ಸಂಜನಾ ಗಲ್ರಾನಿ – ಪತಿ ಅಜೀಜ್ ಪಾಷಾ , ಇಬ್ಬರಿಗೂ ಕೊರೊನಾ ಪಾಸಿಟಿವ್..!
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಹಾಗೂ ಪತಿ ಅಜೀಜ್ ಪಾಷಾ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿರುವುದಾಗಿ ನಟಿ ಸಂಜನಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಕುಟುಂಬದಲ್ಲಿಯೇ ವೈದ್ಯರು ಇದ್ದಾರೆ. ಅವರು ಕೊರೊನಾ ವಾರಿಯರ್ ಆಗಿದ್ದು, ಅವರು ಸಮಾಜಕ್ಕೆ ತಮ್ಮ ಸೇವೆ ನೀಡಲೇಬೇಕು. ನೀವು ಮನೆ ಬಿಟ್ಟು ಹೋಗಬೇಡಿ, ಸಮಾಜಸೇವೆ ಮಾಡಬೇಡಿ. ನಿಮ್ಮ ಸುರಕ್ಷತೆ ನೋಡಿಕೊಳ್ಳಿ ಅಂತ ನಾನು ಅವರಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಸ್ವಲ್ಪ ಕೆಮ್ಮು ಇದೆ ಎಂದು ಬರೆದುಕೊಂಡಿದ್ದಾರೆ.
ನನಗೆ 7ನೇ ತರಗತಿಯಿಂದಲೇ ಉಬ್ಬಸ ಇದೆ. ಹೀಗಾಗಿ ಮೊದಲೇ ಉಸಿರಾಟದ ಸಮಸ್ಯೆ ಇರುವುದರಿಂದ ನಾನು ಅಂದಿನಿಂದಲೂ ಅದಕ್ಕಾಗಿ ಪಂಪ್ ಬಳಸುತ್ತೇನೆ. ಮುಂದಿನ ದಿನಗಳಲ್ಲಿ ಕೊರೊನಾ ನನ್ನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ಭಾವಿಸುತ್ತೇನೆ. ಅಲ್ಲದೆ ನನ್ನಂತೆಯೇ ಉಸಿರಾಟದ ತೊಂದರೆ ಇರುವ ಕೊರೊನಾ ರೋಗಿಗಳಿಗೆ ಕೆಲವೊಂದು ವ್ಯಾಯಾಮಗಳನ್ನು ಈ ಸಮಯದಲ್ಲಿ ಹೇಳಿಕೊಡುವ ಪ್ರಯತ್ನ ಮಾಡುತ್ತೇನೆ. ಹೀಗಾಗಿ ದಯವಿಟ್ಟು ನಾನು ಅಪ್ಲೋಡ್ ಮಾಡುತ್ತಿರುವ ವೀಡಿಯೋಗಳನ್ನು ನೋಡಿ ಎಂದು ಹೇಳಿದ್ದಾರೆ.
ಸಂಜನಾ ಗಲ್ರಾನಿ ನಿನ್ನೆಯಷ್ಟೆ ಪತಿಯ ಕುಟುಂಬದೊಂದಿಗೆ ಡಿನ್ನರ್ ಪಾರ್ಟಿ ಮಾಡಿದ್ದರು. ಇಂದು ಸಂಜನಾಗೆ ಪಾಸಿಟಿವ್ ಆಗಿದ್ದು ಸಂಜನಾ ಅವರ ಪತಿಯ ಕುಟುಂಬದವರಿಗೂ ಆತಂಕ ಎದುರಾಗಿದೆ. ನನಗೆ ಕೊರೊನಾ ಪಾಸಿಟಿವ್ ಆಗಿದೆ. ನನಗೆ ನನ್ನ ಪತಿಯಿಂದಲೇ ಕೊರೊನಾ ಸೋಂಕು ಆಗಿದೆ. ನನ್ನ ಪತಿ ವೈದ್ಯರಾಗಿದ್ದು ಪ್ರತಿ ದಿನ ಅವರು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರಬಲವಾದ ಕೊರೊನಾ ಎರಡನೇ ಅಲೆಯನ್ನು ಧೈರ್ಯದಿಂದ ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ.








