ಕೆ.ಎಲ್.ರಾಹುಲ್ ಜೊತೆ ಸೆಲೆಕ್ಟರ್ಸ್ ಫುಟ್ ಬಾಲ್ : ಕನ್ನಡಿಗರಿಗೆ ಯಾಕಿಷ್ಟು ಅನ್ಯಾಯ..?
ಕಿಂಗ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಬಳಿಕ ಟೀಂ ಇಂಡಿಯಾದ ಆಧಾರ ಸ್ತಂಭ ಯಾರು..? ಎಂಬ ಪ್ರಶ್ನೆಗೆ ತಟ್ ಅಂತ ಬರೋ ಉತ್ತರ ಕೆ.ಎಲ್.ರಾಹುಲ್..! ಸದ್ಯ ಟೀಂ ಇಂಡಿಯಾದಲ್ಲಿ ವಿರಾಟ್ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ದರ್ಬಾರ್ ನಡೆಸುತ್ತಿದ್ದಾರೆ. ಅದೆಷ್ಟೋ ಮ್ಯಾಚ್ ಗಳನ್ನು ಈ ಇಬ್ಬರು ಆಟಗಾರರು ಸಿಂಗಲ್ ಹ್ಯಾಂಡೆಡ್ ಆಗಿ ಗೆಲ್ಲಿಸಿಕೊಟ್ಟಿದ್ದಾರೆ. ಆದ್ರೆ ಇವರ ಬಳಿಕ ಯಾರು ಅಂತ ಪ್ರಶ್ನೆ ಬಂದ್ರೆ ಸದ್ಯದ ಮಟ್ಟಿಗೆ ಆ ಭರವಸೆಯನ್ನ ಮೂಡಿಸಿರುವುದು ಕನ್ನಡಿಗ ಕೆ.ಎಲ್.ರಾಹುಲ್..!!
ಹೌದು..! ಈಗಿನ ಕ್ರಿಕೆಟರ್ಸ್ ನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಬಳಿಕ ಒಬ್ಬ ಟಾಪ್ ಕ್ಲಾಸ್ ಕ್ರಿಕೆಟರ್ ಅಂದ್ರೆ ಅದು ಕೆ.ಎಲ್.ರಾಹುಲ್. ಇದ್ರಲ್ಲಿ ಯಾವುದೇ ಅನುಮಾನ ಪಡುವ ಅವಶ್ಯಕತೆಯೇ ಇಲ್ಲ. ಯಾಕೆಂದ್ರೆ ರಾಹುಲ್ ಪಕ್ಕಾ ಕ್ಲಾಸ್ ಪ್ಲೇಯರ್. ಆಟಗಾರ ಬಾರಿಸುವ ಶಾಟ್ ಗಳಿಂದ ಒಬ್ಬ ಸಾಮಾನ್ಯ ಪ್ಲೇಯರ್ ಗೆ ಒಬ್ಬ ಕ್ಲಾಸ್ ಪ್ಲೇಯರ್ ಗೆ ಇರುವ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತೆ. ಗ್ಯಾಪ್ ಹುಡುಕುವುದು, ಟೈಮಿಂಗ್, ಬ್ಯಾಟಿಂಗ್ ಟೆಕ್ನಿಕ್, ರೇಂಜಿಂಗ್ ಶಾಟ್ಸ್ ಸೇರಿದಂತೆ ಕ್ರಿಕೆಟ್ ಬುಕ್ ನ ಎಲ್ಲ ಶಾಟ್ ಗಳನ್ನ ರಾಹುಲ್ ಕರಗತ ಮಾಡಿಕೊಂಡಿದ್ದಾರೆ. ಮುಖ್ಯವಾಗಿ ಭಾರತೀಯ ಕ್ರಿಕೆಟ್ ನಲ್ಲಿ ಕೆಲ ಅಪರೂಪದ ಬ್ಯಾಟ್ಸ್ ಮೆನ್ ಗಳು ಮಾತ್ರ ಸ್ವೀಪ್ ಶಾಟ್ ಗಳನ್ನ ಆಡುತ್ತಾರೆ. ಅದರಲ್ಲಿ ರಾಹುಲ್ ಕೂಡ ಒಬ್ಬರು..! ರಾಹುಲ್ ಸ್ವೀಪ್ ಜೊತೆಗೆ ರಿವರ್ಸ್ ಸ್ವೀಪ್ ಕೂಡ ಮಾಡುವುದು ವಿಶೇಷದ ಸಂಗತಿ. ಕೇವಲ ಕ್ಲಾಸ್ ಶಾಟ್ ಗಳಲ್ಲದೇ ಬಿಗ್ ಸಿಕ್ಸರ್ ಗಳನ್ನ ಹೊಡೆಯೋದ್ರಲ್ಲಿ ರಾಹುಲ್ ಪಂಟರ್ ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಂದು ಮಾತಿನಲ್ಲಿ ಹೇಳೋದಾದ್ರೆ ರಾಹುಲ್ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿಯ ಕ್ಲಾಸ್, ರೋಹಿತ್ ರ ಮಾಸ್ ಎರಡೂ ಒಳಗೊಂಡಿರುತ್ತೆ. ಯಾವುದೇ ರೀತಿಯಿಂದ ನಾವು ಯೋಚನೆ ಮಾಡಿದ್ರೂ ಕೆ.ಎಲ್. ರಾಹುಲ್, ವಿರಾಟ್, ರೋಹಿತ್ ರ ಉತ್ತರಾಧಿಕಾರಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಜೊತೆಗೆ ರಾಹುಲ್ ನಾಯಕತ್ವ ಗುಣಗಳಿರುವ ಜೀನಿಯಸ್ ಕೂಡ ಹೌದು..! ಮುಂದೊಂದು ದಿನ ರಾಹುಲ್ ಟೀಂ ಇಂಡಿಯಾ ಸಾರಥ್ಯ ವಹಿಸುವುದು ಕೂಡ ನೂರಕ್ಕೆ ನೂರು ಸತ್ಯ.
ರಾಹುಲ್ ಟ್ಯಾಲೆಂಟೆಡ್ ಪ್ಲೇಯರ್ ನಿಜ. ಆದ್ರೆ ಅಂಕಿಅಂಶಗಳು ಮಾತ್ರ ಬೇರೆಯ ಕಹಾನಿಯನ್ನ ಸಾರುತ್ತಿವೆ. ಏಕದಿನ, ಟಿ 20 ಯಲ್ಲಿ ರಾಹುಲ್ ಅಬ್ಬರಿಸಿದ್ರೂ ಟೆಸ್ಟ್ ನಲ್ಲಿ ಜಾದೂ ಮಾಡಿಲ್ಲ. ರಾಹುಲ್ ತನ್ನ ಟ್ಯಾಲೆಂಟ್ ಗೆ ತಕ್ಕ ಆಟವಾಡುತ್ತಿಲ್ಲ ಯಾಕೆ ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ರಾಹುಲ್ ಈಗ ಒಂದು ಹಂತಕ್ಕೆ ಸೇರಿದ್ದಾರೆ. ಆದ್ರೆ ಇಲ್ಲಿಂದ ಅವರು ವಿರಾಟ್ ಕೊಹ್ಲಿಯ ರೀತಿ ಟೇಕಾಪ್ ಆಗುತ್ತಿಲ್ಲ ಯಾಕೆ..? ಅದಕ್ಕೆ ಕಾರಣ ಯಾರು..? ಅಂತ ಹುಡುಕಿದ್ರೆ ಸೆಲೆಕ್ಟರ್ ಗಳ ಕಡೆ ಕೈ ತೋರಿಸಬೇಕಾಗುತ್ತದೆ. ಯಾಕೆಂದ್ರೆ ಟೀಂ ಇಂಡಿಯಾ ಸೆಲೆಕ್ಟರ್ ಗಳು ಅಕ್ಷರಶಃ ಕನ್ನಡಿಗ ಕೆ.ಎಲ್.ರಾಹುಲ್ ಜೊತೆ ಫುಲ್ ಬಾಲ್ ಆಡಿಕೊಂಡಿದ್ದಾರೆ.
ಕೆ.ಎಲ್. ರಾಹುಲ್ ಟೆಸ್ಟ್ ಮ್ಯಾಚ್ ಆಡಿ ಬರೋಬ್ಬರಿ ಎರಡು ವರ್ಷ ಕಳೆದಿದೆ. ಆದ್ರೂ ಕೆ.ಎಲ್ ತಂಡದಲ್ಲಿರುತ್ತಾರೆ. ಮುಖ್ಯವಾಗಿ ಆಸ್ಟ್ರೇಲಿಯಾ ಟೂರ್ನಿಯಲ್ಲಿಂತೂ ರಾಹುಲ್ ಬರೋಬ್ಬರಿ ಮೂರು ತಿಂಗಳು ಬೆಂಚ್ ಕಾದಿದ್ದಾರೆ. ತಂಡದಲ್ಲಿ ಕೊಹ್ಲಿ, ರೋಹಿತ್ ಇಲ್ಲದಿದ್ದಾಗಲೂ ರಾಹುಲ್ ಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಗಲಿಲ್ಲ. ಈ ಪುರುಷಾರ್ಥಕ್ಕೆ ರಾಹುಲ್ ತಂಡದಲ್ಲಿ ಯಾಕಿರಬೇಕು.. ಈಗಲೂ ಇಂಗ್ಲೆಂಡ್ ಟೂರಿಗೆ ರಾಹುಲ್ ಸೆಲೆಕ್ಟ್ ಆಗಿದ್ದಾರೆ. ಆದ್ರೆ ಅಲ್ಲಿ ಆಡಿಸುತ್ತಾರಾ ಅನ್ನೋದಕ್ಕೆ ಸ್ಪಷ್ಟ ಉತ್ತರವಿಲ್ಲ. ಇನ್ನು ಏಕದಿನ, ಟಿ 20 ವಿಚಾರಕ್ಕೆ ಬಂದ್ರೆ ರಾಹುಲ್ ರನ್ನ ಮೇಲಿಂದ ಕೆಳಕ್ಕೆ ಪದೇ ಪದೇ ಸ್ಲಾಟ್ ಚೇಂಜ್ ಮಾಡುತ್ತಲೇ ಇರುತ್ತಾರೆ. ಒಂದು ಬಾರಿ ಓಪನ್ ಮಾಡಿದ್ರೆ, ಇನ್ನೋಂದು ಮಿಡಲ್ ನಲ್ಲಿ ಬ್ಯಾಟ್ ಬೀಸ್ತಾರೆ. ಇತ್ತೀಚಿನ ಒಂಭತ್ತು ಪಂದ್ಯಗಳಲ್ಲಿ ನಂಬರ್ ಐದನೇ ಸ್ಥಾನದಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಪ್ರತಿ ಟೂರ್ನಿಯಲ್ಲೂ ರಾಹುಲ್ ಸ್ಲಾಟ್ ಬದಲಾಗುತ್ತಲೇ ಇರುತ್ತದೆ. ಇನ್ನೊಂದು ವಿಚಾರ ಏನಂದ್ರೆ ಕೆಲವೊಂದು ಬಾರಿ ರಾಹುಲ್ ಯೇ ನಮ್ಮ ವಿಕೆಟ್ ಕೀಪರ್ ಅಂತಾ ಹೇಳ್ತಾರೆ. ಮುಂದಿನ ವಿಶ್ವಕಪ್ ನಲ್ಲಿ ರಾಹುಲ್ ನಮ್ಮ ವಿಕೆಟ್ ಕೀಪರ್ ಅಂತಾ ತಂಡದ ಪ್ರಮುಖರೇ ಹೇಳ್ತಾರೆ. ಆದ್ರೆ ಪಂತ್ ಪಾರ್ಮ್ ಗೆ ಬಂದ ಕೂಡ ರಾಹುಲ್ ಸೈಡ್ ಲೈನ್ ಆಗ್ತಾರೆ. ಬಲವಂತವಾಗಿ ರಾಹುಲ್ ಕೈಯಲ್ಲಿದ್ದ ಗ್ಲೌಸ್ ಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಹೀಗಾಗಿ ರಾಹುಲ್ ನಾನು ಓಪನ್ ಮಾಡ್ತೀನಾ..? ಮಿಡಲ್ ಆರ್ಡರ್ ನಲ್ಲಿ ಬ್ಯಾಟ್ ಬೀಸಬೇಕಾ..? ಕೀಪಿಂಗ್ ಮಾಡ್ಬೇಕಾ..? ಅನ್ನೋ ಗೊಂದಲದ್ದರಿದಾರೆ. ಇದಲ್ಲದೇ ತಂಡದಲ್ಲಿ ಶಾಶ್ವತ ಸ್ಥಾನ ಇಲ್ಲದಿರೋದು ಕೂಡ ರಾಹುಲ್ ಪ್ರದರ್ಶನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ರಾಹುಲ್ ಗಿರುವ ಟ್ಯಾಲೆಂಟ್ ಗೆ ತಕ್ಕ ಅಂಕಿ ಅಂಶಗಳು ನಮಗೆ ಕಾಣೋದಿಲ್ಲ. ಇದಕ್ಕೆ ಸೆಲೆಕ್ಟರ್ ಗಳೇ ನೇರ ಕಾರಣ ಅನ್ನೋದ್ರಲ್ಲಿ ಸಂಶಯವಿಲ್ಲ.
ಇದು ರಾಹುಲ್ ವಿಚಾರವಾದ್ರೆ ಮನೀಷ್ ಪಾಂಡೆ ಕೂಡ ಇದೇ ರೀತಿ ಟೀಂ ಇಂಡಿಯಾದಿಂದ ದೂರವಾಗಿದ್ದಾರೆ. ಮೊದ ಮೊದಲು ಟೀಂ ಇಂಡಿಯಾದ ಫಿನಿಶರ್ ಅಂತ ಗುರುತಿಸಿಕೊಂಡ ಮನೀಷ್ ವಿಚಾರದಲ್ಲೂ ಸೆಲೆಕ್ಟರ್ ಗಳು ಆಟವಾಡಿದ್ರು. ತಂಡದಲ್ಲಿ ಸೂಕ್ತ ಸ್ಥಾನ ನೀಡದೇ ಸತಾಯಿಸಿದ್ರು.