು ಕಡೆ ದೋಚಬೇಕು. ಪ್ರಜೆಗಳನ್ನು ದೋಚುವುದು ಬೇಡ. ಮುಂಜಾನೆಯ ಮೊದಲ ಕಿರಣ ನೆಲಕ್ಕೆ ಬೀಳುವ ಮೊದಲೇ ಸೋಪಯ್ಯನ ಪಡೆ ಗುರುಮಹಲಿನ ಕೆಳಗೆ ಅಡಗಿಕೊಂಡು ಸಂಚು ಹೂಡಿತ್ತು. ಖುದ್ದು ಮಾದನಾಯಕ, ತನ್ನ ತಮ್ಮ ಸೋಲದೇವನ ಜೊತೆ ಅರಮನೆಯ ಖಜಾನೆ ಕೋಣೆಗೆ ದಾಂಗುಡಿಯಿಟ್ಟ. ಎದುರು ಸಿಕ್ಕವರ ಕತ್ತು ಲಟುಕಿಸಿ ಪ್ರಜ್ಞೆ ತಪ್ಪಿಸುತ್ತಿತ್ತು ದೃಢಕಾಯ ಮೈಜೆಟ್ಟಿ ಪಡೆ. ನಿರಾತಂಕವಾಗಿ ತನ್ನದೇ ಅರಮನೆಯೇನೋ ಅನ್ನುವಷ್ಟು ಸಲೀಸಾಗಿ ನಡೆದಿದ್ದ ಮಾದನಾಯಕ. ಸೋಲದೇವನ ಸಹಿತ ಮೈಜೆಟ್ಟಿ ಪಡೆ ಅರಮನೆಯ ಮುಖ್ಯದ್ವಾರದಲ್ಲಿ ಕಾವಲಿಗಿತ್ತು. ಕೋಟೆ ಬಾಗಿಲಿನಿಂದ ಕಾವಲುಗೋಪುರದ ಪ್ರತಿ ಕಿಡಕಿಯ ಬಳಿಯೂ ಮೈಜೆಟ್ಟಿ ಪಡೆಯ ಸೈನಿಕರು ಆಕ್ರಮಿಸಿಕೊಂಡಿದ್ದರು. ನೂರಕ್ಕೂ ಹೆಚ್ಚು ಸೈನಿಕರ ಕೈಕಾಲು ಕಟ್ಟಿ ಉರುಳಿಸಲಾಗಿತ್ತು. ಆದರೆ ಇಷ್ಟರಲ್ಲಾಗಲೇ ಒಬ್ಬ ಸೈನಿಕ ಕಹಳೆ ಊದಿಬಿಟ್ಟಿದ್ದ. ಸುರಗಿರಿ ರಾಜಧಾನಿಯಲ್ಲಿ ಸಂಚಲನವುಂಟಾದ ಕ್ಷಣವದು.
Saakshatv aavathiyathe episode1

ಬೆಳ್ಳಂಬೆಳಿಗ್ಗೆ ಅರಮನೆಯ ಕಾವಲು ಸೈನಿಕರ ಜೊತೆ ಉಳಿದ ಸೈನಿಕರು ಭರ್ಜಿ ಬಲ್ಲೆಗಳನ್ನು, ಕತ್ತಿ ಗುರಾಣಿಗಳನ್ನು ಹಿಡಿದು ಬೀದಿಗಿಳಿದುಬಿಟ್ಟರು. ಇಷ್ಟರ ತನಕ ಆಯಕಟ್ಟಿನ ಜಾಗದಲ್ಲಿ ಆಕ್ರಮಿಸಿಕೊಂಡಿದ್ದ ಮೈಜೆಟ್ಟಿ ಸೈನಿಕರು ತಮ್ಮ ಬಳಿ ಇದ್ದ ಜಡಿಬೆತ್ತದ ದೊಣ್ಣೆಗಳಿಂದ ದಾಳಿಗಾರಂಭಿಸಿದರು. ನೋಡನೋಡುತ್ತಿದ್ದ ಹಾಗೇ ಸುರಗಿರಿಯ ರಾಜಬೀದಿ ರಣಾಂಗಣವಾಯಿತು. ಒಳಗೆ ಹತ್ತು ಹದಿನೈದು ಮೈಜೆಟ್ಟಿ ಆಳುಗಳೊಡನೆ ಅರಮನೆ ನುಗ್ಗಿದ ಮಾದನಾಯಕ ಈಶಾನ್ಯ ಕೋಣೆಯ ಕಡೆಗೆ ತರಾತುರಿಯಿಂದ ಓಡಿದ. ಅಲ್ಲೇ ಪೆಂಗಳರಾಯನ ಮತ್ತು ಅವನ ಹತ್ತಾರು ಉಪಪತ್ನಿಯರ ಅಂತಃಪುರವಿದೆ. ಮೈಮರೆತು ಮಲಗಿದ್ದ ಪೆಂಗಳರಾಯ ದಡಬಡಿಸಿ ಎದ್ದು ತನ್ನ ಕತ್ತಿ ಹಿಡಿದು ಮೇಲ್ಚಾವಡಿಯ ಅಂಗಳಕ್ಕೆ ಓಡಿದವನೇ, ಅಲ್ಲಿನ ದೃಶ್ಯ ಕಂಡು ಬೆಚ್ಚಿಬಿದ್ದ. ಸುರಗಿರಿಯ ರಾಜಬೀದಿಯಲ್ಲಿ ಒಂದುಕಡೆ ತೊಗಲು ಸುತ್ತಿದ್ದ ಕಾಡುಮನುಷ್ಯರು ತನ್ನ ಸೈನಿಕರನ್ನು ಬಡಿಗೆಗಳಿಂದ ಸಿಕ್ಕ ಸಿಕ್ಕಲ್ಲಿ ಬಡಿಯುತ್ತಿದ್ದಾರೆ. ಇನ್ನೊಂದು ಕಡೆ ಹಿಂಸ್ರ ಕಾಡುಕೋಣಗಳ ಹಿಂಡು ನುಗ್ಗಿ ಬರುತ್ತಿದೆ. ಅದು ಕನಸೋ ನನಸೋ ಎಂದು ತಿಳಿಯದೇ ದಿಕ್ಕೆಟ್ಟವನಂತೆ ನೋಡುತ್ತಾ ನಿಂತುಬಿಟ್ಟ ಪೆಂಗಳರಾಯ. ಆದರೆ ಸುರಗಿರಿಯ ಚಾಣಾಕ್ಷ ಸೇನಾಧಿಪತಿ ಅಮೂರ ಅದಾಗಲೇ ರಂಗಕ್ಕಿಳಿದಿದ್ದ. ಅಶ್ವಪಡೆ ಮತ್ತು ಗಜಪಡೆಗಳನ್ನು ಕಾರ್ಯಾಚರಣೆಗೆ ಇಳಿಸಿದ್ದ. ಆವತಿಯನ್ನರ ಪಾಲಿಗೆ ನಿಜವಾದ ಸಮಸ್ಯೆಯೇ ಸುರಗಿರಿಯ ಅಶ್ವಪಡೆ ಮತ್ತು ಗಜಪಡೆಗಳದ್ದಾಗಿತ್ತು. ಮದವೇರಿದಂತೆ ಸುರಗಿರಿಯ ದಳದ ಆನೆಗಳು, ಕಂಬದಂಥ ಕಾಲುಗಳಿಂದ ಮಾದನಾಯಕನ ಪಡೆಯನ್ನು ದೂಳಿಪಟಮಾಡತೊಡಗಿದ್ದವು. ಒಂದಷ್ಟು ಮೈಜೆಟ್ಟಿ ಆಳುಗಳು ಆನೆ ಕಾಲಿಗೆ ಸಿಕ್ಕಿ, ಕುದುರೆಗಳ ಗೊರಸಿಗೆ ಬೆನ್ನು ಕೊಟ್ಟು, ಈಟಿ ಬಲ್ಲೆಗಳಿಂದ ತಿವಿಸಿಕೊಂಡು ಜರ್ಜರಿತರಾಗತೊಡಗಿದ್ದರು. ಹೀಗೆಯೇ ಮುಂದುವರೆದರೇ ಅರ್ಧ ದಿನ ಕಳೆಯುವ ಮುನ್ನವೇ ಮುನ್ನೂರು ಮೈಜೆಟ್ಟಿ ಪಡೆ ನಾಮವಶೇಷಗೊಳ್ಳುತ್ತದೆ ಎಂದು ಕಂಗಾಲಾದ ಸೋಲದೇವ. ಅತ್ತ ಮೈಜೆಟ್ಟಿ ಆಳುಗಳ ತರಬೇತುದಾರರ ಸೋಪಯ್ಯ ಗುರುಮನೆಯ ಬಳಿ ಹೊಂಚಿ ಕೂತಿದ್ದವನು ಇದನ್ನೇ ಯೋಚಿಸುತ್ತಿದ್ದ. ಕೊನೆಗೆ ಏನೋ ಹೊಳೆದವನಂತೆ, ಅಲ್ಲಿನ ಉಸ್ತುವಾರಿಯನ್ನು ತನ್ನ ಶಿಷ್ಯ ಚವರನಿಗೆ ವಹಿಸಿ ಅರಮನೆಯ ಮುಖ್ಯದ್ವಾರದ ಕಡೆಗೆ ಓಡಿದ.

ಸೋಲದೇವನ ನೇತೃತ್ವದಲ್ಲಿ ಮೈಜೆಟ್ಟಿ ಪಡೆ ಅಶ್ವಪಡೆಯ ಸೈನಿಕರೊಡನೆ ಕಾದಾಟಕ್ಕೆ ಬಿದ್ದಿತ್ತು. ಮತ್ತೊಂದು ದಿಕ್ಕಿನಿಂದ ಸುರಗಿರಿಯ ಬಲಿಷ್ಟ ಗಜಪಡೆ ದಾಪುಗಾಲಿಟ್ಟು ಅರಮನೆಯ ಸನಿಹ ಬರಹತ್ತಿತು. ಸೋಪಯ್ಯನಿಗೆ ಗುರುತು ಹತ್ತಿತು. ಮೊದಲನೆಯದು, ಮೂರನೆಯದ್ದು ಮತ್ತು ಐದನೆಯ ಆನೆಗಳನ್ನು ತಾವೇ ದೊಡ್ಡಯ್ಯನ ಕೆರೆ ಹಾಡ್ಯದಲ್ಲಿದ್ದಾಗ, ಹಿಡಿದು ಪಳಗಿಸಿ ಈ ಪಾಳೆಯಗಾರನಿಗೆ ನೀಡಿದ್ದು. ಅವುಗಳನ್ನು ಪಳಗಿಸಿದ್ದರ ಗುರುತು ಅವನಿಗೂ ಇದೆ, ಅವುಗಳಿಗೂ ಇದೆ. ತಕ್ಷಣವೇ ಮಿಂಚಿನಂತೆ ಎಗರಿದ ಸೋಪಯ್ಯ ಅಲ್ಲೇ ಹತ್ತಿರದ ಒಂದು ಕಟ್ಟಡದ ಗೋಡೆಯನ್ನು ಚಂಗನೆ ಏರಿ ವಿಚಿತ್ರ ಧ್ವನಿಯಲ್ಲಿ ಶಬ್ಧ ಮಾಡುತ್ತಾ ಆ ಮೂರು ಆನೆಗಳ ಗಮನ ಸೆಳೆದ. ಸದ್ದು ಬಂದ ಕಡೆಗೆ ನೋಡಿದ ಆನೆಗಳಿಗೂ ಗುರುತು ಹತ್ತಿ ಅವೂ ಪ್ರತಿಯಾಗಿ ಘೀಳಿಟ್ಟವು. ಇತ್ತಲಿಂದ ಸೋಪಯ್ಯ ಮತ್ತೊಂದು ಕೂಗು ಹಾಕಿ ಸೂಚನೆ ರವಾನಿಸಿದ, ಸೂಚನೆ ತಲುಪಿತು ಎನ್ನುವಂತೆ ತಲೆಯಾಡಿಸಿದ ಆ ಮೂರು ಆನೆಗಳು ಬಂದ ದಾರಿಯಲ್ಲಿ ತಿರುಗಿ ನಿಂತು ತಮ್ಮ ಜೊತೆಗೆ ಓಡಿ ಬರುತ್ತಿದ್ದ ಸುರಗಿರಿಯ ಸೈನಿಕರ ಮೇಲೆ ಪ್ರಹಾರ ಆರಂಭಿಸಿದವು. ಸೋಪಯ್ಯನ ಚಾಣಾಕ್ಷತನದ ಯೋಜನೆ ಫಲ ಕೊಟ್ಟಿತ್ತು.

ಇತ್ತ ಸೋಲದೇವನ ಪಡೆಯ ವೀರಾವೇಶದ ಹೋರಾಟದಿಂದ ಅರ್ಧ ಗಳಿಗೆಯಲ್ಲೇ ಅಶ್ವಪಡೆ ಮಣ್ಣುಮುಕ್ಕಿತು. ಸೋಲದೇವನಿಗೆ ಕಾಟಿಗಳ ಹಿಂಡೂ ನೆರವು ನೀಡಿದವು. ಬಲಿಷ್ಟ ಗಾತ್ರದ ಕಾಡುಕಾಟಿಗಳನ್ನು ನೋಡಿ ಬೆದರಿದ ಕುದುರೆಗಳು ಕೆನೆದು ದಿಕ್ಕುಪಾಲಾಗಿ ಓಡಿದವು. ನಿಯಂತ್ರಣ ತಪ್ಪಿದ ಸೈನ್ಯವನ್ನು ಮತ್ತೆ ಹತೋಟಿಗೆ ತರಲು ಸೇನಾಧಿಪತಿ ಅಮೂರ ಹರಸಾಹಸ ಪಡುತ್ತಿರುವಾಗಲೇ ಅತ್ತ ಮೇಲ್ಚಾವಡಿಯಲ್ಲಿ ಮಾದನಾಯಕ, ಪೆಂಗಳರಾಯನ ಬೆನ್ನಿಗೆ ಕೊಡಲಿ ಹಿಡಿದು ನಿಂತಿದ್ದ. ಅನಿವಾರ್ಯವಾಗಿ ಅಮೂರ ಕತ್ತಿ ಕೆಳಗಿಳಿಸಿ ತನ್ನ ಸೈನ್ಯವನ್ನು ಶರಣುಮಾಡಿಸಬೇಕಾಯಿತು. ಮುಂದಿನ ಮಧ್ಯಾಹ್ನದ ವರೆಗೂ ಸುರಗಿರಿಯ ಸೈನಿಕರು ಅರಮನೆಯ ಖಜಾನೆ, ಅಮೂಲ್ಯವಾದ ವಸ್ತು, ವಸ್ತ್ರ, ಶಸ್ತ್ರಾಯುಧ, ದೀರ್ಘ ಕಾಲ ಕೆಡದೇ ಉಳಿಯುವ ಆಹಾರದ ಬುತ್ತಿ ಇತ್ಯಾದಿಗಳನ್ನು ಕಾಟಿ ಬಂಡಿಗಳಿಗೆ ತುಂಬಿಸಿದರು. ಇನ್ನೊಂದು ಕಡೆಯಿಂದ ಗುರುಮಹಲಿನ ಬಳಿ ಹೊಂಚಿ ನಿಂತಿದ್ದ ಸೋಪಯ್ಯನ ಶಿಷ್ಯ ಚವರನೂ ಗುರುಮಹಲನ್ನು ಆಕ್ರಮಿಸಿ ಅಲ್ಲಿದ್ದ ಸಂಪತ್ತುಗಳನ್ನು ಸೂರೆಗೈದು, ರಾಜಗುರುವನ್ನು ಬಂಧಿಸಿ ಕರೆತಂದಿದ್ದ. ಅರಮನೆಯ ಅಂತಃಪುರದಲ್ಲಿದ್ದ ಪೆಂಗಳರಾಯರ ಪತ್ನಿಯರ ಕೋಣೆಯಲ್ಲಿಯೇ ಪೆಂಗಳರಾಯನನ್ನೂ, ಸೇನಾಧಿಪತಿ ಅಮೂರರನ್ನು ಬಂಧಿಸಿ ಇಡಲಾಗಿತ್ತು. ರಾಜಗುರುವನ್ನೂ ಅಲ್ಲಿಗೆ ತಂದು ಕೂರಿಸಲಾಯಿತು. ಸುರಗಿರಿಯನ್ನು ಒಂದಿಡೀ ದಿನ ತನ್ನ ಸುಪರ್ದಿಯಲ್ಲಿಟ್ಟುಕೊಂಡಿದ್ದ ಮೈಜೆಟ್ಟಿ ಪಡೆ, ಇಪ್ಪತ್ತು ಕಾಟಿ ಬಂಡಿ ಸಂಪತ್ತಿನ ಜೊತೆ ಒಂದಷ್ಟು ಒತ್ತೆಯಾಳುಗಳ ಹೆಗಲ ಮೆಲೆಯೂ ದೋಚಿದ್ದ ಸಾಮಾನು ಸರಂಜಾಮು ಹೊರಿಸಿ ಸುರಗಿರಿಯ ಗಡಿ ಬಿಟ್ಟಿತು. ಸೋಲದೇವನ ರಕ್ಷಣೆಯಲ್ಲಿ ಕಾಟಿ ಬಂಡಿಗಳು ಗಡಿ ದಾಟಿದ ನಂತರ ಮಾದನಾಯಕ ಇಶಾರೆ ಮಾಡಿದ, ಅವನ ಭುಜದಲ್ಲಿ ಕೂತಿದ್ದ ಮಂಗಟ್ಟೆ ವಿಚಿತ್ರ ಧ್ವನಿ ಮಾಡಿ ಹಾರಿ ಹೋಯಿತು. ಆಗಸದಲ್ಲಿ ಒಂದು ಸುತ್ತು ಹಾರಿ ಲಾಗ ಹಾಕಿ ಬಂದು ಮತ್ತೆ ಮಾದನಾಯಕನ ಭುಜದ ಮೇಲೆ ಕೂತಿತು. ಆಗ ಬಂದರು ರಾಕ್ಷಸರು ಸುರಗಿರಿಯ ಕೋಟೆಯೊಳಗೆ. ಮಾದನಾಯಕ ನೆಮ್ಮದಿಯಿಂದ ನಿರ್ಬೀತಿಯಿಂದ ಪೆಂಗಳರಾಯನ ಕುದುರೆಯ ಮೇಲೆಯೇ ಕುಳಿತು ರಾಜಬೀದಿಯಲ್ಲಿ ಶಾಂತವಾಗಿ ಹಾದು ಹೋದ. ಅವನ ಹಿಂದೆ ಸೋಪಯ್ಯ, ಚವರ ಮತ್ತು ಹತ್ತು ಮೈಜೆಟ್ಟಿಗಳು ಹೆಜ್ಜೆಹಾಕಿದರು. ಮುಂದಿನ ನಲ್ವತ್ತೆಂಟುಗಂಟೆಗಳ ಕಾಲ, ಅಂದರೆ ಆವತಿಯನ್ನು ಮೈಜೆಟ್ಟಿ ಪಡೆ ಎರಡನೇ ಬೆಟ್ಟ ಆರನೆಯ ಹಳ್ಳ ದಾಟುವ ತನಕ, ಇಡೀ ಸುರಗಿರಿಯ ಅರಮನೆಯನ್ನು ಒತ್ತೆಯಿಟ್ಟುಕೊಳ್ಳುತ್ತಾರೆ ಆವತಿ ಸಿಂಹಾಸನದ ನಿಷ್ಟ ರಾಕ್ಷಸ ಪಡೆ.
***

(ಮುಂದುವರೆಯುವುದು)

#ವಿಪ್ರಭಾ

#ಆವತೀಯತೆ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd