ಬೆಂಗಳೂರು : ಟಿಕ್ ಟಾಕ್ ಸದ್ಯ ಆರು ವರ್ಷದ ಮಗುವಿನಿಂದ ಅರವತ್ತು ವರ್ಷದ ವೃದ್ಧರ ವರೆಗೂ ಎಲ್ಲರೂ ಅಡಿಕ್ಟ್ ಆಗಿರುವ ಆಪ್. ನಮ್ಮ ಯುವ ಪೀಳಿಗೆ ಇತ್ತೀಚೆಗೆ ಜಾಸ್ತಿ ಬಳಕೆ ಮಾಡುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ಟಿಕ್ ಟಾಕ್ ಕೂಡ ಒಂದು. ಇದು ಯಾವ ಮಟ್ಟಕ್ಕೆ ಪ್ರಚಲಿತದಲ್ಲಿ ಇದೆ ಎಂದರೆ ಹಲವರು ಟಿಕ್ ಟಾಕ್ ಮಾಡಲು ಹೋಗಿ ಜನರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮೊದಲು ಮನರಂಜನೆಗಾಗಿ ಆರಂಭವಾದ ಟಿಕ್ ಟಾಕ್ ಇಂದು ಹಿಂಸೆಯನ್ನು ಪ್ರೇರೇಪಿಸುತ್ತಿದೆ. ಹೀಗಾಗಿ ಟಿಕ್ ಟಾಕ್ ಆಪ್ ಅನ್ನು ಇಂಡಿಯಾದಲ್ಲಿ ಬ್ಯಾನ್ ಮಾಡುವಂತೆ ಟ್ವಿಟ್ಟರ್ ನಲ್ಲಿ ಅಭಿಯಾನವನ್ನು ಆರಂಭವಾಗಿದೆ. ಈ ಅಭಿಯಾನಕ್ಕೆ ಸ್ಯಾಂಡಲ್ ವುಡ್ ನಿರ್ದೇಶಕರೂ ಸಹ ಕೈ ಜೋಡಿದ್ದಾರೆ.
ಟ್ವಿಟ್ಟರ್ ಟ್ರೆಂಡಿಂಗ್
ಬ್ಯಾನ್ ಟಿಕ್ ಟಾಕ್ ಇನ್ ಇಂಡಿಯಾ ಎನ್ನುವ ಹ್ಯಾಶ್‌ಟ್ಯಾಗ್ ದೇಶದಲ್ಲಿ ನಲ್ಲಿ ಟ್ರೆಂಡ್ ಆಗಿದ್ದು, ಗರಿಷ್ಠ ಸಂಖ್ಯೆಯಲ್ಲಿ ಯುವಜನತೆ ಬೆಂಬಲಿಸಿ, ಟ್ವಿಟ್ಟರ್ ಮೂಲಕ ಟಿಕ್‌ಟಾಕ್ ಬ್ಯಾನ್‌ಗೆ ಒತ್ತಾಯಿಸಿದ್ದಾರೆ. ಟಿಕ್ ಟಾಕ್ ಆಪ್ ನಲ್ಲಿ ಕೆಲ ಸೆಲೆಬ್ರಿಟಿಗಳು ವಿಡಿಯೋ ಮಾಡುತ್ತಿದ್ದರೆ, ಈ ಕಡೆ ಕೆಲ ಸೆಲೆಬ್ರಿಟಿಗಳು ಅದನ್ನು ಬ್ಯಾನ್ ಮಾಡುವಂತೆ ಟ್ವೀಟ್ ಮಾಡುತ್ತಿದ್ದಾರೆ. ಈಗ ಸ್ಯಾಂಡಲ್ ವುಡ್ ನ ಸ್ಟಾರ್ ನಿರ್ದೇಶಕರಾದ ಸಂತೋಷ್ ಅನಂದ್ ರಾಮ್, ಪವನ್ ಒಡೆಯರ್ ಮತ್ತು ಎಪಿ ಅರ್ಜೂನ್ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕೆಲ ಬಾಲಿವುಡ್ ನಟರು ಕೂಡ ಕೈಜೋಡಿಸಿದ್ದಾರೆ.
ಟಿಕ್ ಟಾಕ್ ಚೀನಾ ಮೂಲದ್ದು
ಈ ಟಿಕ್ ಟಾಕ್ ಚೀನಾದ ಆಪ್ ಆಗಿದ್ದು, ಸ್ವದೇಶಿ ವಸ್ತುಗಳನ್ನು ಬಳಸಿ ಹಾಗೂ ಚೀನಾದ ವಸ್ತುಗಳನ್ನು ತಿರಸ್ಕರಿಸಬೇಕು ಎಂಬ ನಿಟ್ಟಿನಲ್ಲಿ ಕೆಲವರು ಟಿಕ್ ಟಾಕ್ ಅನ್ನು ವಿರೋಧ ಮಾಡುತ್ತಿದ್ದಾರೆ. ಇನ್ನೂ ಕೆಲವರು ಇದರಲ್ಲಿ ವಿಡಿಯೋ ಮಾಡಿ ಜನಪ್ರಿಯತೆ ಪಡೆಯುವ ಗೀಳಿಗೆ ಬಿದ್ದ ಯುವಕ-ಯುವತಿಯರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ ಎಂದು ವಾದಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಟಿಕ್ ಟಾಕ್ ಆಪ್ ಬ್ಯಾನ್ ಮಾಡುವಂತೆ ಅಭಿಯಾನ ಆರಂಭವಾಗಿದೆ.
ಯುವ ಜನತೆಯನ್ನು ಟಿಕ್ ಟಾಕ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅಭಿಪ್ರಾಯಪಟ್ಟಿದ್ದು, ಟಿಕ್ ಟಾಕ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದಿದ್ದರು.








