ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಮತದಾರರಿರುವ ಲಿಂಗಾಯತರನ್ನು ಸೆಳೆಯುವುದಕ್ಕಾಗಿ ತಂತ್ರ- ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಲಿಂಗಾಯತ ಸಿಎಂ (Lingayat CM) ಅಸ್ತ್ರ ಬಳಸಲು ಬಿಜೆಪಿ ಮುಂದಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಬಿಜೆಪಿ ವಿರುದ್ಧ ನೇರಾನೇರ ಸಮರ ಆರಂಭವಾಗಿದೆ.
ಬಿಜೆಪಿಗೆ (BJP) ಟೆನ್ಷನ್ ಹೆಚ್ಚಾಗಿದ್ದು, ಲಿಂಗಾಯತರ ಕಡೆಗಣನೆ ಆರೋಪದಿಂದ ಚುನಾವಣೆ ಹೊಡೆತದ ಆತಂಕ ಎದುರಾಗಿದೆ. ಈ ಲಿಂಗಾಯತ ಸಿಎಂ ಟೆನ್ಷನ್ ವಿಚಾರಕ್ಕೆ ಅಮಿತ್ ಶಾ (Amit Shah) ತಮ್ಮದೇ ಆದ ಸೂತ್ರವೊಂದನ್ನು ನೀಡಿದ್ದಾರೆ.. ಬೆಂಗಳೂರಿನಲ್ಲಿ ರಾಜ್ಯ ನಾಯಕರ ಜೊತೆ ನಡೆಸಿದ ಸಭೆಯಲ್ಲಿ ಲಿಂಗಾಯತ ಕಡೆಗಣನೆ ಅಸ್ತ್ರ ಎದುರಿಸಲು ರಾಜ್ಯ ನಾಯಕರಿಗೆ ಅಮಿತ್ ಶಾ ತಂತ್ರ ನೀಡಿದ್ದಾರೆ. ಈ ಲಿಂಗಾಯತ ದಾಳವನ್ನು ಚುನಾವಣೆ ಮುಗಿಯುವವರೆಗೂ ಬಳಕೆ ಮಾಡುವಂತೆ ತಾಕೀತು ಮಾಡಿದ್ದಾರೆ.
ಲಿಂಗಾಯತ ಸಿಎಂ ದಾಳ ಕಡೆಯವರೆಗೂ ಇರಿಸಿಕೊಳ್ಳಿ. ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಗಿಂತಲೂ (Congress) ಬಿಜೆಪಿಯ ಕೊಡುಗೆಯೇ ಹೆಚ್ಚಿದ್ದು, ಕಾಂಗ್ರೆಸ್ ಕಣ್ಣು ಒರೆಸುವ ತಂತ್ರಗಳಿಂದ ಸಮಯ ಸಾಧಕ ಆಟವಾಡುತ್ತಿದೆ. ಇಲ್ಲಿಯವರೆಗೆ ಇಬ್ಬರು ಲಿಂಗಾಯತ ಸಮುದಾಯದವರಿಗೆ ಸಿಎಂ ಸ್ಥಾನ ನೀಡಿದ್ದು, ಮಾತ್ರವಲ್ಲದೇ ಅತೀ ಹೆಚ್ಚು ಟಿಕೆಟ್ ನೀಡಿ ಅತೀ ಹೆಚ್ಚು ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಿದೆ.
ಬಿಜೆಪಿ ಲಿಂಗಾಯತ ನಾಯಕರಿಗೆ ಸೂಕ್ತ ಸ್ಥಾನಮಾನ, ಗೌರವ, ಪದವಿ ಅವಕಾಶ ನೀಡಿದ್ದರೆ, ಕಾಂಗ್ರೆಸ್ ಒಬ್ಬರಿಗೂ ಸಿಎಂ ಹುದ್ದೆ ಕೊಟ್ಟಿಲ್ಲ. ಸಿಎಂ ಆಗಿದ್ದ ವಿರೇಂದ್ರ ಪಾಟೀಲರನ್ನು ಕಾಂಗ್ರೆಸ್ ಹೀನಾಯವಾಗಿ ನಡೆಸಿಕೊಂಡು ಕೇವಲ ಒಂಭತ್ತೇ ತಿಂಗಳಿಗೆ ಸಿಎಂ ಹುದ್ದೆ ಕಿತ್ತುಕೊಂಡು ಅಪಮಾನ ಮಾಡಿತು ಎಂದು ಆರೋಪಿಸಿದ್ದಾರೆ.
ಲಕ್ಷ್ಮಣ ಸವದಿ ಚುನಾವಣೆಯಲ್ಲಿ ಸೋತಿದ್ದರೂ ಪರಿಷತ್ಗೆ ಆಯ್ಕೆ ಮಾಡಿ ಡಿಸಿಎಂ ಮಾಡಲಾಗಿತ್ತು. ಜಗದೀಶ್ ಶೆಟ್ಟರ್ ಅವರಿಗೆ ಎಲ್ಲ ಪದವಿ ನೀಡಿ ಸಿಎಂ ಹುದ್ದೆ ನೀಡಿ ಗೌರವ ನೀಡಲಾಗಿತ್ತು. ಪಕ್ಷದಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿದರೂ ಈಗ ಪಕ್ಷದ್ರೋಹ ಮಾಡಿ ಹೋಗಿದ್ದಾರೆ. ಈ ವಿಚಾರವನ್ನು ಮನವರಿಕೆ ಮಾಡಿ ಜಾಗೃತಿ ಮೂಡಿಸಿ ಮತದಾರರ ಗೊಂದಲವನ್ನು ತಪ್ಪಿಸಿ ಎಂದು ಹಳಿದ್ದಾರೆ.