ಅಮೇರಿಕನ್ ಯಾತ್ರೆ; ಯೂಟಾ ರಾಜ್ಯದಲ್ಲಿ ಬ್ರೈಸ್ ಕಣಿವೆ, ಝಯಾನ್ ಪಾರ್ಕ್ ನೋಡದಿದ್ದರೂ ಪುಟ್ಟ ಊರು ಕನಾಬ್ ನೋಡಲೇಬೇಕು: Saakshatv yatrika episode 8
ಯೂಟಾ ಎಂಬ ಈ ರಾಜ್ಯದ ಹೆಸರು ಕೇಳಿದೊಡನೆಯೇ ನನಗೆ ಊಟದ ನೆನಪಾಗತ್ತೆ. ನಾವು ಆ ರಾಜ್ಯಕ್ಕೆ ತಿರುಗಲು ಹೋದಾಗ ಸರಿಯಾದ ಊಟ ಸಿಗದೇ ಪರದಾಡಿದ್ವಿ, ಇರಲಿ. ಯೂಟಾ ಹೆಸರು Ute ಬುಡಕಟ್ಟಿನಿಂದ ಬಂದಿದೆ. ಅಂದರೆ ಪರ್ವತಗಳ ಜನರು ಅಂತ. ಇತರ ರಾಜ್ಯಗಳಂತೇ ಯುರೋಪಿಯನ್ನರ ಆಗಮನಕ್ಕೆ ಮುಂಚೆ ಈ ಪ್ರದೇಶ ಕೂಡಾ ಸ್ಥಳೀಯ ಅಮೆರಿಕನ್ನರ ಆವಾಸ ಸ್ಥಾನವಾಗಿತ್ತು. Saakshatv yatrika episode 8
ಸಂಸ್ಥಾನಕ್ಕೆ ಸೇರುವ ಮುಂಚೆ ಸ್ಪ್ಯಾನಿಷ್ ಮತ್ತು ಮೆಕ್ಸಿಕನ್ನರ ಹಿಡಿತದಲ್ಲಿದ್ದ ಈ ರಾಜ್ಯ ನಂತರ ಸಂಸ್ಥಾನಕ್ಕೆ ಸೇರಿತು. ಮಹಾ ಲವಣ ಸರೋವರ ಮತ್ತು ಬಹುಪಾಲು ಪರ್ವತಗಳಿಂದಲೇ ಕೂಡಿದ ಈ ನಾಡಿನ ರಾಜಧಾನಿ ಸಾಲ್ಟ್ ಲೇಕ್ ಸಿಟಿ. ಈ ನಾಡಿಗೆ ಜೇನುಗೂಡಿನ ರಾಜ್ಯ ಅಂತಾರೆ. ಅದರರ್ಥ ಇಲ್ಲಿ ಬಹಳ ಜೇನು ಸಿಗತ್ತೆ ಅಂತ ಅಲ್ಲ, ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಜೇನು ಹುಳುಗಳಂತೆ ಒಬ್ಬರಿಗೊಬ್ಬರು ಆಗಿ ಸಹಾಯ ಮಾಡಿಕೊಂಡು ನಾಡನ್ನ ಯಶಸ್ವಿಗೊಳಿಸಬೇಕೆಂದು. ಧರ್ಮದ ವಿಚಾರಕ್ಕೆ ಬಂದರೆ, ಈ ನಾಡಿನ ಹೆಚ್ಚಿನ ಜನರು ಮೋರ್ಮನ್ ಕ್ರೈಸ್ತರು. ನಿಮಗೆ ಗೊತ್ತಿರುವಂತೆ ಹೆಚ್ಚಿನ ಕ್ರೈಸ್ತ ಮತದಲ್ಲಿ ಬಹುಪತ್ನಿತ್ವ ಧರ್ಮ ನಿಶಿದ್ಧ. ಆದರೆ ಇವರಲ್ಲಿ ಇದು ಧರ್ಮ ಸಮ್ಮತ. ಈಗಲೂ ಕೆಲವೆಡೆ ಚಾಲ್ತಿಯಲ್ಲಿದೆ ಎಂದು ಕೇಳಿದೀನಿ. ಈ ವಿಷಯವಾಗಿ ಸರಕಾರದೊಟ್ಟಿಗೆ ತಿಕ್ಕಾಟಗಳೂ ನಡೆದಿವೆಯಂತೆ.
ನಾನು ಈ ರಾಜ್ಯಕ್ಕೆ ಬೇಟಿ ಕೊಡುವ ಮುಂಚೆ ವಿಷಯಗಳ ಕೆದಕ್ತಾ ಇರಬೇಕಾದರೆ ವಿಶೇಷವಾಗಿ ನನ್ನ ಗಮನ ಸೆಳೆದ ಸಂಗತಿಯೇನೆಂದರೆ, ಅಮೆರಿಕಾದಲ್ಲೇ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಅತೀ ಕಮ್ಮಿಯಿರುವುದು ಈ ರಾಜ್ಯದಲ್ಲೇ. ಅಲ್ಲದೇ ಈ ರಾಜ್ಯದ ಕೌಟುಂಬಿಕ ಆದಾಯವೂ ಗಮನ ಸೆಳೆಯುವಂತಿದೆ. ಹೆಚ್ಚಿನ ಸೂಚ್ಯಂಕಗಳಲ್ಲಿ ಈ ರಾಜ್ಯ ಮೇಲಿನ ಸ್ಥಾನದಲ್ಲೇ ಬರುತ್ತದೆ.
ಸಾಲ್ಟ್‌ಲೇಕ್ ಮಹಾಸರೋವರ ಈ ರಾಜ್ಯದ ಅತೀ ಮುಖ್ಯವಾದ ಭೌಗೋಳಿಕ ಭಾಗ. ಸಮುದ್ರದಿಂದ ಸಾಕಷ್ಟು ದೂರದಲ್ಲಿರುವ ಈ ಸರೋವರ ಅತ್ಯಂತ ಅಪರೂಪದ ಭೌಗೋಳಿಕ ರಚನೆ. ಸಾಲ್ಟ್‌ಲೇಕ್ ಮಹಾಸರೋವರದ ದಡದಲ್ಲಿರುವ ಸಾಲ್ಟ್‌ಲೇಕ್ ನಗರ ಈ ರಾಜ್ಯದ ರಾಜಧಾನಿ.
ಈ ರಾಜ್ಯದಲ್ಲಿ ತಿರುಗಾಡಬೇಕಾದರೆ ಎಲ್ಲೆಡೆ ಬರೀ ಕಂದು ಬಣ್ಣಗಳೇ ಕಾಣ್ತಾ ಇದ್ವು. ಕಂದೋ ಇನ್ಯಾವುದೋ, ಬಣ್ಣಗಳ ಗುರುತಿಸುವಲ್ಲಿ ಜಾಣನಲ್ಲ ನಾನು. ನೀವು ಅಂತರ್ಜಾಲದಲ್ಲಿ ಈ ರಾಜ್ಯದ ಚಿತ್ರಗಳ ಹುಡುಕಿದಾಗ ಯಾವ ಬಣ್ಣ ಕಾಣುತ್ತದೋ ಅದೇ ಬಣ್ಣ. ಮತ್ತೆ ಈ ರಾಜ್ಯದಲ್ಲಿ ಕೂಡಾ ಅನೇಕ ಪ್ರವಾಸೀ ತಾಣಗಳಿವೆ. ಹೆಚ್ಚಿನವು ನೈಸರ್ಗಿಕ ಅದ್ಭುತಗಳು. ಹಾಲಿವುಡ್ ಸಿನಿಮಾ ಹುಚ್ಚಿರುವವರಿಗೆ ಈ ರಾಜ್ಯದ ಕೆಲ ಭಾಗಗಳ ಪರಿಚಯವಂತೂ ಇರಬಹುದು. ಮತ್ತೆ ಯೂಟಾ ಮತ್ತು ಆರಿಝೋನಾಗಳ ಕನಿಷ್ಟ 5-6 ವಿಂಡೋಸ್ ವಾಲ್‌ಪೇಪರ್‌ಗಳನ್ನ ನೀವು ನೋಡಿಯೇ ಇರುತ್ತೀರಿ.
ಇವೆಲ್ಲಾ ಇರಲಿ. ನಾವು ಇಲ್ಲಿ ನೋಡಿದ್ದು ಕೇವಲ ಎರಡು ಸ್ಥಳಗಳನ್ನು ಒಂದು ಬ್ರೈಸ್ ಕಣಿವೆ ಮತ್ತು ಝಯಾನ್ ರಾಷ್ಟ್ರೀಯ ಉದ್ಯಾನ. ಒಂದು ದಿನ ಉಳಿದ ಸೆಂಟ್ ಜಾರ್ಜ್ ನಗರವನ್ನೂ ಒಂದೇ ಗಂಟೆ ಊಟಕ್ಕೆ ನಿಲ್ಲಿಸಿದ ಕನಾಬ್ ಪಟ್ಟಣವನ್ನೂ ಸೇರಿಸಿದರೆ 4 ಜಾಗಗಳು. ಸೆಂಟ್ ಜಾರ್ಜ್ ಬಗ್ಗೆ ಹೇಳೋಕೇನೂ ಇಲ್ಲ. ಆದರೂ ವಿಭಿನ ಭೌಗೋಳಿಕ ಲಕ್ಷಣಗಳುಳ್ಳ ಆ ನಗರ ಏನೋ ಒಂಥರಾ ಚನ್ನಾಗಿತ್ತು. ಉಳಿದ ಮೂರು ಪ್ರದೇಶಗಳ ಬಗ್ಗೆ ಚಿಕ್ಕದಾಗಿ ಹೇಳ್ತೀನಿ.
ಬ್ರೈಸ್ ಕಣಿವೆ:–
ಸಮುದ್ರ ಮಟ್ಟದಿಂದ ಸರಿಸುಮಾರು ಎರಡುವರೆಸಾವಿರ ಮೀಟರ್ ಎತ್ತರದಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಇಲ್ಲಿನ ಭೌಗೋಳಿಕ ರಚನೆಯಿಂದ ಬಹಳ ವಿಶಿಷ್ಟವಾದುದು. ಒಂಥರಾ ಅನ್ಯಗ್ರಹದಲ್ಲಿದ್ದಹಾಗೇ ಭಾಸವಾಗುತ್ತದೆ. ಬೆಳಬೆಳಗ್ಗೆ ಅಲ್ಲಿಗೆ ಕರೆದುಕೊಂಡು ಹೋಗಿದ್ದರಿಂದ ಸಾಯುವಷ್ಟು ಚಳಿಯಿತ್ತು. ಎತ್ತರದ ಜಾಗ ಬೇರೆ. ಇಳಿದ ಕೆಲವೇ ಸಮಯದಲ್ಲಿ ಕೈಗಳೆಲ್ಲಾ ಒಡೆಯತೊಡಗಿದವು. ಟ್ರಾವೆಲ್ಲಿನವರು ಸಾಕಷ್ಟು ಸಮಯ ಕೊಟ್ಟಿದ್ದರೂ ಚಳಿಯ ದೆಸೆಯಿಂದ ಸಾಕಷ್ಟು ತಿರುಗಲಾಗಲಿಲ್ಲ. ಮತ್ತೆ ಹಿಂದಿನ ರಾತ್ರಿ ಅಲ್ಲೆ ಹತ್ತಿರದ ಹೋಟೇಲಿನಲ್ಲಿ ಇಳಿದುಕೊಂಡಿದ್ದೆವು. ಅದರ ನಿರ್ವಹಣೆಯ ಗುಜರಾತೀ ವ್ಯಕ್ತಿಗಳು ತೆಗೆದುಕೊಂಡಿದ್ದರು, ವ್ಯಾಪಾರಕ್ಕಾಗಿ ಎಂತೆಂತಾ ದೇಶಕ್ಕೆ ಹೋಗ್ತಾರೆ ಇಲ್ಲಿ ತಲುಪಿದ್ದು ಆಶ್ಚರ್ಯವಲ್ಲ ಬಿಡಿ.
ಕನಾಬ್:-
ಯೂಟಾದಲ್ಲಿನ ಚಿಕ್ಕ ಪಟ್ಟಣವಿದು. ಊಟಕ್ಕೆ ನಿಲ್ಲಿಸಿದ್ದರು. ಇದ್ದ ಒಂದು ಗಂಟೆಯಲ್ಲಿ ಊಟ ಕಟ್ಟಿಸಿಕೊಳ್ಳಲು ಹೋಟೇಲನ್ನ ಹುಡುಕಿಕೊಂಡು ಊರನ್ನ ತಿರುಗಿದ್ವಿ. ಬಹಳ ಮುದ್ದಾಗಿದೆ ಊರು. ಚಿಕ್ಕದಾದ ಚೊಕ್ಕದಾದ ಊರು. ಇನ್ನೊಮ್ಮೆ ಈ ಊರಿಗೆ ಬಂದು ಉಳಿದು ಚನ್ನಾಗಿ ಸುತ್ತಬೇಕೆಂಬ ಆಸೆಯಿದೆ. ಅವಕಾಶ ಸಿಕ್ಕರೆ ನೋಡೋಣ.
ಝಯಾನ್ ರಾಷ್ಟ್ರೀಯ ಉದ್ಯಾನ:-
ಯೂಟಾದಲ್ಲಿರುವ ಮತ್ತೊಂದು ನಯನಮನೋಹರ ರಾಷ್ಟ್ರೀಯ ಉದ್ಯಾನ. ಎತ್ತರದ ಪರ್ವತಗಳು, ಆಳವಾದ ಕಣಿವೆಗಳು, ಅಂತಹ ಮಹಾನ್ ಪರ್ವತಗಳ ಒಡಲನ್ನು ಕೊರೆದು ಮಾಡಿದ ರಸ್ತೆಗಳು ಮನಸೆಳೆಯುತ್ತವೆ.
ಆದರೆ ಮೇಲೆ ಹೇಳಿದ್ದಿರಲೀ, ಹಿಂದಿನ ಭಾಗದಲ್ಲಿ ಹೇಳಿದ ಪ್ರವಾಸಿ ತಾಣಗಳಾಗಳಲೀ ಸಾಕಷ್ಟು ಸಮಯ ಮಾಡಿಕೊಂಡು ನೋಡಬೇಕಾದ ತಾಣಗಳು. ಪ್ಯಾಕೇಜಿನಲ್ಲಿ ಬೇರೆ ಕಿರಿಕಿರಿ ಇರೋಲ್ಲ. ಆದರೆ ಒಳ್ಳೇ ಜಾಗಗಳ ಸರಿಯಾಗಿ ನೋಡೋ ಅವಕಾಶವನ್ನ ಕಳೆದುಕೊಳ್ತೀವಿ.
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
–ಗಿರಿಧರ್ ಭಟ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಹಾಗೂ ಹವ್ಯಾಸಿ ಬರಹಗಾರ
ಸಿದ್ಧಾಪುರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಪಟಾಕಿ ಬ್ಯಾನ್ – ಹಸಿರು ಪಟಾಕಿಗೆ ಗ್ರೀನ್ ಸಿಗ್ನಲ್; ಅಸಲಿಗೆ ಯಾವುದಿದು ಹಸಿರು ಪಟಾಕಿ?https://t.co/tVs0wPf1v3
— Saaksha TV (@SaakshaTv) November 7, 2020
ಎದೆಯುರಿ ನಿವಾರಣೆಗೆ 7 ನೈಸರ್ಗಿಕ ಮನೆಮದ್ದುhttps://t.co/dvehOAVu77
— Saaksha TV (@SaakshaTv) November 7, 2020