ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು : ಹಲವು ವಸ್ತುಗಳ ಆಮದಿಗೆ ಬ್ರೇಕ್
ಕೋವಿಡ್ ಹಾವಳಿಯಿಂದಾಗಿ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿದ್ದು, ವಿದೇಶಿ ವಿನಿಮಯ ಮೀಸಲು ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. ಹೀಗಾಗಿ ಕಾರು, ಕೃಷಿ ರಾಸಾಯನಿಕಗಳ ಜೊತೆಗೆ ದಿನಬಳಕೆಯ ಕೆಲವು ವಸ್ತುಗಳ ಆಮದಿಗೂ ತಡೆ ಒಡ್ಡಲಾಗಿದೆ.
ಅಲ್ಲದೇ ಅನೇಕ ವಸ್ತುಗಳ ಬೆಲೆ ಗಗನಕ್ಕೇರಿದೆ.. ಟೂತ್ಬ್ರಷ್ ಹಿಡಿ, ಸ್ಟ್ರಾಬೆರಿ, ವಿನೆಗರ್, ವೆಟ್ವೈಪ್, ಸಕ್ಕರೆಯಂತಹ ನೂರಾರು ವಸ್ತುಗಳ ಆಮದಿಗೆ ತಡೆ ಒಡ್ಡಲಾಗಿದ್ದು, ಗ್ರಾಹಕ ಸಾಮಗ್ರಿಗಳ ಬೆಲೆ ವಿಪರೀತವಾಗಿ ಹೆಚ್ಚಳವಾಗಿದೆ. ಕೋವಿಡ್ ಪಿಡುಗು ಆರಂಭವಾಗುವುದಕ್ಕೆ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣದ ಬಳಿಕ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು.
ಪ್ರವಾಸೋದ್ಯಮ ದೇಶದಲ್ಲಿ ಸುಮಾರು 30 ಲಕ್ಷ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಒದಗಿಸಿತ್ತು. ದೇಶದ ಜಿಡಿಪಿಯಲ್ಲಿ ಪ್ರವಾಸೋದ್ಯಮದ ಪಾಲು ಶೇ 5ರಷ್ಟಿತ್ತು. ಶ್ರೀಲಂಕಾ ಈ ವರ್ಷ 3.7 ಶತಕೋಟಿ ಡಾಲರ್ ವಿದೇಶಿ ಸಾಲ ಮರುಪಾವತಿ ಮಾಡಬೇಕಿದ್ದು, ಇದುವರೆಗೆ ಮಾಡಿರುವುದು 1.3 ಶತಕೋಟಿ ಡಾಲರ್ ಮಾತ್ರ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಮೊದಲೇ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಶ್ರೀಲಂಕಾ ಕೊರೊಬನಾ ಹಾವಳಿಯ ನಂತರ ಮತ್ತಷ್ಟು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು, ದಿನಬಳಕೆ ವಸ್ತುಗಳಿಮದ ಹಿಡಿದು ಪ್ರತಿಯೊಂದರ ಬೆಲೆ ತೀರ ಹೆಚ್ಚಳವಾಗಿದೆ.