`ಹುಲಿಯಾ’ನ ಗುಹೆಗೆ ಮರಿ `ರಾಜಾ’ಹುಲಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಳಿಕ ರಾಜಕೀಯ ಲೆಕ್ಕಾಚಾರಗಳು ಬದಲಾಗುತ್ತಿವೆ. ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಕೆಳಗಿಳಿದಿರೋದು ಹಾಗೂ ನೂತನ ಸಚಿವರ ಪದಗ್ರಹಣ ರಾಜ್ಯ ರಾಜಕೀಯದ ಚಿತ್ರಣವನ್ನ ಬದಲಿಸುವ ಲಕ್ಷಣಗಳು ಗೋಚರಿಸುತ್ತಿವೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯ ವರಿಷ್ಠರು ತೆಗೆದುಕೊಂಡಿರುವ ಈ ಮಹತ್ತರ ನಿರ್ಧಾರ ಪಕ್ಷಕ್ಕೆ ಪ್ಲಸ್ ಆಗುತ್ತೋ ಅಥವಾ ಮೈನಸ್ ಆಗುತ್ತೋ ಅನ್ನೋದಕ್ಕೆ ಮುಂದೆ ಕಾಲವೇ ಉತ್ತರಿಸಲಿದೆ. ಆದ್ರೆ ಬಿಜೆಪಿಯ ಈ ನಡೆ ರಾಜ್ಯ ರಾಜಕೀಯದಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರೋದಂತೂ ನೂರಕ್ಕೆ ನೂರರಷ್ಟು ಸತ್ಯ..
ಸಿದ್ದರಾಮಯ್ಯನ ಭದ್ರಕೋಟೆ ಮೇಲೆ ಕೇಸರಿ ಕಣ್ಣು
ಹೌದು..! ಕಾಂಗ್ರೆಸ್ ನ ಮಾಸ್ ಲೀಡರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಳೆ ಮೈಸೂರು ಭಾಗದಲ್ಲಿ ತಮ್ಮದೇಯಾದ ಹಿಡಿತ ಸಾಧಿಸಿದ್ದಾರೆ. ಹಳೆ ಮೈಸೂರು ಭಾಗ ಅಂದ್ರೆ ಅದು ಸಿದ್ದರಾಮಯ್ಯನವರ ಭದ್ರಕೋಟೆ. ಅಲ್ಲಿ ಕಮಲವನ್ನು ಅರಳಿಸಬೇಕೆಂದು ಸಾಕಷ್ಟು ವರ್ಷಗಳಿಂದ ತಯಾರಿ ನಡೆಯುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬಾವುಟವನ್ನು ಕೆಳಗಿಳಿಸಿ ಕೇಸರಿ ಬಾವುಟ ಹಾರಿಸಲು ಬಿಜೆಪಿಯ ನಾಯಕರು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ಕಾರ್ಯಕ್ಕೆ ಸ್ವತಃ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ ವಿಜಯೇಂದ್ರ ಅವರೇ ಕಂಕಣ ಕಟ್ಟಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ವಿಜಯೇಂದ್ರ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸ್ಪರ್ಧಿಸಿದ್ದ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದರು. ಆದ್ರೆ ಅದಕ್ಕೆ ಪಕ್ಷದ ಹೈಕಮಾಂಡ್ ಗ್ರೀಸ್ ಸಿಗ್ನಲ್ ನೀಡಿಲಿಲ್ಲ. ಆದ್ರೆ ಇದೀಗ ಕಾಲ ಬದಲಾಗಿದ್ದು, ಸ್ವತಃ ಬಿಜೆಪಿಯ ಬಿಗ್ ಬಾಸ್ ಗಳೇ ಹಳೆ ಮೈಸೂರಿನತ್ತ ಗಮನ ಹರಿಸುವಂತೆ ವಿಜಯೇಂದ್ರ ಅವರಿಗೆ ಸೂಚಿಸಿದ್ದಾರೆ.
ಈ ಬಗ್ಗೆ ವಿಜಯೇಂದ್ರ ಅವರೇ ಸುಳಿವು ಕೂಡ ಕೊಟ್ಟಿದ್ದು, ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸುವ ದೃಷ್ಠಿಯಿಂದ ಮುಂದಿನ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಅಲ್ಲಿ ಪಕ್ಷ ಸಂಘಟಿಸುವ ಕೆಲಸಕ್ಕೂ ಚಾಲನೆ ಕೊಟ್ಟಿರುವುದಾಗಿ ಅವರು ತಿಳಿಸಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ಅವರ ಕೋಟೆಯಲ್ಲಿ ಗಟ್ಟಿಯಾಗಿ ನೆಲೆಯೂರಲು ವಿಜಯೇಂದ್ರ ತುದಿಗಾಲಿನಲ್ಲಿ ನಿಂತಿದ್ದಾರೆ. ಆದ್ರೆ ಇದು ಸಾಧ್ಯವಾಗುತ್ತಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.