ಅಮೇರಿಕನ್ ಯಾತ್ರೆ; ಅರಿಜೋನಾ ಪ್ರವಾಸ ಸ್ಮರಣೀಯವಾಗಬೇಕಿದ್ದರೇ ಹುಲ್ಲೆ ಕಣಿವೆ, ಕೊಲರಾಡೋ ನದಿಯ ಕುದುರೆ ಲಾಳದ ತಿರುವು, ಪಾವೆಲ್ ಸರೋವರ ನೋಡಲೇಬೇಕು: Saakshatv yatrika episode 6
ನಮ್ಮ ಕುಟುಂಬ ಮತ್ತು ಸಹೋದ್ಯೋಗಿ ಗೆಳೆಯನ ಕುಟುಂಬ ಮೂರು ರಾಜ್ಯಗಳ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ನಾವು ಪ್ಯಾಕೇಜ್ ಟ್ರಿಪ್ಪಿನ ಮೊರೆ ಹೋಗಬೇಕಾಗಿತ್ತು. ವೇಗಸ್ಸನ್ನು ನಾವೇ ನೋಡಿ ಉಳಿದ 3 ದಿನಗಳಿಗೆ ಪ್ಯಾಕೇಜನ್ನ ಕಾಯ್ದಿರಿಸಿದ್ದೆವು. ನಾನು ಸ್ಥಳಗಳ ಹುಡುಕ್ತಾ ಇರಬೇಕಾದರೆ ನಮ್ಮವರದ್ದು ಒಂದೇ ಬೇಡಿಕೆ. ಯಾವ ಜಾಗಕ್ಕೆ ಹೋಗದಿದ್ದರೂ ಪರವಾಗಿಲ್ಲ ಹುಲ್ಲೆ (ಆ್ಯಂಟಲೋಪ್) ಕಣಿವೆಗೆ ಹೋಗಬೇಕೆಂದು. Saakshatv yatrika episode 6
ಅದಕ್ಕೆ ಆ ಸ್ಥಳ, ನಮ್ಮ ರಜೆ ಮತ್ತು ನಮ್ಮ ಹಣ ಎಲ್ಲಕ್ಕೂ ಹೊಂದಬಲ್ಲ ಪ್ಯಾಕೇಜಿನಲ್ಲಿ ನಾವು ‘ಗ್ರಾಂಡ್ ಕೆನ್ಯಾನ್’ ಮತ್ತು ‘ಹೋವರ್ ಆಣೆಕಟ್ಟ’ನ್ನು ತ್ಯಾಗ ಮಾಡಬೇಕಿತ್ತು. ಆದರೂ ಆಮೇಲೆ ಮೇಲಿನಿಂದಲೇ ಅವುಗಳೆರಡರ ದರ್ಶನವಾದುದರಿಂದ ನನಗೆ ಅಷ್ಟೇನು ಕೊರಗು ಉಳಿಯಲಿಲ್ಲ.
ಅರಿಝೋನಾದಲ್ಲಿ ನಾವು ಮುಖ್ಯವಾಗಿ ಭೇಟಿ ಕೊಟ್ಟಿದ್ದು ಮೂರು ಜಾಗಗಳಿಗೆ. ಒಂದು ಹುಲ್ಲೆ ಕಣಿವೆ, ಕೊಲರಾಡೋ ನದಿಯ ಕುದುರೆ ಲಾಳದ ತಿರುವು ಮತ್ತು ಪಾವೆಲ್ ಸರೋವರದ ದೋಣಿವಿಹಾರ. ಈ ಮೂರೂ ಸ್ಥಳಗಳು ಕೂಡಾ ಅದ್ಭುತವಾದ ಮತ್ತು ನೋಡಲೇಬೇಕಾದ ಜಾಗಗಳು.
ಇಲ್ಲಿ ಒಂದು ವಿಚಿತ್ರ ಹೇಳ್ತಿನಿ ಕೇಳಿ. ಬೆಳಗ್ಗೆ ನಾವು ಹೋರಟಿದ್ದು ಯೂಟಾ ರಾಜ್ಯದಿಂದ. ಅಲ್ಲಿಂದ ನೊವಾಹೋ ಸ್ವಾಯತ್ತ ಪ್ರದೇಶವಿರುವ ಹುಲ್ಲೆ ಕಣಿವೆ ಮತ್ತು ನೊವಾಹೋ ಸ್ವಾಯತ್ತ ಪ್ರದೇಶದ ಒಳಗಿರುವ ಸಾಮಾನ್ಯ ಆರಿಝೋನಾದ ನಗರ ಪೇಜ್. ಇಲ್ಲಿ ಇವು ಮೂರರ ಸಮಯ ವಲಯ ಒಂದೇ ಆದರೂ ಯೂಟಾ ಮತ್ತು ನವಾಹೋ ಪ್ರದೇಶ ಹಗಲ ಬೆಳಕಿನ ಉಳಿಕೆ ಪದ್ಧತಿ ಅನುಸರಿಸುತ್ತಾರೆ. ಆದ್ದರಿಂದ ಉಳಿದ ಅರಿಝೋನಾಕ್ಕೂ ಮತ್ತು ಮೇಲೆಹೇಳಿದ ಭಾಗಗಳಿಗೂ ಬೇಸಿಗೆಯಲ್ಲಿ ಅಂದರೆ ಬೆಳಿಕಿನುಳಿಕೆ ಸಮಯದಲ್ಲಿ ಒಂದು ಗಂಟೆ ವ್ಯತ್ಯಾಸ ಬರತ್ತೆ. ಇದೇ ಕಾರಣಕ್ಕೆ ಒಂದು ದಿನದಲ್ಲಿ ಕನಿಷ್ಟ 5-6 ಬಾರಿ ನಮ್ಮ ಗಡಿಯಾರದ (ಅಂದರೆ ಮೊಬೈಲ ಗಡಿಯಾರದ) ಸಮಯದ ಬದಲಾವಣೆಯಾಗಿತ್ತು. ಮತ್ತೆ ವಿಷಯಾಂತರ ಮಾಡಿದೆ, ಇರಲಿ. ನಾವು ನೋಡಿದ ಸ್ಥಳಗಳ ಬಗ್ಗೆ ಹೇಳಿ ಮುಗಿಸ್ತೀನಿ.
ಹುಲ್ಲೆ ಕಣಿವೆ :-
ಈ ಜಾಗ ಅಮೆರಿಕನ್ ಸ್ಥಳೀಯ ನಿವಾಸಿಗಳ ಸ್ವಾಯತ್ತ ಪ್ರದೇಶ ನೊವಾಹೋ ನೇಶನ್ ಜಾಗದಲ್ಲಿರುವುದರಿಂದ ಅವರ ಪೂರ್ವಾನುಮತಿ ಕಡ್ಡಾಯ. ನಾನು ಮೊದಲ ಬಾರಿಗೆ ನೇಟಿವ್ ಅಮೆರಿಕನ್ನರ ನೋಡಿದ್ದು ಇಲ್ಲೇ. ಆದರೆ ಅವರ ಬಗ್ಗೆ ಜಾಸ್ತಿ ತಿಳಿಯಬೇಕೆನ್ನುವ ನನ್ನ ಕುತೂಹಲಕ್ಕೆ ಅವಕಾಶ ಸಿಗಲಿಲ್ಲ.
ಇದು ಭೌಗೋಳಿಕವಾಗಿ ಬಹಳ ಸೂಕ್ಷ್ಮ ಪ್ರದೇಶವಾದುದರಿಂದ ಇಲ್ಲಿ ಪ್ರವಾಸಿಗಳ ಗುಂಪುಮಾಡಿ ಪ್ರತೀ ಪ್ರವಾಸಿಯೊಟ್ಟಿಗೂ ಸ್ಥಳೀಯ ಮೂಲನಿವಾಸಿಯೊಬ್ಬರು ಮಾರ್ಗದರ್ಶಕರಾಗಿ ಬರುತ್ತಾರೆ. ಇಲ್ಲಿ ಎರಡು ಜಾಗಗಳಿವೆ ಮೇಲಣ ಕಣಿವೆ ಮತ್ತು ಕೆಳಗಣ ಕಣಿವೆ. ನಾವು ಹೋಗಿದ್ದು ಕೆಳಗಣ ಕಣಿವೆಗೆ. ಮರಳು ಮಣ್ಣಿನ ಮೇಲ್ಮೈಯಲ್ಲಿ ನೀರು ಹರಿದೂ ಹರಿದೂ ಈ ಕಣಿವೆ ಉಂಟಾಗಿದೆ. ಈ ಥರಹದ್ದೊಂದು ಮಾಯಾಲೋಕವಿದೆಯೆಂಬ ಸುಳಿವನ್ನೂ ಕೂಡಾ ಕೊಡದೇ, ಭೂಮಿಯಿಂದ ಸುಮಾರು ೧೦೦-೧೨೦ ಅಡಿ ಕೆಳಗೆ ಇದೆ.
ಅಕ್ಷರಶಃ ನಿಮಗೆ ಯಾವುದೋ ಅನ್ಯಗ್ರಹದಲ್ಲಿರುವ ಅನುಭವವಾಗುತ್ತದೆ. ಅದರಲ್ಲೂ ಸೂರ್ಯನ ಬೆಳಕು ಸರಿಯಾಗಿ ಬೀಳುವಂತ ಸಮಯಕ್ಕೆ ಹೋದರೆ ಅದ್ಭುತವಾದ ಅನುಭವವಾಗುತ್ತದೆ. ಕೆಳಗಿನಿಂದ ಆಗಸ ನೋಡಿದರೆ ಬೆಳಕಿನ ಪರಿಣಾಮದಿಂದ ಬಾನಿನ ಬಣ್ಣವೂ ಸ್ವಲ್ಪ ಬೇರೆಯದೇ ನೀಲಿಯಲ್ಲಿ ಕಾಣುತ್ತದೆ. ನಮಗೆಂತೂ ನಾವು ಹೋಗಿದ್ದು ಸಾರ್ಥಕವಾಯಿತು ಅಂತ ಅನ್ನಿಸಿತು.
ಆದರೆ ಈ ಆ್ಯಂಟಲೋಪ್ ಎಂಬ ಹೆಸರು ಯಾಕೆ ಬಂತೆಂಬ ಕುತೂಹಲ ಬಹಳ ಇತ್ತು. ವಿಷಯ ಕೆದಕಿದಾಗ, ಆ್ಯಂಟಲೋಪ್ ಅಥವಾ ಹುಲ್ಲೆ ಅಥವಾ ಕೃಷ್ಣಮೃಗಗಳು ಕೊರೆದು ಈ ಕಣಿವೆ ಉಂಟಾಗಿದೆ ಅಂತ ಸ್ಥಳೀಯ ನಿವಾಸಿಗಳು ನಂಬಿದ್ದರಂತೆ. ಕೃಷ್ಣಮೃಗದ ಕೊಂಬು ಸ್ಕ್ರೂನಂತೆ ಇರುವುದು ನಮಗೆಲ್ಲಾ ಹೊತ್ತಿದೆ. ಈ ಕಣಿವೆಯೂ ಒಂತರಾ ತಿರುಗಣೆ ಅಥವಾ ಸ್ಕ್ರೂನಲ್ಲಿ ಕೊರೆದಂತೆ ಇದೆ. ಅದಕ್ಕೆ ಹುಲ್ಲೆ ಕಣಿವೆ ಎಂಬ ಅನ್ವರ್ಥ ನಾಮ ಸರಿಹೊಂದುತ್ತದೆ.
ಕುದುರೆ ಲಾಳದ ತಿರುವು: –
ನಾನಾಗಲೇ ಹೇಳಿದಂತೆ ಕೊಲರಾಡೋ ನದಿಯಿಂದ ಅನೇಕ ಭೌಗೋಳಿಕ ವಿಸ್ಮಯ ಸ್ಥಳಗಳು ಉಂಟಾಗಿವೆ ಅವುಗಳಲ್ಲಿ ಒಂದು ಈ ಕುದುರೆ ಲಾಳದ ತಿರುವು. ಮುನ್ನೂರು ಮೀಟರ್ ಆಳದ ಕಣಿವೆಯೊಳಗೆ ಈ ನದಿ ಕುದುರೆ ಲಾಳಾಕೃತಿಯ ತಿರುವನ್ನ ತೆಗೆದುಕೊಳ್ಳುತ್ತದೆ. ಅದನ್ನ ಮೇಲಿನಿಂದ ನೋಡುವುದು ರೋಮಾಂಚನಕಾರೀ ಅನುಭವ. ಈ ಜಾಗಕ್ಕೆ ತಪುಪಲು ಒಂದೆರಡು ಕಿಲೋಮೀಟರ್‌ಗಳಷ್ಟು ದೂರವನ್ನು ಮರುಭೂಮಿಯಲ್ಲಿ ನಡೆದು ತಲುಪಬೇಕು. ಬಿಸಿಲಿನಲ್ಲಿ ನಡೆಯುವುದು ಅದರಲ್ಲೂ ಚಿಕ್ಕ ಮಕ್ಕಳ ಹೊತ್ತುಕೊಂಡು ಸಾಗುವುದು ಅತ್ಯಂತ ಕಷ್ಟಕರವಾದರೂ ಅಲ್ಲಿಗೆ ಹೋದಾಕ್ಷಣ ನಡೆದ ಆಯಾಸ ಮರೆಯಾಗುತ್ತದೆ.
ಪಾವೆಲ್ ಸರೋವರ:-
ಕುದುರೆ ಲಾಳದ ತಿರುವಿನ ಕೆಲ ಮೈಲಿಗಳಷ್ಟು ಹಿಂದೆ ಕೊಲರಾಡೋ ನದಿಗೆ ಆಣೆಕಟ್ಟೊಂದನ್ನ ಕಟ್ಟಿದ್ದಾರೆ. ಅದರ ಹಿನ್ನೀರೇ ಪಾವೆಲ್ ಸರೋವರ. ಅತ್ಯಂತ ಸುಂದರವಾದ ಈ ಸರೋವರದಲ್ಲಿ ದೋಣಿಯ ಮೇಲೆ ಸಾಗುವುದು ಅತ್ಯಂತ ಉಲ್ಲಾಸಕರ ಅನುಭವ. ಸ್ವಲ್ಪ ಒಳಹೊಕ್ಕು ಹುಡುಕಿದರೆ ಅನೇಕ ವಿಸ್ಮಯಕಾರೀ ಜಾಗಗಳು ಸಿಗುತ್ತವೆ. ಎಲ್ಲಾ ಕಡೆ ಕಾಣುವುದು ಶಿಲಾರಚನೆಗಳೇ. ಹೀಗೆ ಈ ರಾಜ್ಯದಲ್ಲಿ ಭೂಗರ್ಭ ಶಾಸ್ತ್ರಜ್ಞರಿಗೆ ಮತ್ತು ಭೂಗೋಳದಲ್ಲಿ ಆಸಕ್ತಿಯುಳ್ಳವರಿಗೆ ಅಧ್ಯಯನ ಮಾಡಲು ವಿಪುಲ ಅವಕಾಶಗಳಿವೆ.
ಇಲ್ಲಿಗೆ ಜಗತ್ತಿನ ವಿವಿಧ ಭಾಗಗಳಿಂದ ಖಗೋಳಾಸಕ್ತರು ಬಾಹ್ಯಾಕಾಶದ ಫೋಟೋ ತೆಗಯಲು ಬರುತ್ತಾರೆ. ಇಲ್ಲಿನ ಹಿನ್ನೆಲೆ ಮತ್ತು ಬೆಳಕಿನ ಮಾಲಿನ್ಯ ಅತೀ ಕಮ್ಮಿಯಾದ ಕಾರಣ ಅದ್ಭುತವಾದ ಚಿತ್ರಗಳು ಇಲ್ಲಿ ಸಿಗುತ್ತವೆ. ಹಾಗೇ ಮೈಕ್ರೋಸಾಫ್ಟಿನ ವಾಲ್ ಪೇಪರುಗಳಲ್ಲಿ ಅರಿಝೋನಾ ಮತ್ತು ಯೂಟಾದ ಕನಿಷ್ಟ ೧೦ ಚಿತ್ರಗಳಾದರೂ ಕಾಣುತ್ತವೆ.
ಮುಂದೆ ನೀವು ಪಶ್ಚಿಮ ಕರಾವಳಿ ಕಡೆ ಹೋದರೆ ಈ ರಾಜ್ಯಕ್ಕೆ ಭೇಟಿ ಕೊಟ್ಟೇ ಕೊಡುತ್ತೀರಿ. ಸಾಧ್ಯವಾದಷ್ಟೂ ಜಾಗಗಳಿಗೆ ಭೇಟಿಕೊಡಿ. ಆದರೆ 500-600 ವರ್ಷಗಳ ಹಿಂದೆ ಪಾಶ್ಚಾತ್ಯರ ಆಗಮನಕ್ಕೆ ಮುಂಚೆ ಈ ಪ್ರದೇಶಗಳು ಹೇಗಿದ್ದಿರಬಹುದು ಅಂತ ಕಲ್ಪಿಸಿಕೊಳ್ತಾ ಸಾಗಿರಿ, ಬೇರೆಯದೇ ರೀತಿಯ ಅನುಭವ ಕೊಡುತ್ತದೆ.
ಯಾತ್ರಿಕ – ಅಂಕಣಕಾರ ಗಿರಿಧರ್ ಭಟ್ ಗುಂಜಗೋಡು ಅವರ ಕಿರು ಪರಿಚಯ
–ಗಿರಿಧರ್ ಗುಂಜಗೋಡು
ಸಾಫ್ಟ್ ವೇರ್ ಉದ್ಯೋಗಿ ಮತ್ತು ಹವ್ಯಾಸಿ ಬರಹಗಾರ
ಸಿದ್ಧಾಪುರ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಇತ್ತೀಚಿನ ಸುದ್ದಿಗಳಿಗಾಗಿ, ನಮ್ಮ ವಾಟ್ಸಾಪ್ ಗ್ರೂಪ್ ಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಜಾಯಿನ್ ಆಗಿ
https://chat.whatsapp.com/HZ6kIJcdmq8GNeQb9URf9M
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv