Siddaramaiah | ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ
ಬೆಂಗಳೂರು : ಅತಿವೃಷ್ಟಿ ಪರಿಹಾರ ಕಾರ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪರಿಹಾರ ಕಾಮಗಾರಿಗಳನ್ನು ನೋಡಿದರೆ ವ್ಯಾಪಕವಾಗಿ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ. ಕಳೆದ 3 ವರ್ಷಗಳ ಅತಿವೃಷ್ಟಿ ಕಾಮಗಾರಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ರಾಜ್ಯ ಸರ್ಕಾರ ಸಮಗ್ರವಾಗಿ ತನಿಖೆ ಮಾಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಕೊಡಗು ಜಿಲ್ಲೆ 2019,2020, 2021 ಮತ್ತು ಈ ವರ್ಷ ನಿರಂತರವಾಗಿ ಅತಿವೃಷ್ಟಿಗೆ ಈಡಾಗಿದೆ. ನಮ್ಮ ಸರ್ಕಾರ 750 ಮನೆಗಳನ್ನು ಕಟ್ಟಿಸಿಕೊಟ್ಟಿದ್ದನ್ನು ಬಿಟ್ಟರೆ ಬಿಜೆಪಿ ಸರ್ಕಾರ ಯಾವ ಹೊಸ ಮನೆ ಕಟ್ಟಿಕೊಟ್ಟಿಲ್ಲ, ಪರಿಹಾರವನ್ನೂ ಸರಿಯಾಗಿ ವಿತರಿಸಿಲ್ಲ, ಕುಸಿದುಬಿದ್ದಿರುವ ಸೇತುವೆ-ರಸ್ತೆಗಳು ದುರಸ್ತಿಯಾಗಿಲ್ಲ.
![Siddaramaiah BJP government has completely failed in flood relief work saaksha tv](http://saakshatv.com/wp-content/uploads/2022/08/sid-tweet-1.jpg)
ಮಳೆಯಿಂದ ಮಣ್ಣು ಕುಸಿದ ಜಾಗಗಳಲ್ಲಿ ಸೇತುವೆಯ ಬದಲಿಗೆ ವೆಂಟೆಡ್ ಡ್ಯಾಮ್ ಕಟ್ಟಿದ್ದಾರೆ. ಇದರಿಂದ ಕಸ-ಕಲ್ಲು, ಮರದ ತುಂಡುಗಳು ಹರಿವ ನೀರಿಗೆ ಅಡ್ಡವಾಗಿ, ಮನೆ-ಶಾಲೆಗಳಿಗೆ ನೀರು ನುಗ್ಗಿದೆ. ಕೆಲವು ಸಂತ್ರಸ್ತರಿಗೆ ಬಿಜೆಪಿ ಅವರು ಹತ್ತು ಸಾವಿರ ರೂಪಾಯಿ ಪರಿಹಾರದ ಚೆಕ್ ಕೊಟ್ಟು ಸುಮ್ಮನಾಗಿದ್ದಾರೆ.
ಮಡಿಕೇರಿಯಲ್ಲಿ ಮಿನಿವಿಧಾನಸೌಧ ನಿರ್ಮಿಸಲಾಗಿದ್ದು ಅದಕ್ಕೆ ತಡೆಗೋಡೆ ಕಟ್ಟಿದ್ದಾರೆ. 7.5 ಕೋಟಿ ವೆಚ್ಚದ ಈ ತಡೆಗೋಡೆ ಆಗಲೇ ಬಿದ್ದುಹೋಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ವೇಳೆಯೂ ಅದನ್ನು ಮುಚ್ಚಿಟ್ಟಿದ್ದಾರೆ. ನಾನು ಕೂಡಾ ಅಲ್ಲಿಗೆ ಹೋಗಬಾರದೆಂದು ಶಾಸಕರು ಮತ್ತು ಗುತ್ತಿಗೆದಾರರು ಸೇರಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ವಿವರಿಸಿದ್ದಾರೆ.