Sachin tendulkar | ಶತಕದ ಶತಕಕ್ಕೆ ದಶಕದ ಸಂಭ್ರಮ
ಮಾರ್ಚ್ 16, 2012. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ನೂರನೇ ಅಂತರಾಷ್ಟ್ರೀಯ ಶತಕ ಸಿಡಿಸಿದ ದಿನ. ಹೀಗಾಗಿ ಇಂದು ಸೋಶಿಯಲ್ ಮೀಡಿಯಾದಲ್ಲಿ ಸಚಿನ್ ದೇವರ ನಾಮಸ್ಮರಣೆ ಶುರುವಾಗಿದೆ. ಸಚಿನ್ ರ ನೂರನೇ ಶತಕದ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸಂಭ್ರಮಿಸುತ್ತಿದ್ದಾರೆ.
ಅಂದಹಾಗೆ 2012ರ ಏಷ್ಯಾ ಕಪ್ ಭಾಗವಾಗಿ ಟೀಂ ಇಂಡಿಯಾ ಬಾಂಗ್ಲಾದೇಶಕ್ಕೆ ತೆರಳಿತ್ತು. ಈ ಟೂರ್ನಿಯ ಭಾಗವಾಗಿ ಭಾರತ ತಂಡ ಬಾಂಗ್ಲಾ ವಿರುದ್ಧ ಡಾಕಾದಲ್ಲಿ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ನೂರನೇ ಶತಕ ಸಿಡಿಸಿದ ಸಾಧನೆ ಮಾಡಿದರು. ಆ ಮೂಲಕ ಅಂತರಾಷ್ಟೀಯ ಕ್ರಿಕೆಟ್ ನಲ್ಲಿ ನೂರು ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದರು.
ಈ ಪಂದ್ಯದಲ್ಲಿ ಹೊಸ ಲುಕ್ ನೊಂದಿಗೆ ಕಣಕ್ಕಿಳಿದ ಸಚಿನ್ ತೆಂಡುಲ್ಕರ್, ಆರಂಭದಿಂದಲೂ ಬಾಂಗ್ಲಾ ಬೌಲರ್ ಗಳನ್ನ ದಂಡಿಸುತ್ತಾ 90ರ ಗಡಿ ತಲುಪಿದರು. 99ರನ್ ಗಳಿಸಿದ್ದಾಗ ಬಾಂಗ್ಲಾ ಆಲ್ ರೌಂಡರ್ ಶಕೀರ್ ಅಲ್ ಹಸನ್ ಬೌಲಿಂಗ್ ನಲ್ಲಿ ಸಚಿನ್ ಸಿಂಗಲ್ ಕದಿಯುವ ಮೂಲಕ ಸಚಿನ್ ತಮ್ಮ ನೂರನೇ ಶತಕದ ಸಂಭ್ರಮ ಆಚರಿಸಿಕೊಂಡರು.
ಅಂದಹಾಗೆ ಇದು ಬಾಂಗ್ಲಾದೇಶದ ಮೇಲೆ ಏಕದಿನ ಕ್ರಿಕೆಟ್ ನಲ್ಲಿ ಸಚಿನ್ ತೆಂಡುಲ್ಕರ್ ಗಳಿಸಿದ ಮೊದಲ ಸೆಂಚೂರಿಯಾಗಿದೆ. ಈ ಇನ್ನಿಂಗ್ಸ್ ನಲ್ಲಿ 147 ಎಸೆತಗಳನ್ನ ಎದುರಿಸಿದ ತೆಂಡುಲ್ಕರ್, 114 ರನ್ ಗಳಿಸಿದರು. ಇದರಲ್ಲಿ 12 ಬೌಂಡರಿ, ಒಂದು ಸಿಕ್ಸರ್ ಒಳಗೊಂಡಿದೆ.
ಇತ್ತ ಸಚಿನ್ ಸೆಂಚೂರಿ ಬಾರಿಸಿ ಬ್ಯಾಟ್ ಆಕಾಶಕ್ಕೆ ತೋರಿಸುತ್ತಿದ್ದಂತೆ ಇಡೀ ಕ್ರೀಡಾಂಗಣ ಕುಣಿದುಕುಪ್ಪಳಿಸಿತ್ತು. ಜೈಕಾರ, ಚಪ್ಪಾಳೆಯೊಂದಿಗೆ ಸಚಿನ್ ಸಚಿನ್ ನಾಮಸ್ಮರಣೆ ಜೋರಾಗಿತ್ತು. ಆ ಸೆಂಚೂರಿಗೆ ಇಂದಿಗೆ 10 ವರ್ಷಗಳ ಕಳೆದಿದೆ. ಹೀಗಾಗಿ ಐಸಿಸಿ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಚಿನ್ ಫೋಟೋ ಹಂಚಿಕೊಂಡು ಶುಭಕೋರಿದೆ.
ಇನ್ನು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸೆಂಚೂರಿಗಳನ್ನ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ ನೂರು ಶತಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 71 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 70 ಶತಕಗಳನ್ನು ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ.
Sachin Tendulkar Creates Mammoth Record with 100th International Century