ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದು, ಏಷ್ಯಾಕಪ್‌ನಲ್ಲಿ ಸೆಪ್ಟೆಂಬರ್ 2ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯಲಿದ್ದಾರೆ.
ಗಾಯದ ಸಮಸ್ಯೆ ಕಾರಣದಿಂದಾಗಿ 2022ರ ಜುಲೈನಲ್ಲಿ ತಂಡದಿಂದ ಹೊರಗುಳಿದಿದ್ದ ಬುಮ್ರಾ, ಈ ನಡುವೆ ಯಾವುದೇ ಏಕದಿನ ಪಂದ್ಯವನ್ನ ಸಹ ಆಡಿಲ್ಲ. ಹೀಗಾಗಿ ಬರೋಬ್ಬರಿ 14 ತಿಂಗಳ ಬಳಿಕ ಜಸ್ಪ್ರೀತ್ ಬುಮ್ರಾ ಏಕದಿನ ಪಂದ್ಯವನ್ನ ಆಡುತ್ತಿದ್ದಾರೆ. ಈ ನಡುವೆ ಬುಮ್ರಾ ವಾಪಸ್ಸಾತಿ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾದ ಮತ್ತೋರ್ವ ವೇಗದ ಬೌಲರ್ ಮೊಹಮ್ಮದ್ ಶಮಿ, “ಬುಮ್ರಾ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವುದು ಭಾರತ ತಂಡವನ್ನ ಬಲಿಷ್ಠಗೊಳಿಸಿದೆ” ಎಂದಿದ್ದಾರೆ.
ಖಾಸಗಿ ಸ್ಪೋರ್ಟ್ಸ್ ವಾಹಿನಿಯೊಂದಿಗೆ ಮಾತನಾಡಿರುವ ಶಮಿ, “ಬಹಳ ಸಮಯದಿಂದ ಬುಮ್ರಾ ತಂಡದಲ್ಲಿ ಇರಲಿಲ್ಲ, ಇದರಿಂದ ನಾವು ಉತ್ತಮ ಆಟಗಾರನನ್ನು ಕಳೆದುಕೊಂಡಿದ್ದೆವು. ಕೆಲವೊಮ್ಮೆ ನನ್ನ ಜೊತೆಯಾಗಿ ಆಡಲು ಈ ಆಟಗಾರ ಇದ್ದಾನೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಬುಮ್ರಾ ಅವರನ್ನ ಹೊಂದಿರುವುದು ತಂಡದ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ. ಅವರು ಫಿಟ್ ಆಗಿರುವಂತೆ ಕಾಣುತ್ತಿದ್ದಾರೆ ಮತ್ತು ಉತ್ತಮವಾಗಿ ಆಡುತ್ತಿದ್ದಾರೆ. ಇದು ನಮಗೆ ಉತ್ತಮ ಏಷ್ಯಾಕಪ್ ಆಗಲಿದೆ” ಎಂದು ಶಮಿ ತಿಳಿಸಿದ್ದಾರೆ.
ಇದೇ ವೇಳೆ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿರುವ ಶಮಿ, “ನಾವು ಮೂವರು(ಬುಮ್ರಾ, ಶಮಿ ಮತ್ತು ಸಿರಾಜ್) ಉತ್ತಮ ಬೌಲಿಂಗ್ ಮಾಡಿದರು, ಯಾರು ಆಡಬೇಕೆಂದು ತಂಡದ ಮ್ಯಾನೇಜ್ಮೆಂಟ್ ನಿರ್ಧಾರ ಮಾಡಲಿದೆ. ನಮ್ಮ ಏಕೈಕ ಗುರಿ ಎಂದರೆ, 100% ಪರಿಶ್ರಮದೊಂದಿಗೆ ಆಡುವುದಾಗಿದೆ. ನಮ್ಮ 100% ಪರಿಶ್ರಮ ನೀಡಿದ್ದೇ ಆದಲ್ಲಿ ಗೆಲುವು ನಮ್ಮನ್ನ ಹಿಂಭಾಲಿಸಲಿದೆ. ಹೀಗಾಗಿ ನಿಗಾವಹಿಸಿ ಅದನ್ನ ಅನುಷ್ಠಾನ ಮಾಡುವುದು ಅತ್ಯಂತ ಮುಖ್ಯ” ಎಂದಿದ್ದಾರೆ.
ಏಷ್ಯಾಕಪ್-2023 ಜರ್ನಿ ಆರಂಭಿಸಲು ಟೀಂ ಇಂಡಿಯಾ ಸಜ್ಜಾಗಿದ್ದು, ಸೆಪ್ಟೆಂಬರ್ 2ರಂದು ನಡೆಯುವ ಮಹತ್ವದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನ ಎದುರಿಸಲಿದೆ.