Sandalwood : ವಿಭಿನ್ನ ರೀತಿಯ ಪ್ರಚಾರದ ಮೂಲಕ ಗಮನ ಸೆಳೆಯುತ್ತಿದೆ ‘ಥಗ್ಸ್ ಆಫ್ ರಾಮಘಡ’ – ಡಾಲಿ ಸಾಥ್
ಟೈಟಲ್ ಹಾಗೂ ಹಾಡಿನ ಮೂಲಕ ಗಮನ ಸೆಳೆದಿರೋ ‘ಥಗ್ಸ್ ಆಫ್ ರಾಮಘಡ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಹೊಸಬರ ಹೊಸತನದ ಪ್ರಯೋಗವಿರುವ ಈ ಚಿತ್ರ ಜನವರಿ 6ರಂದು ಬಿಡುಗಡೆಯಾಗುತ್ತಿದೆ. ಬಿಡುಗಡೆಯ ಬಾಗಿಲಲ್ಲಿರುವ ಚಿತ್ರತಂಡ ವಿಭಿನ್ನ ರೀತಿಯಲ್ಲಿ ಚಿತ್ರದ ಪ್ರಮೋಶನ್ ನಡೆಸುತ್ತಿದೆ. ಚಿತ್ರದ ಪ್ರಚಾರದ ಹೊಸ ಪೋಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಗಮನ ಸೆಳೆಯುತ್ತಿದೆ. ಇದರ ಜೊತೆಗೆ ನಟರಾಕ್ಷಸ ಡಾಲಿ ಧನಂಜಯ ಸಾಥ್ ಕೂಡ ಚಿತ್ರತಂಡಕ್ಕೆ ಸಿಕ್ಕಿದೆ.
ಥಗ್ಸ್ ಆಫ್ ರಾಮಘಡ’ ಚಿತ್ರತಂಡ ಸಿನಿಮಾದ ಸಂಪೂರ್ಣ ಕೆಲಸ ಮುಗಿಸಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ತಲ್ಲೀನವಾಗಿದೆ. ಅದಕ್ಕೆಂದೇ ವಿಭಿನ್ನ ರೀತಿಯ ಪ್ರಚಾರ ಕಾರ್ಯದ ಮೊರೆ ಹೋಗಿದೆ. ಚಿತ್ರದ ಟೈಟಲ್ ಹೆಸರಿನ ರಾಮಘಡ ಪತ್ರಿಕೆ ಮೂಲಕ ಸಿನಿಮಾದ ಕ್ಯಾರೆಕ್ಟರ್ ಗಳನ್ನು ಪರಿಚಯಿಸುವ ಕೆಲಸವನ್ನು ಚಿತ್ರತಂಡ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟರ್ ಗಳು ಸಖತ್ ವೈರಲ್ ಆಗಿದ್ದು, ಸಿನಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ನಾಳೆ ಚಿತ್ರದ ಟ್ರೈಲರ್ ಬಿಡುಗಡೆ ಕೂಡ ನಡೆಯಲಿದ್ದು, ನಟ ರಾಕ್ಷಸ ಡಾಲಿ ಧನಂಜಯ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.
ಕಾರ್ತಿಕ್ ಮಾರಲಭಾವಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಸಿನಿಮಾ ‘ಥಗ್ಸ್ ಆಫ್ ರಾಮಘಡ’ ಜನವರಿ 6ರಂದು ಪ್ರೇಕ್ಷಕರೆದುರು ಬರಲು ತಯಾರಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದ ಸಿನಿಮಾವಿದು. ಅದಕ್ಕೆ ಒಂದಿಷ್ಟು ಸಿನಿಮ್ಯಾಟಿಕ್ ಟಚ್ ಕೊಟ್ಟು ಕ್ರೈಂ ಕಲ್ಟ್ ಕಥಾಹಂದರದ ಸಿನಿಮಾ ಹೆಣೆದಿದ್ದಾರೆ ಕಾರ್ತಿಕ್. ಉತ್ತರ ಕರ್ನಾಟಕದ ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದ್ದು, ನೈಜತೆಗೆ ಹತ್ತಿರವಾಗಿರಲೆಂದು ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಸೆರೆ ಹಿಡಿಯಲಾಗಿದೆ.
ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ಸೂರ್ಯಕಿರಣ್, ರಾಘವೇಂದ್ರ, ವಿಶಾಲ್ ಪಾಟೀಲ್, ರವಿ ಸಾಲಿಯನ್, ಲೋಕೇಶ್ ಗೌಡ, ಭೀಷ್ಮ, ಸುಧೀನ್ ನಾಯರ್ ಸೇರಿದಂತೆ ಹಲವು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಭಾರತ್ ಟಾಕೀಸ್ ನಡಿ ಜೈ ಕುಮಾರ್, ಕೀರ್ತಿ ರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ರಾಜೇಶ್ ಕೃಷ್ಣನ್, ಶಶಾಂಕ್ ಶೇಷಗಿರಿ, ಅನುರಾಧ ಭಟ್ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಮನು ದಾಸಪ್ಪ ಛಾಯಾಗ್ರಹಣ, ಶ್ರೀಧರ್ ಸಂಕಲನ, ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.