ಅಮೇರಿಕನ್ ಯಾತ್ರೆ; ಪ್ರಾಕೃತಿಕವಾಗಿ ಶ್ರೀಮಂತ, ಭೌಗೋಳಿಕವಾಗಿ ಭಿನ್ನತೆ ಹೊಂದಿರುವ ಆರ್ಥಿಕವಾಗಿಯೂ ಸಬಲವಾಗಿರುವ ವಿಶೇಷ ರಾಜ್ಯ ಕೊಲರಾಡೋ: Saakshatv yatrika episode 7
ನಕಾಶೆಯಲ್ಲಿ ನೋಡಿದರೆ ಆಯತಾಕಾರದಂತೆ ಕಾಣುವ, ಕೊಲರಾಡೋ ಎಂಬ ನದಿಯ ಕಾರಣದಿಂದ ತನ್ನ ಹೆಸರು ಪಡೆದ, ದೊಡ್ಡದೊಡ್ಡ ಪರ್ವತಗಳಿಂದ ಕೂಡಿದ, ಅಮೆರಿಕಾ ಸ್ವತಂತ್ರಗೊಂಡ ನೂರು ವರ್ಷಗಳ ನಂತರ ಅಸ್ತಿತ್ವಕ್ಕೆ ಬಂದ, ಈ ಚಂದದ ರಾಜ್ಯಕ್ಕೆ ನಾನು ಭೇಟಿಕೊಟ್ಟಿದ್ದು ಕೇವಲ ಒಂದು ದಿನದ ಮಟ್ಟಿಗೆ. ಅದು ಕೂಡ ಕಛೇರಿ ಕೆಲಸಕ್ಕೆ. ಅದಕ್ಕೆ ನೋಡಿದ್ದು ಏನೇನೂ ಇಲ್ಲ. ಆದರೆ ಒಂದು ದಿನದ ಭೇಟಿಯಾದರೂ ಭೇಟಿಯೇ ಆದ ಕಾರಣಕ್ಕೂ, ಬೇಟಿಕೊಡುವ ಯಾವುದೇ ಹೊಸ ಊರಿನ ಅಥವಾ ರಾಜ್ಯದ ಬಗ್ಗೆ ಮಾಹಿತಿ ಕೆದಕುವುದು ನನ್ನ ಹಳೆಯ ಚಟವಾದ ಕಾರಣಕ್ಕೆ ಮಾತ್ರವೇ ಈ ರಾಜ್ಯದ ಬಗ್ಗೆ ಹೇಳುತ್ತಾ ಇರುವುದು. ಇದೆಲ್ಲಾ ಅಲ್ಲಿ ಇಲ್ಲಿ ಓದಿದ್ದು, ಇಲ್ಲಾ ಅವರಿವರಿಂದ ಕೇಳಿದ್ದು ಅಷ್ಟೇ. Saakshatv yatrika episode 7
ಇತರ ಕೆಲ ರಾಜ್ಯಗಳಂತೆ ಈ ರಾಜ್ಯದ ಹೆಸರು ಕೂಡಾ ಇಲ್ಲಿ ಹುಟ್ಟಿ ಹರಿಯುವ ನದಿಯಿಂದಲೇ ಬಂದಿದೆ. ನೀವು ಹಿಂದೆ ಭೂಗೋಳದಲ್ಲಿ ‘ರಾಕಿ’ ಪರ್ವತಶ್ರೇಣಿಯ ಬಗ್ಗೆ ಓದಿರಬಹುದು. ಇದೇ ಪರ್ವತಶ್ರೇಣಿ ಈ ರಾಜ್ಯದ ಬಹುಭಾಗವನ್ನು ಆವರಿಸಿದೆ. ಕೊಲರಾಡೋ ಮಾತ್ರವಲ್ಲ, ಇನ್ನೂ ಕೆಲ ರಾಜ್ಯಗಳ ಸೇರಿಸಿ. ಅನೇಕ ಉದ್ಯಮಗಳಿರುವ, ಪ್ರವಾಸಿ ತಾಣಗಳಿರುವ, ಉತ್ತಮ ಕೃಷಿ ಭೂಮಿಯಿರುವ ಈ ಸಂಪದ್ಭರಿತ ರಾಜ್ಯ ಆಗಾಗ ನೈಸರ್ಗಿಕ ವೈಪರೀತ್ಯಗಳಿಂದ ತೊಂದರೆಗೊಳಗಾದರೂ ಕೂಡಾ ಅಮೆರಿಕಾದ ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿ ಸೇರುತ್ತದೆ.
ಸಮುದ್ರ ಮಟ್ಟದಿಂದ ಹೆಚ್ವುಕಮ್ಮಿ ಒಂದು ಮೈಲಿ ಎತ್ತರದಲ್ಲಿರುವ, ಅಂದರೆ 1600+ ಮೀಟರ್ ಎತ್ತರದಲ್ಲಿರುವ ಡೆನ್ವರ್ ಈ ರಾಜ್ಯದ ರಾಜಧಾನಿ. ಈ ಎತ್ತರದಿಂದ ಅದಕ್ಕೆ ಒನ್ ಮೈಲ್ ಸಿಟಿ ಅಂತಾರೆ. ಇದು ಅಮೆರಿಕಾದ ಅತೀ ಎತ್ತರದ ನಗರಗಳಲ್ಲಿ ಒಂದು. ಇನ್ನೊಂದು ಅಪರೂಪದ ವಿಷಯವೆಂದರೆ, ಒಂದೇ ಬಿಂದುವಿನಲ್ಲಿ ಕೊಲರಡೋ ಗಡಿಯೊಟ್ಟಗೆ ಆರಿಝೋನಾ, ಯೂಟಾ ಮತ್ತು ನ್ಯೂ ಮೆಕ್ಸಿಕೋ ರಾಜ್ಯಗಳ ಗಡಿಗಳು ಸೇರುತ್ತವೆ. ಯೋಚಿಸಿ ನೀವು ಒಂದೇ ಬಾರಿ ನಾಲ್ಕು ರಾಜ್ಯಗಳಲ್ಲಿ ಇರಲು ಸಾಧ್ಯ. ಹಾಗೇ ಇಲ್ಲಿ ಡಯಾಗನಲಿ ವಿರುದ್ಧವಿರುವ ರಾಜ್ಯಗಳಾದ ಅನುಕ್ರಮವಾಗಿ ಯೂಟಾ ಮತ್ತು ನ್ಯೂ ಮೆಕ್ಸಿಕೂ, ಆರಿಝೋನಾ ಮತ್ತು ಕೊಲಾರಡೋಗಳ ಗಡಿಯ ಉದ್ದ ಅಕ್ಷರಶಃ ಒಂದು ಬಿಂದುವಿನಷ್ಟು. ಭಾರತದಲ್ಲಿ ಎಲ್ಲಾದರೂ ಈ ತರಹ ನಾಲ್ಕು ರಾಜ್ಯಗಳು ಸೇರುವ ಜಾಗಗಳಿವೆಯೇ? ಆಸಕ್ತರು ಸ್ವಲ್ಪ ಹುಡುಕಿ, ಸಿಕ್ಕಿದರೆ ತಿಳಿಸಿ.
ಈ ತರಹದ ಗಡಿಗಳಿರಲು ಮುಖ್ಯ ಕಾರಣ ಅಮೆರಿಕಾದ ಅನೇಕ ರಾಜ್ಯಗಳ ಗಡಿಗಳು ಭೌಗೋಳಿಕ ಅಂಶಗಳ ಮೇಲೆ ನಿರ್ಧರಿತವಾಗಿವೆ, ಅಕ್ಷಾಂಶ ರೇಖಾಂಶಗಳು ಇಲ್ಲಾ ನದಿಗಳು ಇತ್ಯಾದಿ. ಉದಾಹರಣೆಗೆ ಅರ್ಕನ್ಸಾ ಮತ್ತು ಮಿಸ್ಸಿಸ್ಸಿಪ್ಪಿ ರಾಜ್ಯಗಳ ಗಡಿ ಮಿಸ್ಸಿಸ್ಸಿಪ್ಪಿ ನದಿ, ಎಲ್ಲಾ ಕಡೆ ಸಂಪೂರ್ಣವಾಗಿ ಆ ನದಿಯೇ ಅಂತ ಅಲ್ಲ ಕೆಲ ವ್ಯತ್ಯಾಸಗಳಿರಬಹುದು. ನುಡಿಯಾಧಾರಿತವಾಗಿ ವಿಭಜನೆಗೊಂಡ ನಮ್ಮ ರಾಜ್ಯಗಳಲ್ಲಿ ಆ ತರಹದ ಗಡಿಗಳು ಅಪರೂಪ. ಜಿಲ್ಲೆಗಳ ನಡುವೆ ಕೆಲವೆಡೆ ಇರಬಹುದು. ಕರ್ನಾಟಕದಲ್ಲಿ ಈ ರೀತಿ ಗಮನ ಸೆಳೆಯುವಂತಹಾ ಗಡಿಯಿರುವುದು ಉತ್ತರದಲ್ಲಿ ಕೃಷ್ಣಾ ನದಿಯನ್ನೂ ದಕ್ಷಿಣದಲ್ಲಿ ತುಂಗಭದ್ರಾ ನದಿಯನ್ನೂ ಗಡಿಯಾಗಿ ಹೊಂದಿರುವ ರಾಯಚೂರು ಜಿಲ್ಲೆ. ಈ ಬಗ್ಗೆ ನಮಗೆ ಶಾಲೆಯಲ್ಲಿ ಜಿಕೆ ಹರ್ಗಿ ಸರ್ ತುಂಬಾ ಚಂದ ಮಾಡಿ ವಿವರಿಸಿದ್ದರು.
ಈ ರಾಜ್ಯದ ಬಹುದೊಡ್ಡ ಆಕರ್ಷಣೆಯೆಂದರೆ ಇಲ್ಲಿನ ಪ್ರವಾಸಿ ತಾಣಗಳು. ಸಾಕಷ್ಟು ಪರ್ವತಗಳಿರುವುದರಿಂದ ಚಳಿಗಾಲದಲ್ಲಿ ಹಿಮ ಕ್ರೀಡೆಯಾಡಲು ಮತ್ತು ಶರತ್ಕಾಲದಲ್ಲಿ ಬಣ್ಣಬದಲಿಸಿ ಉದುರಲು ಸಿದ್ಧವಾದ ಮರಗಳ ಎಲೆಗಳ ಸೌಂದರ್ಯ ನೋಡಲು ಸಾವಿರಾರು ಪ್ರವಾಸಿಗರು ಬರುತ್ತಾರೆ. ನನಗೆ ಈ ರಾಜ್ಯದಲ್ಲಿ ಸುತ್ತಬೇಕೆಂಬ ಆಸೆ ಇತ್ತು. ಆದರೆ ಅಲ್ಲಿ ಇನ್ನೊಮ್ಮೆ ಹೋಗಲು ಸಾಧ್ಯವಾಗಲಿಲ್ಲ. ಮುಂದ್ಯಾವಾಗಲಾದರೂ ಅವಕಾಶ ಸಿಗಬಹುದು. ಸಿಗದಿದ್ದರೂ ಪರವಾಗಿಲ್ಲ, ತಿರುಗುವವರಿಗೆ ಯಾವ ಊರಾದರೇನು? ಯಾವ ದೇಶವಾದರೇನು? ಏನೇ ಇರಲಿ. ಇಲ್ಲಿನ ಬಗ್ಗೆ ಬೇರೇನೂ ಹೇಳಲು ತೋಚುತ್ತಿಲ್ಲ. ಇಲ್ಲಿಗೆ ಮುಗಿಸುತ್ತೇನೆ. ಇನ್ನೂ ಬೇಕಾದರೆ ತಿಳಿದುಕೊಳ್ಳಲು ಅಂತರ್ಜಾಲವಂತೂ ಇದ್ದೇ ಇದೆ.
ವಿ.ಸೂ: ಪಟದಲ್ಲಿರುವುದು 4 ರಾಜ್ಯಗಳ ಗಡಿಗಳು ಸೇರುವ ಪ್ರದೇಶ. ಚಿತ್ರಕೃಪೆ ವಿಕಿಪೀಡಿಯಾ.
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
–ಗಿರಿಧರ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ದಾಪುರ
***
Saakshatv yatrika episode 7
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel