ಬೆಂಗಳೂರು : ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಸವದಿ ಎಂಬ ಪೋಸ್ಟ್ ಗಳು ಹರಿದಾಡುತ್ತಿದ್ದು, ಈ ಬಗ್ಗೆ ಡಿಸಿಎಂ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಡಿಸಿಎಂ ಸವದಿ, “ನನ್ನ ದೆಹಲಿ ಭೇಟಿಯ ಬಗ್ಗೆ ಅನಗತ್ಯವಾದ ಪ್ರಚಾರ ಬೇಡ. ದೆಹಲಿಯಲ್ಲಿ ವರಿಷ್ಠರೊಂದಿಗಿನ ಭೇಟಿ ಪೂರ್ವ ನಿರ್ಧಾರಿತವಾಗಿದ್ದ ಕಾರ್ಯಕ್ರಮ ಅದರ ಬಗ್ಗೆ ಕಲ್ಪಿತ ವರದಿ ದಯವಿಟ್ಟು ಬೇಡ. ನನ್ನ ಕ್ಷೇತ್ರದ ಹಿತೈಷಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ದಯವಿಟ್ಟು ಆಧಾರ ರಹಿತ ಪೋಸ್ಟ್ ಗಳನ್ನು ಮಾಡದಿರಿ” ಎಂದು ಮನವಿ ಮಾಡಿದ್ದಾರೆ.
ಮುಂದುವರಿದು “ಕ್ಷೇತ್ರದ ಜನತೆ ಪೋಸ್ಟ್ ಗಳನ್ನು ಹಾಕಿದ್ದಾರೆ ಎನ್ನುತ್ತಾ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡದಿರುವಂತೆ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಮನವಿ ಮಾಡುತ್ತಿದ್ದೇನೆ. ಕೋವಿಡ್ ಸಮಸ್ಯೆಯನ್ನು ಎದುರಿಸಿ ಒಂದು ವರ್ಷ ಉತ್ತಮ ಆಡಳಿತ ನೀಡಿರುವ ನಾವೆಲ್ಲರೂ ಪಕ್ಷಕ್ಕೆ ನಿಷ್ಠರು ಹಾಗೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರು”
“ರಾಜಕೀಯ ವಿಪ್ಲವಗಳ ಬಗ್ಗೆ ಮಾಧ್ಯಮಗಳು ಅಪ್ರಬುದ್ಧ ವಿಶ್ಲೇಷಣೆಯಲ್ಲಿ ತೊಡಗುವುದು ಸಾಮಾಜಿಕ ಸ್ವಾಸ್ಥ್ಯಕ್ಕೆ ಹಾನಿಕರ. ನಮ್ಮ ಲಕ್ಷ್ಯ ಆರೋಗ್ಯ ಕ್ರಾಂತಿಯ ಕಡೆಗೆ ಇರಬೇಕಾದ ಹೊತ್ತಿದು. ಸ್ವಾಸ್ಥ್ಯವನ್ನು ಕಾಪಾಡಿಕೊಂಡು, ಬಹುಬೇಗ ಒದಗಿರುವ ಮಹಾಮಾರಿಯ ಸಂಕಟದಿಂದ ಹೊರಬರಬೇಕಾಗಿರುವ ಸಮಯ. ಮಾಧ್ಯಮ ಮಿತ್ರರ ಆದ್ಯತೆಯು ಅದೇ ಆಗಿರಲಿ” ಎಂಬ ಆಶಯ ಎಂದು ತಿಳಿಸಿದ್ದಾರೆ.








