ಬಿಸಿಸಿಐನಿಂದ ಶ್ರೀಲಂಕಾ ಕ್ರಿಕೆಟ್ ಗೆ ಅಪಮಾನ – ಮಾಜಿ ನಾಯಕ ಅರ್ಜುಣ್ ರಣತುಂಗಾ ಆಕ್ರೊಶ
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ 1996ರ ವಿಶ್ವ ಕಪ್ ವಿಜೇತ ತಂಡದ ಹೀರೋ ಅರ್ಜುನ್ ರಣತುಂಗಾ ಅವರು ತನ್ನದೇ ದೇಶದ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿ ಕಾರಿದ್ದಾರೆ.
ಭಾರತದ ವಿರುದ್ಧ ಶ್ರೀಲಂಕಾ ಇದೇ ತಿಂಗಳ 13ರಿಂದ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಸರಣಿಗಳ ಪಂದ್ಯವನ್ನು ಆಡಲಿದೆ. ಟೀಮ್ ಇಂಡಿಯಾವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಹಾಗೇ ತಂಡಕ್ಕೆ ಕೋಚ್ ಆಗಿ ರಾಹುಲ್ ದ್ರಾವಿಡ್ ಮಾರ್ಗದರ್ಶನ ನೀಡಲಿದ್ದಾರೆ.
ಆದ್ರೆ ಅರ್ಜುನ್ ರಣತುಂಗಾ ಪ್ರಕಾರ ಇದು ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಅವಮಾನ. ಈ ಸರಣಿಯ ಆತಿಥ್ಯ ವಹಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸರಣಿಯನ್ನು ಆಡಲು ಟೀಮ್ ಇಂಡಿಯಾ ಎರಡನೇ ದರ್ಜೆಯ ತಂಡವನ್ನು ಆಯ್ಕೆ ಮಾಡಿಕೊಂಡಿದೆ. ಇದು ಅಪಮಾನ ಎಂದು ಅರ್ಜುನ್ ರಣತುಂಗಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರಣಿಗೆ ಮುನ್ನ ಟೀಮ್ ಇಂಡಿಯಾ ವಿರಾಟ್ ಕೊಹ್ಲಿಯ ಸಾರಥ್ಯದಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದೆ. ಇಂಗ್ಲೆಂಡ್ ನಲ್ಲಿ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದ್ದು, ಆಗಸ್ಟ್ 4ರಿಂದ ಆರಂಭವಾಗಲಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಆಡಲು ಇಂಗ್ಲೆಂಡ್ ಗೆ ವಿರಾಟ್ ಕೊಹ್ಲಿ ಬಳಗ ತೆರಳಿತ್ತು. ಅಲ್ಲದೆ ಕೋವಿಡ್ ಮಾರ್ಗಸೂಚಿಯಿಂದಾಗಿ ವಿರಾಟ್ ಪಡೆಯನ್ನು ಇಂಗ್ಲೆಂಡ್ ನಲ್ಲೇ ಉಳಿದುಕೊಳ್ಳಲು ಬಿಸಿಸಿಐ ತೀರ್ಮಾನ ತೆಗೆದುಕೊಂಡಿತ್ತು. ಇನ್ನೊಂದೆಡೆ ಶಿಖರ್ ಧವನ್ ಸಾರಥ್ಯದಲ್ಲಿ ಬಲಿಷ್ಠ ತಂಡವನ್ನೇ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ-ಟ್ವೆಂಟಿ ಸರಣಿಗೂ ಆಯ್ಕೆ ಮಾಡಿತ್ತು.
ಈ ನಡುವೆ ಅರ್ಜುನ್ ರಣತುಂಗಾ ಅವರು ಈಗೀನ ಕ್ರಿಕೆಟ್ ಮಂಡಳಿಯ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಶಿಸ್ತು ಇಲ್ಲ. ಟಿವಿ ಹಕ್ಕು ಮತ್ತು ದುಡ್ಡಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಡಳಿತ ವೈಖರಿಯ ಬಗ್ಗೆ ಕಿಡಿ ಕಾರಿದ ರಣತುಂಗಾ, ಶ್ರೀಲಂಕಾ ತಂಡ ಸತತವಾಗಿ ಐದು ಟಿ-ಟ್ವೆಂಟಿ ಸರಣಿಗಳನ್ನು ಸೋತಿದೆ. ಇದೀಗ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲೂ ಮುಖಭಂಗ ಅನುಭವಿಸಿದೆ. ಮೂವರು ಆಟಗಾರರು ಜೈವಿಕ ಸುರಕ್ಷತೆಯನ್ನು ಕಾಯ್ದುಕೊಳ್ಳದ ಹಿನ್ನಲೆಯಲ್ಲಿ ಒಂದು ವರ್ಷ ನಿಷೇಧವನ್ನು ಹೇರಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಮನಸ್ಸಿಗೆ ಬಂದ ಹಾಗೇ ನಿರ್ಧಾರ ತೆಗೆದುಕೊಳ್ಳುತ್ತಿದೆ. ಈ ಮಂಡಳಿಯ ಪದಾಧಿಕಾರಿಗಳನ್ನು ಉಚ್ಛಾಟನೆ ಮಾಡದೇ ಇದ್ರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಉಳಿಗಾಲವಿಲ್ಲ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.