Shimoga | ರಾಷ್ಟ್ರಧ್ವಜ ಹಿಡಿದು 20 ಕಿಲೋಮೀಟರ್ ಅರೆಬೆತ್ತಲೆ ಪಾದಯಾತ್ರೆ!
ಸಾಗರ : ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ತಾಲೂಕು ಆಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಹೊಸಂತೆ ಗ್ರಾಮದಿಂದ ತಹಶೀಲ್ದಾರ್ ಕಚೇರಿವರೆಗೆ ರಾಷ್ಟ್ರಧ್ವಜ ಹಿಡಿದು 20 ಕಿ.ಮೀ. ಅರೆಬೆತ್ತಲೆ ಪಾದಯಾತ್ರೆ ನಡೆಸಿದ್ದಾರೆ. ಅಲ್ಲದೆ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಮನವಿ ಸ್ವೀಕರಿಸಿ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಅವರಿಗೆ ಹೊಸ ಅಂಗಿ ಕೊಡಿಸಿ, ಬಸ್ ಚಾರ್ಜ್‍ಗೆ ವೈಯಕ್ತಿಕ ಹಣ ನೀಡಿ ಮಾನವೀಯತೆ ಮೆರೆದರು.

ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಸ್ವಾಮಿನಾಥ್ ಹೊಸಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಜನರು ಹಸಿವಿನಿಂದ ಬಳಲಬಾರದು ಎಂದು ಪಡಿತರ ಅಕ್ಕಿಯನ್ನು ಉಚಿತವಾಗಿ ಕೊಡುತ್ತಿದೆ.
ಆದರೆ ನಮ್ಮ ಮನೆಯಲ್ಲಿ ಸುಮಾರು ಒಂದು ಕ್ವಿಂಟಾಲ್‍ನಷ್ಟು ಪಡಿತರ ಅಕ್ಕಿಯನ್ನು ಬಡವರಿಗೆ ಕೊಡಲು ಸಂಗ್ರಹಿಸಿ ಇಡಲಾಗಿತ್ತು.
ಆದರೆ ನನ್ನ ಪತ್ನಿ ನನಗೆ ಗೊತ್ತಿಲ್ಲದೆ ಅಕ್ಕಿಯನ್ನು ಕಾಳಸಂತೆಕೋರರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ನನಗೆ ಬೇಸರವಾಗಿದೆ ಎಂದು ತಿಳಿಸಿದ್ದಾರೆ.