Shimoga | ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ
ಶಿವಮೊಗ್ಗ : ರಾಜ್ಯದ ಪ್ರತಿಷ್ಠಿತ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಇಂದು ನಡೆಯುತ್ತಿದ್ದು, ಶಿವಮೊಗ್ಗ ನಗರದೆಲ್ಲೆಡೆ ಬಿಗಿ ಪೊಲೀಸ್ ಸರ್ಪಗಾವಲನ್ನು ಹಾಕಲಾಗಿದೆ.
ಮೆರವಣಿಗೆ ಹಿನ್ನಲೆ ಶಿವಮೊಗ್ಗ ನಗರ ಕೇಸರಿಮಯವಾಗಿದ್ದು, ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ನಗರದೆಲ್ಲೆಡೆ ಬ್ಯಾನರ್ ಬಂಟಿಂಗ್ಸ್ ಕಟೌಟ್ ಗಳು ರಾರಾಜಿಸುತ್ತಿವೆ.
ಕೊರೊನಾ ಹಿನ್ನಲೆ ಎರಡು ವರ್ಷ| ಮಂಕಾಗಿದ್ದ, ಹಬ್ಬಕ್ಕೆ ಈ ಬಾರಿ ಮೆರಗು ಮೂಡಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿವಮೊಗ್ಗದ ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಈ ಬಾರಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದರಲ್ಲಿ ಸಂತೋಷ ಮತ್ತು ಆತಂಕ ಎರಡು ಮನೆ ಮಾಡಿದೆ.
ಹಿಜಾಬ್ ವಿವಾದ ಹರ್ಷ ಕೊಲೆ ಘಟನೆ ಪ್ರೇಮ್ ಸಿಂಗ್ ಪ್ರಕರಣಗಳಿಂದ ಶಿವಮೊಗ್ಗ ನಗರದಲ್ಲಿ ಆತಂಕ ಮನೆ ಮಾಡಿದೆ. ಯಾವ ಕ್ಷಣದಲ್ಲಿ ಎಲ್ಲಿ ಏನು ಘಟನಾವಳಿಗಳು ನಡೆಯುತ್ತವೋ ಎಂಬ ಭಯ ಜನರನ್ನು ಕಾಡಿತ್ತು.
ಆದರೆ ಪೊಲೀಸರು ಜನರ ಆತಂಕವನ್ನು ದೂರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಹದಿನೈದು ದಿನಗಳಿಂದ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪೆಟ್ರೋಲಿಂಗ್ ಹಾಗು ರೂಟ್ ಮಾರ್ಚ್ ಗಳನ್ನು ಮಾಡಿ ಜನರ ದುಗುಡವನ್ನು ಹೋಗವಲಾಡಿಸಿದ್ದಾರೆ.
ಹೀಗಾಗಿ ನಗರ ಸಹಜ ಸ್ಥಿತಿಯಲ್ಲಿದ್ದು, ಹಿಂದುಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಅದ್ದೂರಿಯಾಗಿಯೇ ಹಬ್ಬದ ರೀತಿಯಲ್ಲಿ ಆಚರಣೆಗೊಳ್ಳುತ್ತಿದೆ.
ಕೊರೊನಾ ಹಿನ್ನಲೆ ಎರಡು ವರ್ಷ ಗಣಪತಿ ಉತ್ಸವ ಇಲ್ಲದ ಕಾರಣ ಜನರು ಈ ಬಾರಿ ಸಹಸ್ರ ಸಂಖ್ಯೆಯಲ್ಲಿ ವಿಸರ್ಜನಾ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಲು ಉತ್ಸುಕರಾಗಿದ್ದಾರೆ.
ಕೋಟೆ ರಸ್ತೆಯ ಭೀಮೇಶ್ವರ ದೇವಸ್ಥಾನದಲ್ಲಿ ಹೆಚ್.ಎಂ.ಎಸ ಗಣಪತಿ ಪ್ರತಿಷ್ಠಾಪಿಸಲ್ಪಟ್ಟು ಇಂದು ಬೆಳಿಗ್ಗೆ ವಿಸರ್ಜನಾ ಮೆರವಣಿಗೆಯು ಕೋಟೆ ರಸ್ತೆ, ರಾಮಣ್ಣಶ್ರೆಷ್ಠಿ ಪಾರ್ಕ್, ಗಾಂಧೀ ಬಜಾರ್ ಅಮಿರ್ ಅಹಮ್ಮದ್ ವೃತ್ತ ನೆಹರು ರಸ್ತೆ ದುರ್ಗಿಗುಡಿ, ಕುವೆಂಪು ರಸ್ತೆ ಶಿವಮೂರ್ತಿ ಸರ್ಕಲ್ ಮಹಾವೀರ ವೃತ್ತ, ಕಾನ್ವೆಂಟ್ ರಸ್ತೆ..ಬಿಹೆಚ್ ರಸ್ತೆ, ಮೂಲಕ ಪುನಃ ಕೋಟೆ ರಸ್ತೆ ಪ್ರವೇಶಿಸಿ ತುಂಗಾನದಿಯಲ್ಲಿ ಗಣೇಶನ ವಿಸರ್ಜನೆಯಾಗಲಿದೆ.