ಆವತೀಯತೆ: ಅಧ್ಯಾಯ-೧:

1 min read
Saakshatv aavathiyathe episode1

ಆವತೀಯತೆ: ಅಧ್ಯಾಯ-೧: ( Saakshatv aavathiyathe episode1 )

ಒತ್ತಾದ ಕಾಡಿನ ನಡುವೆ ತೂರಿ ಇಳೆಯ ಸ್ಪರ್ಷಿಸಿದ ಬಿಸಿಲಕೋಲು-ಆರಂಭ: Saakshatv aavathiyathe episode1

ಇಂದಿಗೆ ಸಹಸ್ರ ಸಂವತ್ಸರಗಳ ಹಿಂದೆ, ದಕ್ಷಿಣ ಭಾರತದ ಅತಿ ದುರ್ಗಮವಾದ ದಟ್ಟಾರಣ್ಯದ ನಡುವೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಗುಂಪುಗೂಡಿ ಬದುಕುತ್ತಿದ್ದರು ಆದಿವಾಸಿಗಳು ಕಲ್ಲುಕುರುಬರು. ಅವರು ವಾಸಿಸುತ್ತಿದ್ದ ಪ್ರದೇಶವೇ ದೊಡ್ಡಯನ ಕೆರೆ ಹಾಡ್ಯ. ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಅವಿಭಕ್ತ ಕುಟುಂಬಗಳು ನೆಲೆ ಕಂಡುಕೊಂಡಿದ್ದ ಆ ಹಾಡ್ಯದ ಬುಡಕಟ್ಟು ನಾಯಕನ ಹೆಸರು ತೇಮಯ್ಯ; ಅವನ ಪತ್ನಿ ಲಕ್ಕವ್ವೆ. ಈ ದಂಪತಿಗಳಿಗೆ ಹುಟ್ಟಿದ್ದ ತುಂಬು ಚಂದಿರನಂತಹ ಮಗನೇ ಆವತಿ ನಾಡನ್ನು ಕಟ್ಟಿದ ವೀರಮಾದ ನಾಯಕ.
Saakshatv aavathiyathe episode1

ಅವರು ಕಾಡಿನ ರಕ್ಷಕರು. ಅವರಿಗೆ ವನದೇವಿ ಸೂಲಂಗಿ ಕೊಟ್ಟ ವರವೆಂದರೇ ಅವರಿಗೆ ಕಾಡಿನ ಕ್ರೂರಪ್ರಾಣಿಗಳ ಭಾಷೆ ಅರ್ಥವಾಗುತ್ತಿತ್ತು. ಹುಲಿ, ತೋಳ, ಕುರ್ಕ, ಕಿರುಬಗಳೂ ಅವರ ತಂಟೆಗೆ ಬರುತ್ತಿರಲಿಲ್ಲ. ತೇಮಯ್ಯ ಕಾಡಿನ ಉತ್ಪನ್ನಗಳಾದ ಗೆಣಸು ಗೆಡ್ಡೆ, ಜೇನು, ಬಿದಿರು, ಸೊಪ್ಪು, ಚಕ್ಕೆ, ಬೇರು, ಬಳ್ಳಿಮೆಣಸುಕಾಳು, ಮೂಲಿಕೆಗಳನ್ನು ಆಗಾಗ ಇವರ ಹಾಡ್ಯಕ್ಕೆ ಬರುತ್ತಿದ್ದ ಪಾಳೆಯಗಾರರ ಪ್ರತಿನಿಧಿಗಳಿಗೆ ತಲುಪಿಸುತ್ತಿದ್ದ. ಮಾದ ಬೆಳೆದು ಯೌವನಾವಸ್ಥೆಗೆ ಬಂದ ನಂತರ ಅದೇ ಪಾಳೆಯಗಾರರಿಗೆ ಆನೆಗಳನ್ನು ಪಳಗಿಸಿ ಮಾರಾಟ ಮಾಡಲು ಶುರುಮಾಡಿದ.

ಅಲ್ಲಿಯವರೆಗೂ ಅವರು ಕೇವಲ ಕಾಡಿನ ಆಹಾರದ ಮೂಲಗಳನ್ನು ಮಾತ್ರ ತಮ್ಮ ಬದುಕು ನಡೆಸಲು ಉಪಯೋಗಿಸುತ್ತಿದ್ದರು. ಮಾದನಿಂದ ಆನೆ ಪಡೆದುಕೊಂಡ ಉತ್ತರ ಮತ್ತು ಪೂರ್ವದ ಪಾಳೆಯಗಾರರು ರಾಗಿ, ತೊಗರಿ ಮತ್ತು ಹುರುಳಿಗಳನ್ನು ತಂದುಕೊಟ್ಟು ಅದರ ರುಚಿ ತೋರಿಸಿದರು. ಆದರೆ ಇದನ್ನು ಬೆಳೆಯುವುದು ಹೇಗೆಂದು ಗೊತ್ತಿಲ್ಲದ ಆ ಜನ ಕೇವಲ ಈ ಧಾನ್ಯಗಳಿಗಾಗಿ ತಮ್ಮ ಪ್ರಾಣವನ್ನು ಪಣವಿಟ್ಟು ಆನೆಗಳನ್ನು ಹಿಡಿದುಕೊಡಲಾರಂಬಿಸಿದರು. ಯಾವುದೇ ಕಲಹಗಳನ್ನೂ ಒಲ್ಲದ, ಕುಟಿಲ ಬುದ್ದಿಯ ಸೋಂಕೂ ತಾಗದ, ನಿಷ್ಕಲ್ಮಶ ಮನಸಿನ, ಶಾಂತಿ ಪ್ರಿಯರಾದ ಆದಿವಾಸಿ ಕಾಡುಜನರ ಮೇಲೆ ಕ್ರಮೇಣ ಪುಂಡು ಪಾಳೆಯಗಾರರ ಅತ್ಯಾಚಾರ ಹೆಚ್ಚಾಗತೊಡಗಿತು. ಅಪರೂಪದ ಲಾವಣ್ಯವತಿಯರಾಗಿದ್ದ ಈ ಸಮುದಾಯದ ಹೆಣ್ಣುಗಳ ಮೇಲೆ ಕಣ್ಣು ಹಾಕಿದ ತುಡುಗು ಹೈಕಳ ಬಲಾತ್ಕರಕ್ಕೆ ಹಾಡ್ಯಕ್ಕೆ ಹಾಡ್ಯವೇ ತತ್ತರಿತೊಡಗಿತು. ತಂದೆಯಂತೆಯೇ ವೀರನಾದರೂ ತಂದೆಯಷ್ಟೆ ಶಾಂತಸ್ವಭಾವದ ಮಾದ ಇದರಿಂದ ನೊಂದು ಹಾಡ್ಯದಾಚೆಯ ಬನದೇವಿ ಸೂಲಂಗಿ ಗುಡಿಯ ಮುಂದೆ ನಿಂತು ಮೌನವಾಗಿ ರೋದಿಸುತ್ತಿದ್ದ. ಇಷ್ಟೆಲ್ಲಾ ಆಗುತ್ತಿದ್ದರೂ ಹಾಡ್ಯದ ಜನರ ಶೌರ್ಯ ಕೆರಳಿರಲಿಲ್ಲ. ತಮ್ಮ ಹಾಡ್ಯದ ತುದಿಯಲ್ಲಿ ಎಲ್ಲಾದರೂ ಕುದುರೆ ಕೆನೆದರೇ ಬೆಚ್ಚಿ ಬೀಳುತ್ತಿದ್ದ ಈ ಜನ, ಪಾಳೆಯಗಾರರ ಸೈನಿಕರ ಖತ್ತಿ, ಈಟಿ, ಗುರಾಣಿ, ಪರಶುಗಳ ಹರಿತ ಲೋಹ ಕಂಡು ಹಿಮ್ಮೆಟ್ಟುತ್ತಿದ್ದರು.

ಯಾವ ಅನ್ಯಾಯದ ಸರಣಿಗಾದರೂ ಒಂದು ಅಂತ್ಯ ಆಗಲೇಬೇಕು. ಅದಕ್ಕೊಂದು ಕಾಲದ ಪಕ್ವತೆ ಬೇಕು. ಇತಿಹಾಸ ಸೃಷ್ಟಿಯಾಗುವ ಗಳಿಗೆ ಅದಾಗಿಯೇ ಒದಗಬೇಕು. ಅದಕ್ಕೊಂದು ಕಾರ್ಯಕಾರಣ ಸಂಬಂಧ ಬೇಕು. ಹಾಡ್ಯದ ಬುಡಕಟ್ಟು ಜನರ ಅಭಿಮಾನ-ಸ್ವಾಭಿಮಾನಕ್ಕೆ ದಕ್ಕೆಯಾದ ಒಂದು ದಿನ ಮಾದನಾಯಕ ವೀರ ಮಾದನಾಯಕನಾದ. ಬನದೇವಿಯ ಗುಡಿಯಲ್ಲಿ ಕಲ್ಲಾಗಿ ಕೂತಿದ್ದ ಸೂಲಂಗಿ ಮಾತಾಡಿದಳು. ಅದುವರೆಗೂ ಹಾಡ್ಯದ ಜನ ನೋಡದ ಬಿಳಿ ತೊಗಲಿನ ಒಬ್ಬ ಸಾಧಾರಣ ಮನುಷ್ಯ ಮಾರ್ಗದರ್ಶಕನಂತೆ ಬಂದ. ಹಾಡ್ಯಕ್ಕೆ ಬೆಂಕಿ ಹತ್ತಿಕೊಂಡಿತು. ಪೂರ್ವದ ಪಾಳೆಗಾರನ ರುಂಡ ಚೆಂಡಾಡಿ ನೆತ್ತರ ಹನಿಗಳ ಹೊಳೆ ದೊಡ್ಡಯ್ಯನ ಕೆರೆ ಒಡಲು ಸೇರಿತು. ಹಾಡ್ಯಕ್ಕೆ ಬೆಂಕಿ ಬಿತ್ತು; ತನ್ನ ಬದುಕಿನಲ್ಲಿ ಒಂದೇ ಒಂದು ಜೀವಜಂತುವಿಗೂ ನೋವು ಮಾಡದೇ ಬಾಳಿದ್ದ, ಪರೋಪಕಾರಿ ಸ್ನೇಹಜೀವಿ ಹಾಡ್ಯದ ನಾಯಕ ತೇಮಯ್ಯ ಪ್ರತಿಕಾರಕ್ಕೆ ಬಲಿಯಾದ. ಸಾಯುವ ಮೊದಲು ತನ್ನ ಜನರ ಭವಿಷ್ಯಕ್ಕಾಗಿ ಹೊಸನಾಡ ಕಟ್ಟಲು ತನ್ನ ಮಗನಿಂದ ಭಾಷೆ ಪಡೆದುಕೊಂಡ. ಹಾಡ್ಯದ ಕಲ್ಲುಕುರುಬ ಆದಿವಾಸಿಗಳು ನಾಯಕ ಮಾದನ ಜೊತೆ ತಮ್ಮ ಜನ್ಮಸ್ಥಾನದಿಂದ ಗುಳೆಹೊರಟರು. ದೊಡ್ಡಯ್ಯನ ಕೆರೆ ಹಾಡ್ಯ ಇತಿಹಾಸದ ಪುಟಗಳಲ್ಲಿ ಮರೆಯಾಯಿತು. ಅದಾಗಿ ಈಗ ಏಳು ಸಂವತ್ಸರಗಳು ಗತಿಸಿವೆ.
***

Saakshatv aavathiyathe episode1

-ನೆತ್ತರ ರಂಗು ಮೆತ್ತಿಕೊಂಡಿದ್ದ ಗೋದೂಳಿ ನೇಸರದ ಕಡು ಕೇಸರಿ ಕಿರಣ ಕಾಂತಿ ಮಾದನಾಯಕನ ಎಡಗೆನ್ನೆಯ ಮೇಲೆ ಬಿದ್ದ ಆ ಕ್ಷಣ, ಆವತಿಯ ಜನಪದದ ವೀರ ಕಟ್ಟಾಳು ಮಾದನಾಯಕ ಒಂಬತ್ತನೆ ಹಿರಿಬಾವಿ ತೋಡಿಸುತ್ತಿದ್ದ. ಅವನದ್ದೇ ಕಲ್ಲುಕುರಬ ಸಮುದಾಯದ ಇಪ್ಪತ್ತು ಮೈಜೆಟ್ಟಿಗಳು ಅಂದಿನ ಕೆಲಸದ ಕೊನೆಯ ಶಾಸ್ತ್ರಗಳನ್ನು ಮುಗಿಸುತ್ತಿದ್ದರು. ಮಾದನಾಯಕನ ಅಣತಿಯಂತೆ ನಿರ್ಮಾಣವಾಗುತ್ತಿದ್ದಿದ್ದು ಹತ್ತಾಳು ಆಳದ ಹಿರಿಬಾವಿ. ಮಾದಾಪುರ ಕೋಟೆಯ ಆಗ್ನೇಯ ದಿಕ್ಕಿನಲ್ಲಿ ಕೇವಲ ಹತ್ತು ಜೋಪಡಿಗಳ ಕುಡಿಯುವ ಮತ್ತು ದಿನಬಳಕೆಯ ನೀರಿಗಾಗಿ ಇಷ್ಟು ದೊಡ್ಡ ಬಾವಿ ಕಟ್ಟಿಸಬೇಕೇಕೆ? ಅನ್ನುವುದು ಮಾದನಾಯಕನ ಪ್ರಶ್ನೆಯಾಗಿತ್ತು. ಆದರೆ ನಾಯಕ ಕೇಳುವ ಯಾವ ಪ್ರಶ್ನೆಗೆ ತಿರುಕ ತೃಪ್ತಿಕರ ಉತ್ತರ ಕೊಟ್ಟಿದ್ದಾನೆ? ಅಲ್ಲೆಲ್ಲೋ ದೂರದ ಹಿಮಶಿಖರದ ಗುಹೆಯೊಳಗೆ ಕೊರೆವ ಚಳಿಯಲ್ಲಿ ಬರಿಮೈನಲ್ಲಿ ಕೂತು ತಪಸ್ಸು ಮಾಡುತ್ತಿದ್ದನಂತೆ ತಿರುಕ. ಎಷ್ಟು ವರ್ಷ ಹಾಗೆ ಕೂತಿದ್ದನೋ ಅವನ ದೇಹದಂತೆ ಮನಸು ಹೃದಯಗಳು ಕೊರಡಾಗಿಬಿಟ್ಟಿವೆಯೇನೋ ಅಂದಕೊಳ್ಳುತ್ತಾನೆ ಒಮ್ಮೊಮ್ಮೆ. ತಿರುಕನ ಮುಖದಲ್ಲಿ ಭಾವನೆಗಳೇ ಕಾಣಿಸುವುದಿಲ್ಲ. ಅವನು ನಗುವುದೂ ಇಲ್ಲ; ಕೋಪ ಮಾಡಿಕೊಂಡಿದ್ದನ್ನು ಈ ವರೆಗೆ ಕಂಡಿದ್ದಿಲ್ಲ. ತಿರುಕನ ಮಾತಿಗೆ ಅಹುದಹುದೆನ್ನುತ್ತಾ ಏಳು ಮಳೆಗಾಲ ಕಳೆದೇ ಆಯ್ತಲ್ಲ. ಮಾದನಾಯಕ ದಿಬ್ಬದ ಮೇಲೆ ಕೂತಿದ್ದ ತಿರುಕನ ಕಡೆಗೆ ನೋಡಿದ.

“ಹದಿನೆಂಟು ಮೊಳ ಅಗಲ, ಅಳತೆ ತಪ್ಸಿದ್ರೆ ಜಾಗೃತೆ.. ಪೀಡೆ ಅತ್‌ ಕಡೆ ನೋಡು ಎರಡಿಂಚು ಏರಿ ಅದೆ. ಸಮತಟ್ಟು ಬರಬೇಕು. ಉದ್ದ ಅಗಲ ಒಂದೇ ಸಮ ಇದ್ರೇ ನೋಡು ಗಂಗವ್ವ ಏರಿ ಹತ್ತೋದು ಕಣಿವೆ ಇಳಿಯೋದು..” ತಿರುಕ ತನ್ನ ಪಾಡಿಗೆ ತಾನೆಂಬಂತೆ ಮೈಜೆಟ್ಟಿ ಆಳುಗಳಿಗೆ ಏನೇನೋ ಸೂಚನೆ ಕೊಡುತ್ತಾ ಕೂತಿದ್ದಾನೆ. ಮಾದನಾಯಕ ತಿರಕನ ಕಡೆಯೇ ನೋಡುತ್ತಾ ಅವನ ಅಣತಿಯಂತೆ ಈವರೆಗೆ ಕಟ್ಟಿಸಿದ ಎಂಟು ದಿಕ್ಕುಗಳಿಗೆ ಎಂಟು ಹಿರಿಬಾವಿಗಳ ಕುರಿತು ಯೋಚಿಸತೊಡಗಿದ. ಈಗ್ಗೆ ಏಳು ಮಳೆಗಾಲಗಳ ಮೊದಲು ಈ ಬೋಳುಗುಡ್ಡಕ್ಕೆ ವಲಸೆ ಬಂದಾಗ ಇಲ್ಲಿ ಕೋಟೆ ಕಟ್ಟುತ್ತೇವೆಂದಾಗಲೀ, ದಿಕ್ಕಿಗೊಂದು ಬಾವಿ ತೋಡಿಸುತ್ತೇವೆಂದಾಗಲೀ ನಮ್ಮ ಜನಗಳಲ್ಲಿ ಯಾರೊಬ್ಬರೂ ಕನಸಲ್ಲೂ ಅಂದಿಕೊಂಡಿರಲಿಲ್ಲ. ದೊಡ್ಡಯ್ಯನ ಕೆರೆ ಹಾಡ್ಯದ ವಿಸ್ತಾರಕ್ಕಿಂತ ಹತ್ತು ಪಟ್ಟು ವಿಸ್ತಾರದ ಪ್ರದೇಶವನ್ನು ಸುತ್ತುವರೆದಿರುವ ಕೋಟೆ ನಿರ್ಮಾಣವಾಗಿದೆ. ಈ ಏಳು ಸಂವತ್ಸರಗಳ ನಂತರ ವರ್ಷಕ್ಕೊಂದು ಸುತ್ತಿನಂತೆ ಏಳು ಸುತ್ತಿನ ಕರಿಗಲ್ಲಿನ ಅಬೇಧ್ಯ ಕೋಟೆ ಎದ್ದು ನಿಂತಿದೆ. ಕೋಟೆಯೊಳಗೆ ಆಯಕಟ್ಟಿನ ತುದಿಗಳಲ್ಲಿ ಎಂಟು ಬಾವಿಗಳು ಮತ್ತು ಕೋಟೆಯ ಹೊರಗೆ ಅದರಿಂದ ಸಂಪರ್ಕ ಸಾಧಿಸಿಕೊಂಡ ಮತ್ತೆ ಹದಿನಾರು ಹಿರಿನಾಲೆಗಳು, ಹಿರಿನಾಲೆಗಳಿಂದ ಮೂವತ್ತೆರಡು ಕಿರಿಸಾಲೆಗಳು, ಕೆಳಗಿನ ಹೊಲಗಳಿಗೆ ಕಿರಿಸಾಲೆಗಳಿಂದ ಹರಿವ ಅರವತ್ತನಾಲ್ಕು ಬದುಕುಪ್ಪೆಗಳ ಕಾಮಗಾರಿ ಪೂರ್ತಿಯಾಗಿದೆ.

ಮೊದಮೊದಲು ಈ ತಿರುಕ ಹೇಳಿದ್ದು ಯಾರಿಗೂ ಅರ್ಥವಾಗುತ್ತಿರಲಿಲ್ಲ. ಆದರೆ ದೊಡ್ಡಯ್ಯನ ಕೆರೆ ಹಾಡ್ಯದ ಕಲ್ಲುಕುರುಬ ಸಮುದಾಯ ಮಾದನಾಯಕನ ಮಾತು ಕೇಳುತ್ತಿತ್ತು. ಮಾದನಾಯಕ ಸಂಪೂರ್ಣವಾಗಿ ತಿರುಕನಿಗೆ ಶರಣಾಗತನಾಗಿದ್ದ. ತಿರುಕ ಕೇವಲ ಅಣತಿಗಳನ್ನು ಜಾರಿ ಮಾಡುತ್ತಾ ಕೂರಲಿಲ್ಲ, ಮಾದನಾಯಕನ ಜೊತೆಯಲ್ಲೇ ನಿಂತು ಇಂಚಿಂಚೂ ಅಳತೆ ತಪ್ಪದಂತೆ ಕೆಲಸ ಮಾಡಿಸಿದ. ಗುರು ತಿರುಕನ ಅಣತಿಯಂತೆ ನಿರ್ಮಾಣವಾದ ಪ್ರತಿ ಬಾವಿಗಳು ಮಳೆಗಾಲದಲ್ಲಿ ತುಂಬಿ ಹಿರಿನಾಲೆ- ಕಿರಿಸಾಲೆ ಮತ್ತು ಬದುಕುಪ್ಪೆಗಳ ಒಡಲು ತುಂಬಿಸಿದವು. ಮೊದಲ ವರ್ಷವೇ ಎರಡು ಬಾವಿ ನಿರ್ಮಾಣವಾಯಿತು; ಆಮೇಲೆ ಉಳಿದವುಗಳು. ಬೋಳು ಗುಡ್ಡಕ್ಕೆ ಗುಡಾರ ಕಿತ್ತುಕೊಂಡು ಬಂದ ಮೊದಲ ವರ್ಷ ಬೇಟೆ ಮಾಂಸ, ಗೊಡ್ಡರಿಷಿಣದ ಹಿಟ್ಟಿನ ರೊಟ್ಟಿ, ಕೋಲುಗೆಣಸು, ಒಣಗಿಸಿದ ಕಾಡುಬಾಳೆ, ಕಾರೆ, ಸಂಪಿಗೆ, ಮುಂತಾದ ಹಣ್ಣುಗಳನ್ನು ತಿಂದು ಬದುಕಿದ ಕಲ್ಲುಕುರುಬ ಸಮುದಾಯ ಎರಡನೆಯ ವರ್ಷದ ವೇಳೆಗೆ ಕೃಷಿಕರಾದರು. ಮಳೆಗಾಲ ಶುರುವಿಗೂ ಮೊದಲಿನ ಬಿರುಬೇಸಿಗೆಯಲ್ಲಿ ಇದ್ದಕ್ಕಿದ್ದ ಹಾಗೇ ಅವರ ನಡುವಿಂದ ಮಾದನಾಯಕನ ತಮ್ಮ ಸೋಲದೇವನ ಜೊತೆ ಕಣ್ಮರೆಯಾದ ಗುರು ತಿರುಕ ಒಂದು ತಿಂಗಳ ನಂತರ ಸೋಲದೇವನ ತಲೆಯ ಮೇಲೊಂದು, ತನ್ನ ತಲೆಯ ಮೇಲೊಂದು ಜೊಂಡುಹುಲ್ಲಿನ ಚೀಲದಲ್ಲಿ ವಿವಿಧ ತರಹೇವಾರಿ ತೃಣಕಾಳುಗಳೊಂದಿಗೆ ಪ್ರತ್ಯಕ್ಷನಾಗಿದ್ದ. ಆವತಿಯನ್ನರು ಆನಂತರ ಕಲಿತ ಹೊಸ ಪಾಠವೇ ಕೃಷಿ.

ಎರಡನೇ ಮಳೆಯ ನಂತರ ಮೈಜೆಟ್ಟಿ ಆಳುಗಳನ್ನು ಜೊತೆಗಿಟ್ಟುಕೊಂಡು ವ್ಯವಸಾಯದ ಪಾಠ ಕಲಿಸಿದ ತಿರುಕ ಸ್ವತಃ ತಾನೇ ಬೆನ್ನಿಗೆ ಕವೆಗೂಟ ಕಟ್ಟಿಕೊಂಡು ಉಳುಮೆ ಮಾಡಿದ. ಉತ್ತ ಜಾಗದಲ್ಲಿ ಕಾಳುಗಳನ್ನು ಎರಚಿಸಿದ. ಮೂರು ತಿಂಗಳ ನಂತರ ಹಾಗೆ ಎರಚಿ ಬಂದ ವಿಶಾಲ ಬಯಲಿನಲ್ಲಿ ಬಂಗಾರು ಬಣ್ಣದ ತೆನೆಗುಚ್ಛಗಳು ನಾಟ್ಯವಾಡಿದವು. ಆವತಿಯನ್ನರು ಬರಗು, ರಾಗಿ, ಸಾಮೆಗಳ ಕೃಷಿ ಕಲಿಕೆ ಕಲಿತಿದ್ದು ಹೀಗೆ. ಮೊದಲ ಬೆಳೆ ಮಳೆಗಾಲದ ನೀರಿನಿಂದಾದರೇ, ಬೆಟ್ಟದ ಮೇಲಿನ ಬಾವಿಗಳಿಂದ ಕೆಳಗೆ ಇಳಿದು ಹಿರಿನಾಲೆ, ಕಿರಿಸಾಲೆಗಳ ಹಾದು ಬದುಕುಪ್ಪೆಗಳೆಂಬ ಸಾಲುಹಳ್ಳಗಳಲ್ಲಿ ತುಂಬಿಕೊಂಡ ನೀರಿನಿಂದ ಎರಡನೇ ಬೆಳೆ ಬೆಳೆಯಲು ಸಾಧ್ಯವಾಯಿತು. ತಿರುಕ ಯಾಕೆ ಅಷ್ಟೊಂದು ಹೊಂಡಗಳನ್ನು ತೋಡಿಸಿದ ಅನ್ನುವುದು ಮಾದನಾಯಕನಿಗೂ ಆವತಿಯನ್ನರಿಗೂ ಅರ್ಥವಾಗಿದ್ದು ಆಬಳಿಕವೇ. ಆ ವ್ಯವಸ್ಥೆಯನ್ನು ಅವರು ಕೇಳಿಯೂ ಅರಿಯರು ಅಷ್ಟು ವ್ಯವಸ್ಥಿತವಾಗಿತ್ತು ತಿರುಕ ಹೇಳಿಕೊಟ್ಟಿದ್ದ ಜಲಶೇಖರಣೆ ಕಾರ್ಯಾಚರಣೆ.

Saakshatv aavathiyathe episode1

ಕೋಟೆಯೊಳಗಿನ ದೊಡ್ಡ ಬಾವಿಯಿಂದ ಕೋಟೆಯ ಸುತ್ತಲಿನ ಕಂದಕಕ್ಕೆ ಹರಿದ ನೀರು ನಂತರ ಹೊರಗಿನ ಸಣ್ಣ ಮೂರ್ನಾಲ್ಕು ಕಿರು ಸರೋವರಗಳಿಗೆ ಸಂಪರ್ಕ ಕಲ್ಪಿಸಿತ್ತು. ಹಿರಿನಾಲೆಗಳೆಂದು ಕರೆಸಿಕೊಳ್ಳುವ ಈ ಸಣ್ಣ ಸರೋವರಗಳಿಂದ ಹಳ್ಳಗಳನ್ನು ಕೊರೆಸಿ ಮತ್ತೊಂದಷ್ಟು ಕಿರು ತೋಡುಗಳಿಗೆ ಸಂಪರ್ಕ ಸೃಷ್ಟಿಸಲಾಗಿತ್ತು. ಆ ಕಿರುತೋಡುಗಳನ್ನೇ ಕಿರಿಸಾಲೆಗಳೆಂದು ಕರೆಯಲಾಯಿತು. ಇದಕ್ಕೊಂದು ಬಾಗಿಲು ರಚಿಸಿ, ಬೇಕಾದರೆ ಮಾತ್ರ ನೀರು ಹರಿಸಬಹುದಾದ ವ್ಯವಸ್ಥೆ ಮಾಡಿ ಬದುಕುಪ್ಪೆಗಳನ್ನು ನಿರ್ಮಿಸಲಾಯಿತು. ಬಾವಿಯಿಂದ ತುಂಬಿ ತುಳುಕಿದ ನೀರು ಕಂದಕಕ್ಕೆ ದುಮುಕಿ ಹಿರಿನಾಲೆಗೆ ಹರಿದರೂ, ಅದರಿಂದಾಚೆಗೆ ಹಿರಿನಾಲೆಯಿಂದ ಕಿರಿಸಾಲೆಗೆ ಮತ್ತು ಕೊನೆಯಲ್ಲಿ ಬದುಕುಪ್ಪಿಗಳಿಗೆ ಹರಿಯಬೇಕಿದ್ದರೆ ಅಡೆಬಾಗಿಲು ತೆರಯಲೇಬೇಕಿತ್ತು. ಹದಿನೆಂಟು ಆಳು ಅಗಲದ ಹಿರಿನಾಲೆ ಮತ್ತು ಹತ್ತು ಆಳು ಅಗಲದ ಕಿರಿಸಾಲೆಗಳು ಕೋಟೆಯ ಕೆಳಗೆ ಹತ್ತಾರು ಕೆರೆಗಳಂತೆ ನಿರ್ಮಿತವಾಯಿತು. ಅದರಾಚೆಗಿನ ವಿಶಾಲ ಬಯಲಿನಲ್ಲಿ ನೂರಾರು ಬದುಗುಪ್ಪೆಗಳು ಹಳ್ಳಗಳಂತೆ ಹರಿದು ನೀರಿನ ಸಮೃದ್ಧಿ ಸಾಧಿಸಿತು.

ಈಗ ಏಳು ಮಳೆಗಾಲದ ನಂತರ ಬೋಳುಬೆಟ್ಟದ ಎಂಟೂ ದಿಕ್ಕಿನಲ್ಲಿ ವಿಶಾಲವಾದ ವ್ಯವಸಾಯದ ಬಯಲುಗಳಿವೆ, ಹತ್ತಾರು ಹಿರಿನಾಲೆಗಳು, ನೂರಾರು ಕಿರಿಸಾಲೆಗಳು, ಸಾವಿರಾರು ಬದುಗುಪ್ಪೆಗಳಿವೆ. ಹಿರಿನಾಲೆಗಳು, ಕಿರಿಸಾಲೆಗಳ ಸುತ್ತಮುತ್ತ ತರಹೇವಾರಿ ಕಾಡು ಮರಗಳನ್ನು ನೆಟ್ಟು ಬೆಳೆಸಲು ತಿರುಕ ಅಣತಿ ಮಾಡಿದ್ದ. ಅವೆಲ್ಲವೂ ಈಗ ತಲೆ ಎತ್ತಿ ಹೂ ಹಣ್ಣು ಬಿಡುತ್ತಾ ನಿಂತಿವೆ. ಕೋಟೆಯ ಮೂರು ಮಗ್ಗುಲಿಗೆ ಮಾವು, ಹಲಸು, ಪೇರಳೆ, ನೇರಳೆ, ಪನ್ನೇರಲೆ, ಕೆಂಡಸಂಪಿಗೆ, ಕದಂಬ, ಹುಣುಸೆ, ಜಾಯಿಕಾಯಿ, ದೂಪ, ಹೊಂಗೆ, ರಂಜೆ, ದಾಲ್ಚಿನ್ನಿ, ದೇವದಾರು, ಶ್ರೀಗಂಧ, ಸುರಹೊನ್ನೆ, ತೇಗ, ಮತ್ತಿ, ದೇವಕಣಗಿಲೆ ಮುಂತಾದ ಮಹಾವೃಕ್ಷಗಳ ಉದ್ಯಾನವನ ನಿರ್ಮಾಣವಾಗಿದೆ.

ಈ ಏಳು ವರ್ಷಗಳಲ್ಲಿ ಆವತಿಯನ್ನರು ತೃಣಧಾನ್ಯ ಕೃಷಿ, ಕಾನುಕುರಿ ಕಾಟಿ ಹೈನುಗಾರಿಕೆ ಮತ್ತು ಸಾಲುಹಟ್ಟಿಗಳಲ್ಲಿ ಬಾಳುವ ನವನಾಗರೀಕತೆಯ ಪಾಠ ಕಲಿತಿದ್ದಾರೆ. ಕಲಿಸಿದ್ದು ಮಾತ್ರ ಪೂರ್ತಿಯಾಗಿ ಬಟ್ಟೆಯನ್ನೂ ಹಾಕಲಾರದ ಹೊಟ್ಟೆ ತುಂಬ ಸರಿಯಾಗಿ ಉಣ್ಣಲೂ ಒಲ್ಲದ ತಿರುಕ. ಆವತಿಯನ್ನರು ಈಗ ಕಲ್ಲುಕುರುಬ ಆದಿವಾಸಿಗಳಲ್ಲ. ದೊಡ್ಡಯ್ಯನ ಕೆರೆ ಹಾಡ್ಯದ ಅನಾಗರೀಕ ಜನರಲ್ಲ. ಅವರೀಗ ಆನೆಗಳನ್ನು ಪಳಗಿಸಿ ಪುಂಡು ಪಾಳೆಯಗಾರರಿಗೆ ಮಾರಿ, ಅವರು ಕೊಡುವ ರಾಗಿಗಾಗಿ ಆಸೆಗಣ್ಣಿನಲ್ಲಿ ಎದುರುನೋಡುತ್ತಾ, ಬೇಟೆ ಮಾಂಸವನ್ನು ಅರಬರೆ ಸುಟ್ಟು ತಿಂದು ಬದುಕುವ ಜನರಲ್ಲ. ತುಡುಗು ಪಾಳೆಯಗಾರರು, ಅವರ ಮಂತ್ರಿ, ಸಾಮಂತ, ಸೈನಿಕರ ಕಾಮತೃಷೆಗೆ ಹೈರಾಣಾಗುತ್ತಿದ್ದ ಚೆಲುವೆಯರೀಗ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಕಾನುಕುರಿಗಳ ಚರ್ಮ ಸುಲಿದು ಹದ ಮಾಡಿ ಅರೆಮೈಗೆ ಸುತ್ತಿಕೊಳ್ಳುತ್ತಿದ್ದ ದಿನಗಳನ್ನು ದಾಟಿ ಈಗ ಕಾಡುಹತ್ತಿಯ ಬಟ್ಟೆ ತೊಡುತ್ತಾರೆ. ಮೆದುವಾದ ಹತ್ತಿ ಹೂವುಗಳನ್ನು ಬಿಸಿನೀರಿನಲ್ಲಿ ನೆನೆಸಿ ಹದವಾಗಿ ಒಣಗಿಸಿ ಬಡಿದು ವಿವಿಧ ತರಹದ ಅರಿವೆ ಮಾಡುವ ವಿದ್ಯೆ ಹೇಳಿಕೊಟ್ಟಿದ್ದಾನೆ ಗುರು ತಿರುಕ. ಜೊತೆಗೆ ಮಳೆಗಾಲ ಮುಗಿಯುತ್ತಿದ್ದ ಹಾಗೆ ಸುಲಿಗೆಗೆ ಹೊರಡುವ ವೀರಮಾದನ ಮೈಜೆಟ್ಟಿ ಸೈನ್ಯ ದೂರದೂರದ ಪಾಳೆಯಗಳಿಗೂ ತಲುಪಿ ದೋಚಿ ತರುವ ಸಂಪತ್ತಿನಲ್ಲಿ ಅದ್ಭುತವಾದ ವಸ್ತ್ರಗಳೂ ಇರುತ್ತವೆ. ವೀರ ಮಾದ ಅವುಗಳನ್ನು ತನ್ನ ಜನರಿಗೆ ಸಮನಾಗಿ ಹಂಚಿಬಿಡುತ್ತಾನೆ. ಈಗೀಗ ಆವತಿಯನ್ನರು ಕಾಡಿನ ಜೌಗು ಪ್ರದೇಶದಲ್ಲಿ ಹಿಪ್ಪುನೇರಳೆ ತೋಪು ಮಾಡಿಕೊಂಡು ರೇಷ್ಮೆ ಹುಳವನ್ನು ಕೊಬ್ಬಿಸಿ, ಬಿಸಿ ನೀರಿಗೆ ಹಾಕಿ ಚಂದ್ರಿಕೆಗಳಲ್ಲಿ ರೇಷ್ಮೆ ನೂಲು ತೆಗೆಯುವ ಕಲೆಯನ್ನೂ ಕಲಿತಿದ್ದಾರೆ. ಈ ಜನರು ತಮ್ಮನ್ನು ತಾವು ಆವತಿಯನ್ನರು ಎಂದು ಅಭಿಮಾನದಿಂದ ಕರೆದುಕೊಳ್ಳುತ್ತಾರೆ. ತಮ್ಮ ನಾಯಕ ವೀರ ಮಾದನ ಬಗ್ಗೆ ಅವರಿಗೆ ರಾಜನಿಷ್ಟೆಯಿದೆ. ಇನ್ನು ವೀರಮಾದನಿಗೆ ನಾಯಕತನವನ್ನು ಆರೋಪಿಸಿ ಹೆಜ್ಜೆ ಹೆಜ್ಜೆಗೂ ಜೊತೆ ನಿಂತ ತಿರುಕನ ಗುರುಕಾರುಣ್ಯವ ನೆನೆದು ಕಣ್ಣೀರುಗರೆದು ಕೃತಜ್ಞತೆ ಸಲ್ಲಿಸುತ್ತಾರೆ. ಅವರ ಪಾಲಿಗೆ ಗುರುತಿರುಕ ಸೂಲಂಗಿಯ ವರಪುತ್ರ ಕೊರಮಜ್ಜನ ಅಂಶ.
***

ಏಳು ಸಂವತ್ಸರಗಳ ಹಿಂದೆ ಇದ್ದ ಬೆಟ್ಟ ಈಗ ಬೋಳುಬೆಟ್ಟವಾಗಿ ಉಳಿದಿಲ್ಲ; ಇಲ್ಲಿ ಆವತಿಯನ್ನರ ನವನಾಗರೀಕತೆಯ ವಸತಿ ಸಮುಚ್ಛಯವೆದ್ದಿದೆ. ಕರಿಕಲ್ಲುಗಳನ್ನು ಮಣ್ಣಿನ ಪಾಕದಲಿ ಕಟ್ಟಿ ನಿಲ್ಲಿಸಿದ ಗೋಡೆಗಳು, ಗರಿಸೋಗೆಯ ಛಾವಣಿಯ ಸಾಲು ಹಟ್ಟಿಗಳಿವೆ. ಒಂದಕ್ಕೊಂದು ಹೊಂದಿಕೊಂಡಂತೆ ಎರಡೂ ಬದಿಯಲ್ಲಿ ಇರುವ ನೂರಾರು ಹಟ್ಟಿಗಳ ಸಾಲು, ಎದುರು ಕಾಟಿಬಂಡಿ ಚಲಿಸುವಷ್ಟು ಅಗಲದ ದಾರಿ. ಈ ತರಹದ ಐದಾರು ಬೀದಿಗಳು ಕೋಟೆಯೊಳಗಿನ ರಾಜಧಾನಿ ಮಾದಾಪುರದೊಳಗಿವೆ. ಪೂರ್ವದ ಕೊನೆಯಲ್ಲಿ ಇಪ್ಪತ್ತೆರಡು ಅಂಕಣದ ಬಿಳಿಗಲ್ಲಿನ ಭವಂತಿ ನಿರ್ಮಾಣವಾಗುತ್ತಿದೆ. ಭವಂತಿಯ ಬಹುತೇಕ ಕೆಲಸಗಳು ಮುಗಿದಿವೆ, ನೈಋತ್ಯದಲ್ಲಿ ಈಜುಕೊಳ, ವಾಯುವ್ಯದ ಪಾಕಶಾಲೆಯ, ಉತ್ತರದಲ್ಲಿ ಸಭಾಂಗಣ ಮತ್ತು ಉಪ್ಪರಿಗೆಯಲ್ಲಿ ತೆರೆದ ಛಾವಡಿಗಳ ಕೆಲಸ ನಡೆಯುತ್ತಿದೆ. ಎಲ್ಲವೂ ಹೀಗೆಯೇ ನಡೆಯಬೇಕು ಎಂದು ಕರಾರುವಕ್ಕಾಗಿ ಸೂಚನೆ ಕೊಟ್ಟು ಕಟ್ಟಿಸುತ್ತಿದ್ದಾನೆ ತಿರುಕ. ನಾಯಕನಿಗೆ ಅರಮನೆಯೇ ಏಕೆ ಬೇಕು? ತಾನೂ ತನ್ನ ಜನರಂತೆಯೇ ಕರಿಕಲ್ಲಿನ ಸಣ್ಣ ಹಟ್ಟಿಯೊಂದನ್ನು ಕಟ್ಟಿ ಬದುಕುತ್ತೇನೆ ಎಂದಿದ್ದ ವೀರಮಾದನಿಗೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ ತಿರುಕ. ಅವನ ಕೆಲವು ನಿರ್ಧಾರಗಳೇ ಹಾಗೇ, ಸರ್ವಾಧಿಕಾರಿಯಂತೆ ಹೇಳಿ ಮಾಡಿಸುತ್ತಾನೆ. ಮಾದನಾಗಲೀ ಉಳಿದವರಾಗಲೀ ಅದಕ್ಕೆ ಎದುರಾಡುವಂತಿಲ್ಲ, ಎದುರು ಮಾತನ್ನು ಆಡುವುದೂ ಇಲ್ಲ.

Saakshatv aavathiyathe episode1

ವೀರಮಾದನಿಗೆ ಹೀಗೊಂದು ಅತಿಭವ್ಯ ಭವಂತಿ ಕಟ್ಟಿಸಿಕೊಡುತ್ತಿರುವ ಗುರು ತಿರುಕ ಮಾತ್ರ ತನ್ನ ಸಣ್ಣ ಬಡಕಲು ಹಟ್ಟಿಯನ್ನು ತಾನೇ ಸ್ವತಃ ಕಟ್ಟಿಕೊಂಡಿದ್ದ. ಅದು ಮಾದಾಪುರ ಊರಿನಿಂದ ಮಾತ್ರವಲ್ಲ, ಕೋಟೆಯಿಂದಲೇ ಹೊರಗಿತ್ತು. ಈ ಬೋಳುಗುಡ್ಡಕ್ಕೆ ಮಾದನಾಯಕ ಮತ್ತು ಕಲ್ಲುಕುರುಬ ಸಮುದಾಯದ ಜನರೊಂದಿಗೆ ವಲಸೆ ಬಂದಾಗ, ಎಲ್ಲರನ್ನೂ ಬಿಟ್ಟು ದಕ್ಷಿಣ ದಿಕ್ಕಿನಲ್ಲಿ ಗುಡ್ಡದ ಸಣ್ಣ ಇಳಿಜಾರಿನಲ್ಲಿ ಗಳಿತ ಹುಳಿಸಿಹಿ ಹುಣುಸೇ ಹಣ್ಣುಗಳನ್ನು ತಿನ್ನುತ್ತಾ ಕೂತು ಇಡೀ ರಾತ್ರಿ ಕಳೆದಿದ್ದ ತಿರುಕ, ಬೆಳಿಗ್ಗೆ ಅದೇ ಜಾಗದಲ್ಲಿ ತಾನು ರಾತ್ರಿ ತಿಂದಿದ್ದ ಹುಣುಸೆಯ ಬೀಜಗಳನ್ನು ಮಣ್ಣಿನಲ್ಲಿ ನೆಟ್ಟಿದ್ದ. ಇದಾಗಿ ಏಳು ವರ್ಷಗಳ ಕಳೆದಿವೆಯಲ್ಲ ಈಗ ಅವೇ ಹುಣುಸೇ ಗಿಡಗಳ ತೋಪೇ ತಿರುಕನಿಗೆ ತವರು ಮನೆಯೆನಿಸಿದೆ. ಈ ತೋಪಿನಲ್ಲಿ ತಿರುಕನ ಬಡಕಲು ಗುಡಿಸಲಿದೆ. ಪ್ರತೀ ಮಳೆಗಾಲಕ್ಕೂ ಮೊದಲು ತಿರುಕ ತಾನೊಬ್ಬನೇ ಯಾರ ಸಹಾಯವನ್ನೂ ಅವಲಂಬಿಸದೇ ಗೋಡೆಯ ಮರದ ಹಲಗೆಗಳಿಗೆ ಹೊಸಮಣ್ಣು ಮೆತ್ತಿ, ನೆತ್ತಿಯ ಛಾವಣಿಗೆ ಹೊಸ ಗರಿಗಳನ್ನು ಹಾಸುತ್ತಾನೆ. ಆವತಿಯನ್ನರಿಗೆ ಹತ್ತಿ ಮತ್ತು ರೇಷ್ಮೆ ಬಟ್ಟೆಯನ್ನು ಉಡಿಸಿದ ತಿರುಕ ಇಂದಿಗೂ ಜಪ್ಪಿ ಹದಮಾಡಿದ ಕಾನುಕುರಿಯ ತೊಗಲನ್ನೇ ಬಟ್ಟೆಯಂತೆ ಸೊಂಟಕ್ಕೆ ಕಟ್ಟಿಕೊಳ್ಳುತ್ತಾನೆ. ಎಂಥ ರಣ ಚಳಿಯಲ್ಲಿಯೂ ತಿರುಕ ಮೈ ತುಂಬ ಬಟ್ಟೆ ಹಾಕಿದ್ದನ್ನು ಕಂಡವರಿಲ್ಲ.

ತಿರುಕ ದಿನದಲ್ಲಿ ಉಣ್ಣುತಿದ್ದಿದ್ದು ಒಂದೇ ಹೊತ್ತು, ಅದೂ ಎರಡು ಪೂರ್ತಿ ಮತ್ತು ಮೇಲೊಂದು ಚೂರು ಬರಗಿನ ರೊಟ್ಟಿ ಅಥವಾ ಎರಡು ಪೂರ್ತಿ ಮುಷ್ಟಿಗಾತ್ರದ ಮತ್ತು ಮೇಲೊಂದು ಸಣ್ಣ ತುಣುಕು ರಾಗಿ ಮುದ್ದೆ. ತಿರುಕ ಮಾಂಸ ಸೇವಿಸುತ್ತಿರಲಿಲ್ಲ, ಕೋಟೆಯೊಳಗೆ ಉಣ್ಣದೇ ಇದ್ದ ದಿನ ತನ್ನ ಹುಣಸೇ ತೋಪಿನಲ್ಲಿ ತಾನೇ ಬೆಳೆದ ಮರಗೆಣಸೋ, ಕಾಡುಗೆಣಸೋ ಅಗೆದು ತೊಳೆದು ತಿಂದು, ತೊರೆಯ ನೀರು ಕುಡಿದು ಮಲಗುತ್ತಿದ್ದ. ಮಾದನಾಯಕನಾಗಲೀ ಮತ್ತು ಆವತಿಯನ್ನರಾಗಲೀ ತಿರಕನ ಬದುಕಿನ ಪದ್ಧತಿಯ ಕುರಿತು ಪ್ರಶ್ನಿಸುವುದನ್ನೇ ಬಿಟ್ಟುಬಿಟ್ಟಿದ್ದರು. ಹಾಗೆ ಪ್ರಶ್ನಿಸಿದರೆ ತಿರುಕನ ಅವತಾರ ಪೂರ್ತಿಯಾಗುತ್ತಿತ್ತು. ಆವತಿಯನ್ನರಲ್ಲಿ ಯಾರಾದರೊಬ್ಬರು ತಿರುಕನನ್ನು ಪ್ರಶ್ನಿಸಿದ ದಿನವೇ ಅವನ ದೇಹಾಂತ್ಯ, ಇದು ತಿರುಕನಿಗೆ ಸೂಲಂಗಿ ಕೊಟ್ಟಿದ್ದ ವರವೂ ಹೌದು-ಶಾಪವೂ ಹೌದು. ತಿರುಕ ಹೊತ್ತಲ್ಲದ ಹೊತ್ತಲ್ಲಿ ಎದ್ದು ಕಾಡು ತಿರುಗುತ್ತಿದ್ದ, ಅವನ ಶಕ್ತಿಕೇಂದ್ರ ದೊಡ್ಡಯ್ಯನ ಕೆರೆ ಹಾಡ್ಯದ ಬಳಿಯ ಗವಿಗೆ ಹೋಗಿ ವಾರಗಟ್ಟಲೇ ತಪಸ್ಸಿಗೆ ಕೂರುತ್ತಿದ್ದ. ಆಗೆಲ್ಲಾ ಮೊದಮೊದಲು ಮಾದನಾಯಕನ ಸಹಿತ ಆವತಿಯ ಪ್ರತಿ ಪ್ರಜೆಗಳು ಕಂಗಾಲಾಗಿದ್ದು ಇದೆ. ಬರಬರುತ್ತಾ ತಿರುಕನ ಅಭ್ಯಾಸಗಳನ್ನು ಅರಿತು ಅದಕ್ಕೆ ಹೊಂದಿಕೊಂಡಿರುವುದನ್ನು ಆವತಿಯನ್ನರು ಕಲಿತಿದ್ದರು. ಗುರು ತಿರುಕ ಆವತಿಗೆ ಹೊಂದಿಯೂ ಹೊಂದಿಕೊಳ್ಳದಂತೆ, ಅಲ್ಲಿ ಇದ್ದೂ ಇಲ್ಲದಂತೆ, ಎಲ್ಲಾ ವಿದ್ಯಮಾನಗಳನ್ನು ಒಟ್ಟಾರೆ ಹೊರಗಿನಿಂದ ನಿರ್ದೇಶಿಸುವ ಪಾತ್ರದಂತೆ ವ್ಯಕ್ತವಾಗಿದ್ದ. ಎಲ್ಲಾದರೂ ಸರಿ, ಹೇಗಾದರೂ ಬದುಕಲಿ; ಆದರೆ ಗುರು ತಮ್ಮನ್ನು ತೊರೆದು ಹೋಗದಿರಲಿ ಎನ್ನುವ ಅದಮ್ಯ ಬಯಕೆ ಆವತಿಯ ಜನರೆಲ್ಲರದ್ದಾಗಿತ್ತು.
***

Saakshatv aavathiyathe episode1

ಮಾದಾಪುರದ ಸಾಲು ಹಟ್ಟಿಗಳ ಮುಂದೆ ಮತ್ತು ಹಿಂದೆ, ಸಾಧ್ಯವಾದಷ್ಟು ಕಡೆಗೆಲ್ಲಾ ಗಜನಿಂಬೆ, ಕಿತ್ತಳೆ, ಬಾಳೆ, ಬೇಸೊಪ್ಪು, ನುಗ್ಗೆ, ತೆಕ್ಕೆರೆ ಸೌತೆ ಬಳ್ಳಿ, ಚೌಡಳಿಕಾಯಿ, ತಿಂಗಳವರೆ ಮತ್ತು ತೊಂಡೆ ಬಳ್ಳಿಗಳ ಹಬ್ಬಿದ ಚಪ್ಪರ, ಬಿಳಿಖಾರಿ (ಬೆಳ್ಳುಳ್ಳಿ) ಗೆಡ್ಡೆ, ಕೇನೇ ಗೆಡ್ಡೆ, ಅರಿಷಿಣ, ಕೆಂಪುಶುಂಠಿ ಗೆಡ್ಡೆಗಳನ್ನು ಬೆಳೆಸುತ್ತಾರೆ ಆವತಿಯನ್ನರು. ಹೀಗೆ ಬೆಳೆದ ಯಾವ ಪದಾರ್ಥಗಳನ್ನು ಅವರು ಏಕಾಏಕಿ ಕೊಯ್ದು ತಿನ್ನುವಂತಿಲ್ಲ. ಕೋಟೆಯ ಪಶ್ಚಿಮ ದಿಕ್ಕಿನಲ್ಲಿರುವ ಸೂಲಂಗಿ ಗುಡಿಯ ಮುಂದೆ ತಾವು ಬೆಳೆದ ಎಲ್ಲಾ ತರಕಾರಿಗಳನ್ನು ತಿಂಗಳಿನ ಒಂದು ಹುಣ್ಣಿಮೆ ಮತ್ತು ಮತ್ತೊಂದು ಅಮವಾಸ್ಯೆಯ ದಿನ ಗುಡ್ಡೆ ಹಾಕಬೇಕು. ಆ ದಿನ ಊರ ಮುಖಂಡ ಮಾದನಾಯಕ ಗುಡಿಯೊಳಗಿನ ಸೂಲಂಗಿ ಎದುರಿನ ಹರಿತ ಮೂತಿ ಕಲ್ಲಿನ ಚೂಪುತುದಿಗೆ ತನ್ನ ಬಲಗೈ ಹೆಬ್ಬೆರಳ ಕೊನೆಯನ್ನು ಗಟ್ಟಿಯಾಗಿ ಊರಿ ಕುಯ್ದುಕೊಳ್ಳುತ್ತಾನೆ. ಚಿಮ್ಮುವ ರಕ್ತದ ನಾಲ್ಕಾರು ಹನಿಗಳು ಮಡಿಕೆಯಲ್ಲಿ ಹಿಡಿಯುವ ತಿರುಕ ಅದಕ್ಕೆ ನೀರು ಮಿಶ್ರ ಮಾಡುತ್ತಾನೆ. ನಂತರ ನಾಯಕನ ಆ ರಕ್ತಮಿಶ್ರಿತ ನೀರನ್ನು ಆವತಿಯನ್ನರು ಬೆಳೆದ ತರಕಾರಿಗಳ ಮೇಲೆ ಎರಚಲಾಗುತ್ತದೆ. ಅದಾದ ನಂತರ ಪ್ರತೀ ಮನೆಯವರಿಗೂ ಸರಿಸಮವಾದ ಪಾಲು ಮಾಡಿಕೊಡಲಾಗುತ್ತದೆ. ಮುಂದಿನ ಹದಿನೈದೂ ದಿನ ಆ ತರಕಾರಿಗಳನ್ನು ಮಾತ್ರ ಅವರು ತಮ್ಮ ಆಹಾರ ತಯಾರಿಕೆಗೆ ಬಳಸಬೇಕು. ಈ ಪದ್ಧತಿಯ ಅರ್ಥ ಆವತಿಯ ನಾಯಕನಾದ ವೀರ ಮಾದ ತನ್ನ ರಕ್ತವನ್ನು ಹರಿಸಿ ತನ್ನ ಜನರ ಸಹಬಾಳ್ವೆ, ಸಮಪಾಲು ಮತ್ತು ಸಹಜೀವನದ ಕ್ರಮನಿರ್ವಹಣೆಗೆ ಬದ್ಧನಾಗಿದ್ದಾನೆ ಎಂದರ್ಥ. ಸೂಲಂಗಿಗೆ ಪ್ರತೀ ಹುಣ್ಣಿಮೆ ಮತ್ತು ಅಮವಾಸ್ಯೆಗೆ ನಾಯಕನ ರಕ್ತತರ್ಪಣ ಸಲ್ಲಲೇಬೇಕು. ಇದರಿಂದ ನಾಯಕನ ಬಲವರ್ಧನೆಯಾಗುತ್ತದೆ ಮತ್ತು ನಾಯಕನ ರಕ್ತ ಚಿಮುಕಿಸಿದ ತರಕಾರಿ ಸೇವಿಸುವ ಆವತಿಯನ್ನರು ನಾಯಕನ ಮೇಲೆ ತಮ್ಮ ನಿಷ್ಟೆಯನ್ನು ಎಂದಿಗೂ ಸಡಿಲಿಸುವಂತಿಲ್ಲ ಎನ್ನುವುದು ಅವರ ನಂಬಿಕೆ ಮತ್ತು ಆಚರಣೆ. ತರಕಾರಿಗಳ ವಿಲೇವಾರಿಯ ನಂತರ ತಾವೇ ಸಾಕಿದ ಮುದಿಯಾದ ಕಾನುಕುರಿ, ಕಡವೆಗಳನ್ನು ಬಲಿಕೊಡುತ್ತಾರೆ. ಅದರ ತೊಗಲು ಹರಿದು ಮಾಂಸದ ಪಾಲು ವಿಲೇವಾರಿಯಾಗುತ್ತದೆ. ಅರ್ಧದಷ್ಟು ಮಾಂಸವನ್ನು ಒಣಗಿಸಿ ಸಂಗ್ರಹಿಸಲಾಗುತ್ತದೆ. ಈ ಸಂದರ್ಭದಲ್ಲಿ ತಿರುಕನೂ ತನ್ನ ಹುಣಸೇ ತೋಪಿನಲ್ಲಿ ಬೆಳೆದ ವಿವಿಧ ಗೆಣಸು ಗೆಡ್ಡೆಗಳನ್ನು ತಂದು ಸೂಲಂಗಿಗೆ ನೈವೇಧ್ಯ ಅರ್ಪಿಸಿ ಜನರಿಗೆ ಹಂಚುತ್ತಾನೆ.

ಆವತಿಯನ್ನರು ಕಾಡು ಕೋಳಿ, ಕಾನು ಕುರಿ ಮತ್ತು ಕಡವೆಗಳನ್ನು ಹಾಲಿಗಾಗಿ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಈ ಪರಂಪರೆಯನ್ನು ಅವರು ದೊಡ್ಡಯ್ಯನ ಕೆರೆ ಹಾಡ್ಯದಲ್ಲಿದ್ದಾಗಿನಿಂದ ಪಾಲಿಸಿಕೊಂಡು ಬಂದಿದ್ದಾರೆ. ಈಗ ಕೋಟೆಯೊಳಗೆ ಸೂರು ಕಟ್ಟಿಕೊಂಡರೂ ತಮ್ಮ ಹಳೆಯ ಪರಂಪರೆ ಮರೆತಿಲ್ಲ. ಹಾಗಂತ ಅವರು ಇವುಗಳನ್ನು ತಮ್ಮ ಹಟ್ಟಿಯಲ್ಲಿ ಕಟ್ಟಿ ಸಾಕುವುದಿಲ್ಲ. ಸ್ವತಂತ್ರವಾಗಿ ಕಾಡಿನೊಳಗೆ ಬೆಳೆಯಲು ಬಿಡುತ್ತಾರೆ. ಯಾವುದೇ ವನ್ಯಪ್ರಾಣಿಗಳನ್ನೂ ಪಳಗಿಸುವುದನ್ನು ಬಲ್ಲ ಇವರು ತಾವು ಸಾಕುವ ಪ್ರಾಣಿಗಳನ್ನು ತಾವಿದ್ದಲ್ಲೇ ಕರೆಸಿಕೊಳ್ಳುತ್ತಾರೆ. ಕಾಡಿನ ಮಧ್ಯೆ ಬದುಕುವ ಕಾನುಕುರಿ, ಜಿಂಕೆ, ಕಡವೆಗಳು, ಇವರು ಕೂಗಿ ಧ್ವನಿ ಹೊರಡಿಸುತ್ತಿದ್ದ ಹಾಗೇ ಬೆಟ್ಟ ಹತ್ತಿ ಕೋಟೆಯ ಹಿತ್ತಿಲ ಬಾಗಿಲಿಗೆ ಬಂದು, ದಿಡ್ಡಿ ಬಾಗಿಲು ದಾಟಿ ನಿಲ್ಲುತ್ತವೆ. ಆವತಿಯನ್ನರು ಮಣ್ಣಿನ ಮಡಿಕೆಗಳಲ್ಲಿ ಕಾನುಕುರಿ ಮತ್ತು ಕಡವೆಗಳ ಹಾಲು ಕರೆಯುತ್ತಾರೆ. ತಮ್ಮ ನಿತ್ಯ ಬಳಕೆಗೆ ಮತ್ತು ಮಕ್ಕಳು ಮರಿಗಳಿಗೆ ಈ ಹಾಲು ಕುಡಿಸಿ ದಷ್ಟಪುಷ್ಟವಾಗಿ ಬೆಳೆಸುತ್ತಾರೆ. ಆದರೆ ನಿಜವಾದ ಆವತಿಯನ್ನರ ತಾಕತ್ತಿರುವುದೇ ಇವರು ಕುಡಿಯುವ ಕಾಟಿಹಾಲಿನಲ್ಲಿ. ಪ್ರತಿನಿತ್ಯ ಐವತ್ತು ಕೇಜಿಯಷ್ಟು ಸೊಪ್ಪು ಸೆದೆ ತಿಂದು ಬದುಕುವ ಕಾಟಿ ಅಥವಾ ಕಾಡೆಮ್ಮೆಯನ್ನು ಪಳಗಿಸುವುದು ಅಷ್ಟು ಸುಲಭದ ಮಾತಲ್ಲ. ಆನೆಗಳನ್ನು ಪಳಗಿಸುವಷ್ಟೇ ಶ್ರಮ ಇದಕ್ಕೆ ಬೇಕು. ಒಮ್ಮೆ ಹಿಡಿದು ಪಳಗಿಸಿ ನಂತರ ಇವುಗಳನ್ನು ಕಾಡಿಗೆ ಬಿಡುವಂತಿಲ್ಲ. ಇದಕ್ಕಾಗಿಯೇ ಕೋಟೆಯ ಹೊರಗೆ ಕಿರುಸಾಲೆಯ ಪಕ್ಕದ ಸಾಲು ಮರಗಳ ವನದಲ್ಲಿ ಕೊಟ್ಟಿಗೆ ಕಟ್ಟಿಸಲಾಗಿದೆ. ಕಾಡೆಮ್ಮೆಯ ಹಾಲು ಕರೆದು ಹೈನುಗಾರಿಕೆ ಮಾಡುವ ಆವತಿಯನ್ನರು, ಕಾಟಿಯ ಗಟ್ಟಿ ತಂಬುಹಾಲಿಗೆ ಮೂರರಷ್ಟು ಪ್ರಮಾಣದ ನೀರು ಬೆರೆಸಿ, ಕಾಸಿ, ಒಡೆಸಿ ಮೊಸರು ಮಾಡುತ್ತಾರೆ. ಮೊಸರು ಕಡೆದು, ಬೆಣ್ಣೆ ತೆಗೆದು ಮಜ್ಜಿಗೆ ಮಾಡುತ್ತಾರೆ. ಕೊನೆಯಲ್ಲಿ ಬೆಣ್ಣೆ ಕಾಯಿಸಿ ತುಪ್ಪ ಮಾಡಿಕೊಳ್ಳುತ್ತಾರೆ. ಈ ಹಾಲು, ಮೊಸರು, ಬೆಣ್ಣೆ, ತುಪ್ಪ ತಿಂದೇ ಆವತಿ ಗಂಡಸರು ಮತ್ತು ಹೆಂಗಸರು ಆರಡಿಯಷ್ಟು ಎತ್ತರದ ದಷ್ಟಪುಷ್ಟ ಶರೀರ ಹೊಂದಿದ್ದಾರೆ. ಆವತಿಯ ಮುಖಂಡ ವೀರ ಮಾದ ಬರೋಬ್ಬರಿ ಏಳಡಿ ಎತ್ತರವಿದ್ದಾನೆ. ಇಡೀ ಆವತಿಯಲ್ಲಿ ಬಡಕಲು ಶರೀರ ಹೊಂದಿರುವ ಏಕಮಾತ್ರ ಜೀವ ತಿರುಕ. Saakshatv aavathiyathe episode1

Saakshatv aavathiyathe episode1

ಸೂಲಂಗಿಗೆ ತಿಂಗಳಲ್ಲಿ ಎರಡು ನೈವೇಧ್ಯ ಅರ್ಪಣೆಯಾಗುತ್ತಲ್ಲ ಅದೇ ರಾತ್ರಿ ವೀರಮಾದ ತನ್ನೊಂದಿಗೆ ಹತ್ತಿಪ್ಪತ್ತು ಮೈಜೆಟ್ಟಿ ಆಳುಗಳನ್ನು ಕರೆದುಕೊಂಡು ಕಾನು ನುಗ್ಗುತ್ತಾನೆ. ಆ ರಾತ್ರಿ ಅವರು ಸೂಲಂಗಿಯನ್ನು ನೆನೆದು ಕಡ ಕಟ್ಟಿದರೇ ಒಂದೋ ಆನೆ ಅಥವಾ ಕಾಟಿ ಪಳಗಲೇಬೇಕು. ಹಿಂದೆ ದೊಡ್ಡಯ್ಯನ ಕೆರೆ ಹಾಡ್ಯದಲ್ಲಿ ಅವರು ಬದುಕುತ್ತಿದ್ದಾಗ ಖೆಡ್ಡಾ ತೋಡುತ್ತಿದ್ದರು; ಆದರೀಗ ಕಡ ಕಟ್ಟುತ್ತಾರೆ. ನಾಗದಾಳಿ ಬಳ್ಳಿಯನ್ನು ಹೊಸೆದು ಬಲೆ ರಚಿಸಿ, ಆನೆ ಅಥವಾ ಕಾಟಿ ನಡೆದಾಡುವ ದಾರಿಯಲ್ಲಿ ಬಿಗಿಯಾಗಿ ಮರಗಳಿಗೆ ಕಟ್ಟಿ, ಸೂಚನೆ ಸಿಕ್ಕೊಡನೆ ಬಲೆಯೊಳಗೆ ಸಿಕ್ಕಿಸಿಬಿಡುತ್ತಾರೆ. ನಾಲ್ಕೂ ಕಡೆ ಅತ್ಯಂತ ಗಟ್ಟಿಮುಟ್ಟಾದ ನಾಗದಾಳಿ ಬಳ್ಳಿಯ ಬಲೆಯ ಬಂಧಕ್ಕೆ ಬಿದ್ದೊಡನೆ ದಿಗ್ಬ್ರಾಂತಿಗೊಳ್ಳುವ ಪ್ರಾಣಿ ವಿಕಾರವಾಗಿ ಅರಚಿಕೊಳ್ಳತೊಡಗುತ್ತದೆ. ಸುತ್ತಲೂ ನಿಂತು ಮೈಜೆಟ್ಟಿಗಳು ತಮ್ಮಷ್ಟು ಎತ್ತರದ ಬಡಿಕೆಯಿಂದ ಒಂದೇ ಸಮನೆ ಬಲೆಗೆ ಬಿದ್ದ ಪ್ರಾಣಿಗೆ, ತಾವು ದಣಿಯುವವರೆಗೂ ಮತ್ತು ಅಬ್ಬರಿಸುವ ಪ್ರಾಣಿ ಪಳಗುವವರೆಗೂ ಬಾರಿಸುತ್ತಾರೆ. ಸೋತು ಶರಣಾಗುವ ಪ್ರಾಣಿಗೆ ಮತ್ತು ಬರಿಸುವ ಇಸುಬುಸೊಪ್ಪು ತಿನ್ನಿಸಿ ಕೆಡವುತ್ತಾರೆ. ನಂತರ ಅದೇ ನಾಗದಾಳಿ ಬಳ್ಳಿಯ ನಾರುಗಳನ್ನು ಹೊಸೆದು ತಯಾರಿಸಿದ ಹಗ್ಗದಿಂದ ಬಿಗಿದು ಎರಡು ದಿನದ ನಂತರ ಕೋಟೆಗೆ ಎಳೆದು ತರುತ್ತಾರೆ. ಅಷ್ಟರಲ್ಲಾಗಲೇ ನಿರಂತರ ಇಸುಬುಸೊಪ್ಪು ತಿಂದು ಮಂಕಾಗುವ ಕಾಟಿ ಅಥವಾ ಆನೆ ಇವರ ಮಾತು ಕೇಳುವಷ್ಟು ಮೃದುವಾಗಿಬಿಟ್ಟಿರುತ್ತದೆ. ಆವತಿಯನ್ನರು ಮಾದನಾಯಕನ ನೇತೃತ್ವದಲ್ಲಿ ಗುರು ತಿರುಕನ ಮಾರ್ಗದರ್ಶನದಂತೆ ಏಳುಸುತ್ತಿನ ಕಲ್ಲಿನ ದುರ್ಗಮ ಕೋಟೆಯನ್ನೂ, ಹತ್ತಾರು ನೂರಾರು ನೀರಿನ ತೋಡುಗಳನ್ನು ನಿರ್ಮಿಸಿದ್ದೇ ಈ ಆನೆಗಳು ಮತ್ತು ಕಾಡುಕೋಣಗಳ ಸಹಾಯದಿಂದ. ಅಂದ ಹಾಗೆ ಆವತಿಯನ್ನರು ಮರದ ದಿಮ್ಮಿಗಳನ್ನು ಬಳಸಲು ಶುರು ಮಾಡಿದ್ದೂ ಆನೆಗಳ ಸಹಾಯದಿಂದಲೇ. ವೀರಮಾದನ ಕಲ್ಲಿನ ಭವಂತಿಗೆ ನೂರಾರು ಮರದ ತೊಲೆಗಳನ್ನು ಬಳಸಲಾಗಿದೆ. ಮಂತ್ರಿ ಸೋಪಯ್ಯನ ಮನೆಗೂ, ಮೈಜೆಟ್ಟಿಗಳ ತರಬೇತುದಾರ ಜಗಜೆಟ್ಟಿ ಸಾಮಯ್ಯನ ನಿವಾಸಕ್ಕೂ ಹತ್ತಾರು ಮರದ ದಿಮ್ಮಿಗಳ ಅಲಂಕಾರವಿದೆ. ಕಾಡೆಮ್ಮೆ ಹೈನುಗಾರಿಕೆಗೆ, ಕಾಡುಕೋಣ ವ್ಯವಸಾಯದ ಬಿತ್ತನೆಗೆ ಉಪಯೋಗವಾಗುತ್ತದೆ. ವರ್ಷದಲ್ಲೊಮ್ಮೆ ನಡೆಸುವ ತಿರುಕನ ಕಾರಣಿಕ ಮತ್ತು ಸೂಲಂಗಿಯ ಜಾತ್ರೆಯ ದಿನ ಒಂದು ಬಲಿತ ಕಾಡುಕೋಣದ ಬಲಿಯಾಗುತ್ತದೆ. ಆ ದಿನ ಆವತಿಯನ್ನರು ಮೌನವೃತ ಆಚರಿಸುತ್ತಾರೆ; ಅವರಿಗದು ಸೂತಕದ ದಿನ. ಯಾಕಂದರೆ ಕಾಡುಕೋಣ ಅವರ ಪಾಲಿನ ದೇವರೂ ಹೌದು. ಸೂಲಂಗಿಯ ಗಂಡ ಕಾಟಯ್ಯ ಈ ಕಾಡುಕೋಣದ ವೇಷದಲ್ಲಿ ತಲೆತಪ್ಪಿಸಿಕೊಂಡಾಗ, ಸೂಲಂಗಿಯ ಅಪ್ಪಣೆಯಂತೆ ಕಲ್ಲುಕುರಬರೆಲ್ಲರೂ ಸೇರಿ ಕಾಟಯ್ಯನನ್ನು ಬಂದಿಸಿ ತಂದು ಸೂಲಂಗಿಯ ಎದುರು ನಿಲ್ಲಿಸಿ, ತಪ್ಪು ಮಾಡಿದ್ದಕ್ಕೆ ತಲೆ ಕತ್ತರಿಸುತ್ತಾರೆ. ಇಂತದ್ದೊಂದು ಜನಪದ ನಂಬಿಕೆ ಈಗಿನ ಆವತಿಯನ್ನರಾದ ಮೂಲ ಕಲ್ಲುಕುರುಬ ಸಮುದಾಯದ್ದು.
***

#ವಿಪ್ರಭಾ

#ಆವತೀಯತೆ

ಸಾಕ್ಷಾಟಿವಿ ಸುದ್ದಿ ಸಂಪಾದಕ ವಿಶ್ವಾಸ್ ಭಾರದ್ವಾಜ್ ಅವರ ಕಿರು ಪರಿಚಯ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd