ಬಾಂಗ್ಲಾ ಕ್ರಿಕೆಟ್ ಆಟಗಾರ ಶಕೀಬ್ ಅಲ್ ಹಸನ್ ಈಗ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ. ಈ ಮಧ್ಯೆ ಅಭಿಮಾನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಭಾನುವಾರ ನಡೆದಿದ್ದ ಮತದಾನದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನೂಕುನುಗ್ಗಲಿನ ವೇಳೆ ಕುಪಿತಗೊಂಡ ಶಕೀಬ್ ತಾಳ್ಮೆ ಕಳೆದುಕೊಂಡಿದ್ದಾರೆ. ಹತ್ತಿರದಲ್ಲಿದ್ದ ವ್ಯಕ್ತಿಯೊಬ್ಬರ ಕಪಾಳಕ್ಕೆ ಬಾರಿಸಿದ್ದಾರೆ. ಶಕೀಬ್ ಅಲ್ ಹಸನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಶಕೀಬ್ ಅಲ್ ಹಸನ್ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಆಡಳಿರೂಢ ಪಕ್ಷ ಹವಾಮಿ ಲೀಗ್ನಿಂದ ಮಗೂರು ಕ್ಷೇತ್ರದಿಂದ ಸ್ಪರ್ಧಿಸಿ ಖಾಜಿ ರೆಜಾಲ್ ಹುಸೇನ್ ವಿರುದ್ಧ 1,50,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಗೆಲುವಿನ ಬೆನ್ನಲ್ಲಿಯೇ ಅಭಿಮಾನಿಯೊಬ್ಬರ ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಟಗಾರನ ಈ ವರ್ತನೆ ಬಗ್ಗೆ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಇದಕ್ಕೆ ಶಕೀಬ್ ಯಾವುದೇ ಸ್ಪಷ್ಟನೆ ನೀಡಿಲ್ಲ.