ಅಮೇರಿಕನ್ ಯಾತ್ರೆ; ನಾನು ಕಂಡ ನ್ಯೂಯಾರ್ಕ್ ಮತ್ತದರ ಸೂಕ್ಷ್ಮ ಪಕ್ಷಿ ನೋಟ: Saakshatv yatrika episode 9
ಮೊದಲಿಗೆ ನ್ಯೂಯಾರ್ಕ್ ಎಂಬ ಹೆಸರಿನ ರಾಜ್ಯವೂ ಇದೆ ನಗರವೂ ಇದೆ ಎಂದಾಗ ಏನೋ ಒಂಥರಾ ಕಿರಿಕಿರಿಯಾಗಿತ್ತು. ಅದು ಹೇಗೆ ಆತರ ಹೆಸರಿಡ್ತಾರೆ ಅವರು ಅಂತ ಅನ್ನಿಸಿತ್ತು. ಅದರ ರಾಜಧಾನಿ ಹೆಸರು ದೊಡ್ಡನಗರವಾದ ನ್ಯೂಯಾರ್ಕ್ ಅಲ್ಲದೇ ಅಲ್ಬೆನಿ ಅನ್ನೋ ಬಹಳ ಚಿಕ್ಕ ನಗರ ಗೊತ್ತಾದಾಗ ಮಾತ್ರ ಇವರು ಹುಚ್ಚರೇ ಇರಬೇಕು, ಅಷ್ಟು ದೊಡ್ಡ ನಗರವಿರಬೇಕಾದರೆ ಆ ಚಿಕ್ಕ ಊರನ್ನ ರಾಜಧಾನಿಯನ್ನಾಗಿಟ್ಟುಕೊಂಡ ಇವರಂತಹ ಮೂರ್ಖರು ಇರಲಿಕ್ಕಿಲ್ಲ ಅನ್ನೋ ತೀರ್ಮಾನಕ್ಕೆ ಬಂದಿದ್ದೆ. ನಿಜ ಹೇಳಬೇಕೆಂದರೆ, ನ್ಯೂಯಾರ್ಕ್ ರಾಜ್ಯದ ಬಗ್ಗೆ ಮೊದಲು ಹೇಳಬೇಕಾಗಿತ್ತು. ಆದರೆ ನ್ಯೂಯಾರ್ಕ್ ನಗರದ ಬಗ್ಗೆಯೇ ಮೊದಲು ಹೇಳೋಣ ಅನ್ನಿಸ್ತಾ ಇದೆ. Saakshatv yatrika episode 9
ನಾನು ಮೊದಲ ಬಾರಿಗೆ ಮುಂಬೈಗೆ ಹೋದಾಗ ನಗರವನ್ನು ಪ್ರವೇಶಿಸುತ್ತಿರಬೇಕಾದರೆ ಒಂತರಾ ವಿಚಿತ್ರ ಅನುಭವವಾಗಿತ್ತು. ಯಾವುದೋ ಒಂದು ವಿಚಿತ್ರ ಪ್ರದೇಶಕ್ಕೆ ಪ್ರವೇಶಿಸ್ತಾ ಇರೋಹಾಗೆ, ಸಿಕ್ಕು ಸಿಕ್ಕಾದ ಸ್ಪಾಗೆಟ್ಟಿಯ ತಟ್ಟೆಯೊಳಗೆ ಸೂಕ್ಷ್ಮರೂಪಿಯಾಗಿ ಸಿಲುಕಿಕೊಂಡರೆ ಹೇಗಾಗುವುದೋ ಅದೇ ಅನುಭವ. ಡಿಟ್ಟೋ ಅದೇ ಅನುಭವ ಮೊದಲ ಬಾರಿಗೆ ನ್ಯೂಯಾರ್ಕನ್ನು ಪ್ರವೇಶಿಸಬೇಕಾದರೆ ಆಗಿತ್ತು. ಮೊದಲ ಎರಡು ಗಂಟೆಗಳಂತೂ ನಾನು ಮುಂಬೈಯಲ್ಲೇ ಇದೀನಿ ಅಂದುಕೊಂಡಿದ್ದೆ. ದಾರಿ ದಾರಿಯಲ್ಲೂ ಕಾಯ್ಕಿಣಿಯವರ, ಚಿತ್ತಾಲರ ಪಾತ್ರಗಳೇ ಕಾಣ್ತಾ ಇದ್ದವು. ನ್ಯೂಯಾರ್ಕಿನ ನೆಲದಡಿ ಸಾಗುವ ಹಳಿಬಂಡಿಯಲ್ಲಿ ಕೂತರೂ ಮುಂಬೈ ಲೋಕಲ್ ರೈಲುಗಳಲ್ಲಿ ಹೋಗ್ತಾ ಇದೀನಿ ಅನ್ನಿಸ್ತಾ ಇತ್ತು.
ಹಾಗಂತ ನಾನು ಮುಂಬೈಗೆ ಬಹಳ ಬಾರಿ ಭೇಟಿಕೊಟ್ಟವನಲ್ಲ. ಹೆಚ್ಚೆಂದರೆ 3-4 ಸಾರಿ ಹೋಗಿರಬಹುದು, ಮತ್ತೆ ಎರಡು ದಿನಕ್ಕಿಂತ ಜಾಸ್ತಿ ಉಳಿದಿಲ್ಲ. ಆದರೂ ಅಷ್ಟು ಗಾಢವಾಗಿ ಮುಂಬೈ ನಗರದ ಅನುಭವವಾಯಿತು. ನಾನು ನೋಡಿದ ನಗರಗಳಲ್ಲಿ ನಿಜವಾಗಿಯೂ ಕಾಸ್ಮೋ ಪಾಲಿಟನ್ ಅನಿಸಿದ್ದು ಕೇವಲ ಎರಡು ನಗರಗಳು. ಒಂದು ಮುಂಬೈ ಇನ್ನೊಂದು ನ್ಯೂಯಾರ್ಕ್. ನಾನು ಭೇಟಿಕೊಟ್ಟ ಬೆಂಗಳೂರು, ಚೆನ್ನೈ, ಲಾಸ್ ಎಂಜಿಲಿಸ್ ಇತ್ಯಾದಿ ಕಡೆಗಳಲ್ಲೆಲ್ಲೂ ನನಗೆ ಆ ಅನುಭವವಾಗಿಲ್ಲ.
ಜಗತ್ತಿನ ಶಕ್ತಿಕೇಂದ್ರಗಳಲ್ಲೊಂದಾದ ಈ ನಗರ ವಾಶಿಂಗ್ಟನ್ನಿಗೂ ಮುಂಚೆ ಅಮೆರಿಕಾದ ರಾಜಧಾನಿಯಾಗಿತ್ತು ಅಂತ ಗೊತ್ತಾಗಿದ್ದು ಮಾತ್ರ ವಿಚಿತ್ರ ಸನ್ನಿವೇಶದಲ್ಲಿ. ಬ್ರಹ್ಮಾವರ ಹತ್ತಿರದ ಕ್ರಾಸ್ಲ್ಯಾಂಡ್ ಕಾಲೇಜಿಗೆ ರಸಪ್ರಶ್ನೆ ಕಾರ್ಯಕ್ರಮಕ್ಕೆ ಹೋಗಿದ್ದಾಗ ‘ವಾಶಿಂಗ್ಟನ್ನಿಗೂ ಮುಂಚೆ ಅಮೆರಿಕಾದ ರಾಜಧಾನಿ ಯಾವುದು?’ ಅನ್ನೋ ಪ್ರಶ್ನೆ ಬಂತು. ಯಾವುದೋ ಗುಂಗಿನಲ್ಲಿ ಬಝರ್ ಒತ್ತಿದ್ದೆ. ನಾನು ಮಾಡಿದ ಎಡವಟ್ಟು ಕೆಲಸ ಆಮೇಲೆ ಅರ್ಥವಾಯಿತು. ಇರುವ 5 ಸೆಕೆಂಡಿನಲ್ಲಿ ಬಾಯಿಗೆ ಬಂದ ನ್ಯೂಯಾರ್ಕ್ ಉತ್ತರ ಕೊಟ್ಟಿದ್ದೆ. ಆದರೆ ಇದರಿಂದ ಚೇತರಿಸಿಕೊಳ್ಳದೇ ಮುಂದಿನ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಕೊಡಲಿಲ್ಲ.
ನ್ಯೂಯಾರ್ಕ್ ರಾಜ್ಯದ 60 ಪ್ರತಿಶತಕ್ಕೂ ಹೆಚ್ಚು ಜನ ಈ ನಗರದ ಸುತ್ತಮುತ್ತಲೇ ವಾಸಿಸುತ್ತಾರೆ. ನಾನು ಈ ನಗರದಲ್ಲಿ ಕಳೆದಿದ್ದು ಕೇವಲ ಹದಿನೈದು ಗಂಟೆಗಳು. ನೋಡುವುದಕ್ಕೆ ಏನೇನೂ ಸಾಲದು, ಇನ್ನೊಂದು ಬಾರಿ ಹೋಗಬೇಕೆಂದುಕೊಂಡರೂ ಆಗಲಿಲ್ಲ. ವಾಸವಾಗಿ ಅಲ್ಲಿನ ಜೀವನಶೈಲಿ ಅನುಭವಿಸುವುದು ನನಗೆ ಒಗ್ಗುವಂತದಲ್ಲ.
ನನಗೆ ಅತ್ಯಂತ ಗಮನಸೆಳೆದ ಸಂಗತಿಯೇನೆಂದರೆ ನಗರ ಕೇಂದ್ರಭಾಗದ ಮ್ಯಾನ್ಹಟನ್ ಅಲ್ಲಿರುವ ಸೆಂಟ್ರಲ್ ಪಾರ್ಕ್. ಸುಮಾರು 840 ಎಕ್ರೆಯಷ್ಟು ದೊಡ್ಡದಾದ ಉದ್ಯಾನ. ಇಂತಹ ಮಹಾನಗರದಲ್ಲಿ ಇಷ್ಟು ದೊಡ್ಡ ಉದ್ಯಾನ ನಗರದ ಶ್ವಾಸಕೋಶದಂತೆ ಕಾರ್ಯನಿರ್ವಹಿಸುತ್ತದೆ. ಈ ವಿಷಯದಲ್ಲಿ ಭಾರತದ ನಗರಗಳೇನೂ ಕಮ್ಮಿಯಿಲ್ಲ. ನಮ್ಮಲ್ಲೂ ಲಾಲ್ಬಾಗ್, ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನದಂತವು ನಗರದ ಕೇಂದ್ರ ಭಾಗದಲ್ಲೇ ಇವೆ.
ನ್ಯೂಯಾರ್ಕ್ ಮತ್ತು ಪಕ್ಕದ ನ್ಯೂಜೆರ್ಸಿ ರಾಜ್ಯಗಳಲ್ಲಿ ನಾವು ತೃಪ್ತಿ ಪಡಬಹುದಾದ ಒಂದು ಸಂಗತಿಯಿದೆ. ಅತಿಯಾದ ಜನಸಾಂದ್ರತೆಯಿರುವುದರಿಂದ ಜನರಿಗೆ ರಸ್ತೆಯಲ್ಲಿ ತಾಳ್ಮೆ ಕಮ್ಮಿ, ಉಳಿದೆಡೆ ಹಾರನ್ ಮಾಡುವುದು ಬಹಳ ಅಪರೂಪವಾದರೆ ಇಲ್ಲಿ ಇದು ಬಹಳ ಸಹಜ. ನಮ್ಮಂತೆ ಯದ್ವಾ ತದ್ವಾ ಹಾರನ್ ಮಾಡುತ್ತಾರೆ. ಒಟ್ರಾಸಿ ವಾಹನ ಚಲಾಯಿಸುವುದೂ ಸರ್ವೇ ಸಾಮಾನ್ಯ.
ಹಾಂ , ನಾನು ನೋಡಿದ ಜಾಗಗಳ ಬಗ್ಗೆ ಹೇಳಬೇಕು ಅಂದರೆ. ನಾವು ಭೇಟಿಕೊಟ್ಟಿದ್ದು ಕೇವಲ ಮೂರು ಜಾಗಗಳಿಗೆ.
1. ಲಿಬರ್ಟಿ ದ್ವೀಪ – ಅತ್ಯಂತ ಪ್ರತಿಷ್ಟಿತ ಪ್ರತಿಮೆಯಾದ ಅಮೆರಿಕಾದ ಹೆಮ್ಮೆಯ ಸಂಕೇತವಾದ ಸ್ವಾತಂತ್ರ್ಯದೇವಿಯ ಪ್ರತಿಮೆ ಈ 14-15 ಎಕರೆಯ ಈ ಪುಟ್ಟ ದ್ವೀಪದಲ್ಲಿದೆ. ಇದು ಅಮೆರಿಕಾ ಕೇಂದ್ರಸರಕಾರದ ಒಡೆತನದಲ್ಲಿದೆ. ಚಿಕ್ಕದಾದ ಮತ್ತು ಚೊಕ್ಕದಾದ ಈ ದ್ವೀಪಕ್ಕೆ ಪ್ರಯಾಣಿಸುವುದು, ಈ ದ್ವೀಪದಲ್ಲಿ ಓಡಾಡುವುದು ಮತ್ತು ಭವ್ಯವಾದ ಪ್ರತಿಮೆಯನ್ನ ನೋಡುವುದೇ ಒಂದು ಅಹ್ಲಾದಕರ ಅನುಭವ. ಆದರೆ ಅದಕ್ಕಿಂತ ಚನ್ನಾಗಿರುವುದು ಮುಖ್ಯ ಭೂಭಾಗದಿಂದ ದ್ವೀಪಕ್ಕೆ ಬರುವಲ್ಲಿನ ಪ್ರಯಾಣ ಬಹಳ ಖುಷಿ ಕೊಡುತ್ತದೆ. ನ್ಯೂಯಾರ್ಕ್ ನಗರದ ಅದ್ಭುತ ದೃಷ್ಯಗಳು ಕಾಣುತ್ತವೆ.
2. ಬ್ರೂಕ್ಲಿನ್ ಸೇತುವೆ
ಮ್ಯಾನ್ಹಟನ್ ಮತ್ತು ಬ್ರೂಕ್ಲಿನ್ ಸಂಪರ್ಕಿಸುವ ಈ ಸೇತುವೆ ಬಹಳ ಅದ್ಭುತವಾಗಿದೆ. ಅತ್ಯಂತ ಸುಂದರ ಪ್ರದೇಶದಲ್ಲಿರೋ ಎರಡಂತಸ್ತಿನ ಈ ಸೇತುವೆಯ ನೋಡಲು ನಿತ್ಯ ಸಾವಿರಾರು ಜನ ಬರುತ್ತಾರೆ.
3. ವಿಶ್ವ ವಾಣಿಜ್ಯ ಕೇಂದ್ರ
ಅವಳಿ ಕಟ್ಟಡಗಳ ತಾಲಿಬಾನಿನವರು ಹೊಡೆದುರುಳಿಸಿದ್ದು ನಿಮಗೆಲ್ಲಾ ಗೊತ್ತಿದೆ. ಅಲ್ಲೀಗ ದೊಡ್ಡದಾದ ಒಂದೇ ಕಟ್ಟಡ ಕಟ್ಟಿಸಿದ್ದಾರೆ. ಪ್ರವೇಶ ಶುಲ್ಕ ಸ್ವಲ್ಪ ಜಾಸ್ತಿ ಅನ್ನಿಸಿದರೂ ಆ ಕಟ್ಟಡದ ನೂರನೆ ಮಹಡಿಯಲ್ಲಿ ನಿಂತು ಇಡೀ ನ್ಯೂಯಾರ್ಕ ನಗರ ನೋಡುವುದು ಅತ್ಯಂತ ರೋಮಾಂಚನಕಾರೀ ಅನುಭವ. ಒಂದು ಮಹಾನಗರದ ಅಂತಹ ಒಂದು ದೃಷ್ಯವನ್ನ ಮುಂಚೆ ಎಲ್ಲೂ ನೋಡಿರಲಿಲ್ಲ. ವೀಕ್ಷಣೆಗೆ ಮುಸ್ಸಂಜೆ ಅತ್ಯಂತ ಪ್ರಶಸ್ತವಾದ ಸಮಯ. ಹಾಗೇ ಪಕ್ಕದಲ್ಲೆ ಗ್ರೌಂಡ್ ಝೀರೋ, ಮೆಟ್ರೋ ನಿಲ್ದಾಣ ಮುಂತಾದ ಪ್ರೇಕ್ಷಣೀಯ ಜಾಗಗಳಿವೆ
ಮುಂದಿನ ಭಾಗದಲ್ಲಿ ನ್ಯೂಯಾರ್ಕ್ ರಾಜ್ಯದ ಬಗ್ಗೆ ಮತ್ತು ಚಾಂಪ್ಲೈನ್ ಸರೋವರದ ಬಗ್ಗೆ ಹೇಳ್ತೀನಿ.
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
–ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ
ಅಮೇರಿಕನ್ ಯಾತ್ರೆ; ಯೂಟಾ ರಾಜ್ಯದಲ್ಲಿ ಬ್ರೈಸ್ ಕಣಿವೆ, ಝಯಾನ್ ಪಾರ್ಕ್ ನೋಡದಿದ್ದರೂ ಪುಟ್ಟ ಊರು ಕನಾಬ್ ನೋಡಲೇಬೇಕು:
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಸಿರು ಬಟಾಣಿಗಳ 5 ಬೆರಗುಗೊಳಿಸುವ ಆರೋಗ್ಯ ಪ್ರಯೋಜನಗಳು https://t.co/ApvMKdgXi1
— Saaksha TV (@SaakshaTv) November 18, 2020
ಕೆಲವೇ ನಿಮಿಷಗಳಲ್ಲಿ ತ್ವರಿತ ಆಧಾರ್ ಆಧಾರಿತ ಪ್ಯಾನ್ ಕಾರ್ಡ್ ಪಡೆಯಿರಿ – ಇಲ್ಲಿದೆ ಮಾಹಿತಿ https://t.co/otnB73hWAR
— Saaksha TV (@SaakshaTv) November 18, 2020