ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ : 6 ತಿಂಗಳಾದ್ರೂ ಸಿಗದ ಪರಿಹಾರ
ಬೆಂಗಳೂರು : ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ ಬೆಳಕಿಗೆ ಬಂದು ಸುಮಾರು 6 ತಿಂಗಳು ಕಳೆದರೂ ಈವರೆಗೂ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಬ್ಯಾಂಕ್ ಸೂಪರ್ ಸೀಡ್ ಮಾಡಬೇಕು. ಇಂಡಿಪೆಂಡೆಂಟ್ ಸಂಸ್ಥೆಯಿಂದ ವಸಿಷ್ಠ ಸೊಸೈಟಿ ಆಡಿಟ್ ಮಾಡಬೇಕು ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಶಂಕರ್ ಗುಹಾ ದ್ವಾರಕನಾಥ್ ಆಗ್ರಹಿಸಿದ್ದಾರೆ.
ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ವಂಚನೆಗೆ ಒಳಗಾದ ಹೂಡಿಕೆದಾರರಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಬೆಂಗಳೂರಿನ ಹನುಮಂತ ನಗರದಲ್ಲಿರುವ ವಸಿಷ್ಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಗರಣವು ಬೆಳಕಿಗೆ ಬಂದು ಸುಮಾರು 6 ತಿಂಗಳು ಕಳೆದರೂ ಇದುವರೆಗೂ ಗ್ರಾಹಕರಿಗೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಈ ಸೊಸೈಟಿಯಲ್ಲಿ ಠೇವಣಿ ಇಟ್ಟಿರುವವರಲ್ಲಿ ಬಹುತೇಕರು 70 ವರ್ಷ ಮೇಲ್ಪಟ್ಟವರಾಗಿದ್ದಾರೆ. ಹಿರಿಯ ನಾಗರೀಕರಾದ ಅವರು ತಮ್ಮ ಹಣ ವಾಪಸ್ ಸಿಗುತ್ತೋ ಇಲ್ಲವೋ ಅನ್ನೋ ಆತಂಕದಲ್ಲಿದ್ದಾರೆ. ವಸಿಷ್ಠ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯಿಂದ 450 ರಿಂದ 500 ಕೋಟಿ ವಂಚನೆ ನಡೆದಿದೆ. ಬ್ಯಾಂಕ್ನ ಅಧ್ಯಕ್ಷರೇ ತಮ್ಮ ಕುಟುಂಬಕ್ಕೆ 100 ಕೋಟಿಗೂ ಹೆಚ್ಚಿನ ಸಾಲ ನೀಡಲಾಗಿದೆ. ಬ್ಯಾಂಕ್ ಅಧ್ಯಕ್ಷರ ಮಗನ ಹೆಸರಲ್ಲೇ ಅನೇಕ ರೀತಿಯ ಲೋನ್ ಗಳನ್ನ ನೀಡಲಾಗಿದೆ. ನೂರಾರು ಕೋಟಿ ಲೋನ್ ನೀಡಿದ್ರು, ಯಾವುದೇ ದಾಖಲೆಗಳನ್ನು ಪಡೆದಿಲ್ಲ. ಹನುಮಂತ ನಗರ ಬ್ಯಾಂಕ್ ಕಟ್ಟಡದಲ್ಲೆ ಇರೋ ಚಿಕ್ಕ ಪ್ರಿಂಟಿAಗ್ ಕಚೇರಿಗೆ ಸುಮಾರು 37 ಕೋಟಿ ಲೋನ್ ನೀಡಲಾಗಿದೆ ಎಂದು ಆರೋಪಿಸಿದರು.
ಸುಮಾರು 450 ಕೋಟಿ ರೂಪಾಯಿಯ ಈ ಹಗರಣಕ್ಕೆ ಸಂಬಂಧಿಸಿದಂತೆ ದಿನಾಂಕ 30/9/2021 ರಂದು ರಿಜಿಸ್ಟ್ರಾರ್ ಆಫ್ ಕೋ-ಆಪರೇಟಿವ್ ಸೊಸೈಟಿ ಇವರಿಂದ ಸೊಸೈಟಿಯ ಅಧ್ಯಕ್ಷರನ್ನು ಸೇರಿಸಿ ವ್ಯವಸ್ಥಾಪಕ ಮಂಡಳಿಯ ಎಲ್ಲಾ ಸದಸ್ಯರಿಗೂ ನೋಟಿಸ್ ಜಾರಿ ಆಗಿರುತ್ತದೆ. ಈ ನೋಟಿಸಿನ ಸೆಕ್ಷನ್ ನಂ.21 ರಲ್ಲಿ ಉಲ್ಲೇಖಿಸಿರುವಂತೆ ಕೋಟ್ಯಂತರ ರೂಪಾಯಿ ಹಣವನ್ನು ಸಾಲ ಖಾತೆಗಳಲ್ಲಿ ಸಾಲಗಾರರ ಅರ್ಜಿಯು ಇಲ್ಲದೆ ಸಾಲ ನೀಡಿರುವುದು, ಸಾಲಗಾರರ ಆಸ್ತಿಯು ಸಹಕಾರಿಯ ಹೆಸರಿಗೆ ಎಂ.ಟಿ.ಡಿ ಆಧಾರವಾಗದೇ ಸಾಲ ನೀಡಿರುವುದು. ಯಾವುದೇ ದಾಖಲಾತಿಗಳಿಲ್ಲದೆ ಸಾಲ ನೀಡಿರುವುದು ವ್ಯವಸ್ಥಾಪಕ ಮಂಡಳಿಯ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಎಂದು ಶಂಕರ್ ಗುಹಾ ವಿವರಿಸಿದರು.
ಇನ್ನು ಠೇವಣಿದಾರರು ಕಷ್ಟಪಟ್ಟು ತಮ್ಮ ಜೀವಮಾನವಿಡೀ ದುಡಿದ ಹಣವನ್ನು ಈ ರೀತಿ ತಮಗೆ ಅನುಕೂಲವಾಗುವವರಿಗೆ ಸಾಲ ನೀಡಿ ಗ್ರಾಹಕರ ನಂಬಿಕೆಗೆ ದ್ರೋಹ ಮಾಡಲಾಗಿದೆ. ಈ ಹಗರಣದ ತನಿಖೆಯನ್ನು ಸಿಐಡಿ ವಹಿಸಲಾಗಿದೆ. ಈ ಹಿಂದೆ ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಹಗರಣವನ್ನು ಸಹ ಸಿಐಡಿಗೆ ನೀಡಿದ್ದನ್ನ ಗಮನಿಸಬಹುದು. ಆದರೆ ಆ ಪ್ರಕರಣದಂತೆ ಇದು ಸಹ ರಾಜಕೀಯ ಒತ್ತಡಗಳಿಂದಾಗಿ ಸರಿಯಾದ ದಿಕ್ಕಿನಲ್ಲಿ ಸಾಗುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಸಿಷ್ಠ ಕೋ-ಆಪರೇಟಿವ್ ಸೊಸೈಟಿ ಹಗರಣವನ್ನು ಕೂಡಲೇ ಸಿಬಿಐ ಬ್ಯಾಂಕ್ ಫ್ರಾಡ್ಸ್ ಇನ್ವೆಸ್ಟಿಗೇಶನ್ ಗೆ ವಹಿಸಬೇಕು ಎಂದು ಆಗ್ರಹಿಸಿದರು.
ನಮ್ಮ ರಾಜ್ಯದ ಪೊಲೀಸರ ಬಗ್ಗೆ ನಂಬಿಕೆ ಮತ್ತು ಗೌರವವಿದ್ದರೂ ಆಡಳಿತ ಪಕ್ಷದವರು ಒತ್ತಡ ಹೇರಿ ಅವರ ಕೆಲಸಕ್ಕೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಈ ಹಗರಣವನ್ನು ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಗ್ರಾಹಕರಿಗೆ ಅವರ ಹಣವನ್ನು ಸಂಪೂರ್ಣವಾಗಿ ಕೊಡಿಸುವ ಜವಾಬ್ದಾರಿಯನ್ನು ವಹಿಸಬೇಕು. ಇದರ ಜೊತೆಗೆ ಸೊಸೈಟಿಯ ಇಂಡಿಪೆಂಡೆಂಟ್ ಆಡಿಟಿಂಗ್ ನಡೆಸಬೇಕು ಮತ್ತು ಸೊಸೈಟಿಯನ್ನು ಸೂಪರ್‌ಸೀಡ್ ಮಾಡಬೇಕು ಎಂದು ವಂಚನೆಗೆ ಒಳಗಾದವರ ಪರವಾಗಿ ಡಾ.ಶಂಕರ್ ಗುಹಾ ದ್ವಾರಕನಾಥ್ ಒತ್ತಾಯಿಸಿದ್ದಾರೆ.









