ಸೆಲ್ಫಿ ಗೀಳಿಗೆ ಒಂದೇ ಕುಟುಂಬದ 6 ಮಂದಿ ಬಲಿ….
ಜಲಪಾತದ ನೀರಿಗಿಳಿದು ಸೆಲ್ಪಿ ತೆಗದುಕೊಳ್ಳಲು ಮುಂದಾದ ಇಬ್ಬರು ಮಹಿಳೆಯರು ಮತ್ತು ಕಾಪಾಡಲು ಮುಂದಾದ ಕುಟುಂಬಸ್ಥರು ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್ ಗಢದ ಕೊರಿಯಾ ಜಿಲ್ಲೆಯ ರಾಮದಾಯ ಜಲಪಾತದಲ್ಲಿ ನಡೆದಿದೆ.
ಕುಟುಂಬದ ಇಬ್ಬರು ಮಹಿಳೆಯರು ಸೆಲ್ಫಿ ತೆಗೆದುಕೊಳ್ಳಲು ಜಲಪಾತಕ್ಕೆ ಇಳಿದಾಗ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅವರನ್ನ ಕಾಪಾಡುವ ಪ್ರಯತ್ನದಲ್ಲಿ ಇತರ ಕುಟುಂಬ ಸದಸ್ಯರು ನಿರಿಗಿಳಿದು ಮುಳುಗಿದ್ದಾರೆ.
ಭಾನುವಾರ ಸಂಜೆ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸೋಮವಾರ ಬೆಳಗ್ಗೆ ಇತರ ಮೂವರ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಘಟನೆಯಲ್ಲಿ ಸಾವಿನ ಸಂಖ್ಯೆ ಆರಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರೆಲ್ಲರೂ ಮಧ್ಯಪ್ರದೇಶ ಮೂಲದ 15 ಸದಸ್ಯರ ಕುಟುಂಬದವರು ಎಂದು ಗುರುತಿಸಲಾಗಿದೆ. ಕೊಟಾಡೋಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ರಾಮದಾಹ ಜಲಪಾತ ರಾಜ್ಯದ ರಾಜಧಾನಿ ರಾಯ್‌ಪುರದಿಂದ 300 ಕಿ.ಮೀ ದೂರದಲ್ಲಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಜಲಪಾತದ ಬಳಿ ನೀರಿಗಿಳಿಯದಂತೆ ಎಚ್ಚರಿಕೆ ಫಲಕ ಹಾಕಿದ್ದರೂ, ಪ್ರವಾಸಿಗರು ಆಳವಾದ ನೀರಿನಲ್ಲಿ ಇಳಿದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








