ಬದುಕಿನ ‘ಪಯಣ’ ಮುಗಿಸಿದ ‘ಸಂಚಾರಿ ವಿಜಯ್’..
ಕನ್ನಡ ಚಿತ್ರರಂಗದ ನಟ ಸಂಚಾರಿ ವಿಜಯ್ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಅಭಿನಯದಿಂದಲೇ ಕನ್ನಡಿಗರ ಹೃದಯ ಗೆದ್ದಿದ್ದ ವಿಜಯ್ ಇಂದು ನಮ್ಮಲ್ಲೆರನ್ನು ಬಿಟ್ಟು ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಕಷ್ಟದಿಂದ ಬಂದ ನಟನೊಬ್ಬನನ್ನು ಕಳೆದು ಕೊಂಡ ಕರುನಾಡು ಇಂದು ಶೋಕಸಾಗರದಲ್ಲಿ ಮುಳುಗಿದೆ.
ಹೌದು..!
ತಮ್ಮ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿ ಮುಡಿಗೇಡಿಸಿಕೊಂಡ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಇಹಲೋಕದ ಸಂಚಾರ ಮುಗಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಮನೆ ಮಾತಾಗಿದ್ದ ಸಂಚಾರಿ ವಿಜಯ್ ಚಿತ್ರರಂಗದಲ್ಲಿ 38ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ನಾನು ಅವನಲ್ಲ ಅವಳು ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ ಸಂಚಾರಿ ವಿಜಯ್ ಬಹಳ ಕಷ್ಟದಿಂದ ಸಿನಿಮಾರಂಗದಲ್ಲಿ ಮುಂದೆ ಬಂದವರು. ರಂಗಭೂಮಿ ಹಿನ್ನೆಲೆಯಿಂದ ಬಂದ ಸಂಚಾರಿ ವಿಜಯ್ ಚಿಕ್ಕಮಗಳೂರು ಮೂಲದವರು. ಚಿಕ್ಕಮಗಳೂರಿನ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದ ಸಂಚಾರಿ ವಿಜಯ್ ಬಹಳ ವರ್ಷಗಳ ಹಿಂದೆಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದರು.
ಸಂಚಾರಿ ನಾಟಕ ತಂಡದಲ್ಲಿ ತೊಡಗಿಸಿಕೊಂಡಿದ್ದ ವಿಜಯ್ ಕುಮಾರ್ ಬಳಿಕ ಸಂಚಾರಿ ವಿಜಯ್ ಎಂದೇ ಹೆಸರಾದರು. ಸಂಚಾರಿ ವಿಜಯ್ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲೆಂದು ಇಡೀ ಚಿತ್ರರಂಗವೇ ಪ್ರಾರ್ಥನೆ ಮಾಡಿತ್ತು. ಆದರೆ, ದುರಾದೃಷ್ಟವಶಾತ್ ಸಂಚಾರಿ ವಿಜಯ್ ಕೋಮಾ ಸ್ಥಿತಿಯಲ್ಲೇ ಇಹಲೋಕ ತ್ಯಜಿಸಿದ್ದಾರೆ.
ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದು ಕಡಿಮೆ ಅವಧಿಯಲ್ಲೇ ಕರುನಾಡಿಗರ ಮನೆ ಮನದಲ್ಲಿ ಹೆಸರು ಮಾಡಿದ್ದರು. ತಮಗೆ ಸಿಗುವ ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದ ವಿಜಯ್, ತಮ್ಮ ಅಭಿಯನದಿಂದಲೇ ನೋಡುಗರನ್ನು ಮಂತ್ರ-ಮುಗ್ದರನ್ನಾಗಿಸುತ್ತಿದ್ದರು.
ಸಂಚಾರಿ ವಿಜಯ್, ನಾನು ಅವನಲ್ಲ ಅವಳು, ಒಗ್ಗರಣೆ, ಕೃಷ್ಣ ತುಳಸಿ, ಆಟಕ್ಕುಂಟು ಲೆಕ್ಕಕ್ಕಿಕ್ಕ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ, ನಾತಿಚರಾಮಿ ಸೇರಿದಂತೆ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ತೆರೆ ಕಂಡ ಆಯಕ್ಟ್ 1978 ಸಿನಿಮಾದಲ್ಲಿ ಕಮಾಂಡೋ ಪಾತ್ರ ನಿರ್ವಹಿಸಿದ್ದ ಸಂಚಾರಿ ವಿಜಯ್ ತಮ್ಮ ಎಲ್ಲ ಸಿನಿಮಾಗಳಲ್ಲೂ ವಿಭಿನ್ನವಾದ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಶ್ರುತಿ ಹರಿಹರನ್ ಜೊತೆ ಸಂಚಾರಿ ವಿಜಯ್ ಅಭಿನಯಿಸಿದ್ದ ನಾತಿಚರಾಮಿ ಸಿನಿಮಾಗೂ ಅತ್ಯುತ್ತಮ ಸಿನಿಮಾ ಎಂದು ರಾಷ್ಟ್ರ ಪ್ರಶಸ್ತಿ ಬಂದಿತ್ತು.
ಸಂಚಾರಿ ವಿಜಯ್ ಕನ್ನಡ ಮಾತ್ರವಲ್ಲದೆ ಹಲವು ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಅವರು ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಾಗಿದ್ದರೂ ಸಾಕಷ್ಟು ಅಭಿಮಾನಿಗಳನ್ನು ಸಂಪಾಸಿದ್ದರು. ತಮ್ಮ ಅಭಿನಯಕ್ಕೆ ಮೆಚ್ಚಿದ ಕನ್ನಡಿಗರು ವಿಜಯ್ ಗೆ ತಮ್ಮ ಹೃದಯದಲ್ಲಿ ಪ್ರತ್ಯೇಕ ಪೀಠ ಹಾಕಿದ್ದರು.
ಕಷ್ಟದಿಂದ ಬಂದರೂ ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿಕೊಂಡು ಅಭಿನಯದಲ್ಲಿ ತಮ್ಮದೇಯಾದ ಛಾಪು ಮೂಡಿಸುತ್ತಾ ಸಿನಿಮಾರಂಗದಲ್ಲಿ ಬೆಳೆಯುತ್ತಿದ್ದ ಸಂಚಾರಿ ವಿಜಯ್ ಇದೀಗ ಬಾಳ ಸಂಚಾರ ಮುಗಿಸಿರೋದು ದುಃಖದ ಸಂಗತಿ.. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ..










