ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದಿದ್ದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆ ಒಂದು ಪ್ರಮುಖ ಅಂಶವಾಗಿತ್ತು. ಈ ಯೋಜನೆಯಡಿ ರಾಜ್ಯದ ಲಕ್ಷಾಂತರ ಬಿಪಿಎಲ್ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಈಗ ಈ ಯೋಜನೆಯ ಭಾಗವಾಗಿ ಅಕ್ಕಿ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ ಭಾರೀ ಶಾಕ್ ಎದುರಾಗಿದೆ.
ಸಾಗಾಣಿಕೆ ಬಂದ್: ಅಕ್ಕಿ ವಿತರಣೆಗೆ ಬಿಕ್ಕಟ್ಟು
ಅನ್ನಭಾಗ್ಯ ಯೋಜನೆಯಡಿ ಈವರೆಗೆ ಸರಬರಾಜಾಗುತ್ತಿದ್ದ ಆಹಾರ ಧಾನ್ಯಗಳ ಸಾಗಾಣಿಕೆ ಪ್ರಕ್ರಿಯೆ ಈಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆಹಾರ ಧಾನ್ಯ ಸಾಗಾಣಿಕೆಗಾಗಿ ಖಾಸಗಿ ಏಜೆನ್ಸಿಗಳನ್ನು ನೇಮಿಸಲಾಗಿದ್ದು, ಇವರಿಗೆ ಸರ್ಕಾರ ತಕ್ಷಣ ಪಾವತಿ ಮಾಡಬೇಕಾಗಿತ್ತು. ಆದರೆ ಸರಕಾರ ಈ ಸಾಗಾಣಿಕೆ ವೆಚ್ಚ ಪಾವತಿಸಲು ವಿಳಂಬ ಮಾಡಿದ್ದು, ಇದೀಗ ಈ ಖಾಸಗಿ ಏಜೆನ್ಸಿಗಳು ಸಾಗಾಣಿಕೆ ಕೈ ಬಿಡಲು ನಿರ್ಧರಿಸಿವೆ.
ಸಾಗಣಿಕೆ ಖರ್ಚಿಗೆ ಸರ್ಕಾರ ದೊಡ್ಡ ಮೊತ್ತ ಪಾವತಿಸದಿರುವ ಕಾರಣವೇ ಇಡೀ ವ್ಯವಸ್ಥೆ ಕುಸಿದಿರುವುದಾಗಿ ತಿಳಿದುಬಂದಿದೆ. ಇದು ಫಲಾನುಭವಿಗಳಿಗೆ ತೀವ್ರ ಪರಿಣಾಮ ಬೀರುತ್ತಿದ್ದು, ಜನರು ಮುಂದಿನ ತಿಂಗಳು ಅಕ್ಕಿ ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿ ಮುಳುಗಿದ್ದಾರೆ.
ಈ ನಿರ್ಧಾರದಿಂದಾಗಿ ಬಡ ಕುಟುಂಬಗಳು ಅತ್ಯಂತ ಸಂಕಷ್ಟದಲ್ಲಿದ್ದು, ದಿನಗೂಲಿ ಕಾರ್ಮಿಕರು, ಅಲ್ಪ ಆದಾಯದ ಜನರು ಕಂಗಾಲಾಗಿದ್ದಾರೆ.
ಇತ್ತ ಸರ್ಕಾರವು ತಕ್ಷಣವೇ ಸಾಗಾಣಿಕೆ ವೆಚ್ಚ ಪಾವತಿಸಿ, ಬಡವರ ಆಹಾರದ ಹಕ್ಕು ಕಾಪಾಡಬೇಕು ಎಂಬ ಒತ್ತಡವೂ ಹೆಚ್ಚುತ್ತಿದೆ. ಈ ನಡುವೆ ಈ ಪ್ರಕ್ರಿಯೆ ಹಿಂದೆ ರಾಜಕೀಯ ಕಾರಣಗಳಿವೆಯೇ ಎಂಬ ಅನುಮಾನಗಳು ಕೂಡ ಹುಟ್ಟಿಕೊಂಡಿವೆ.








