ಬೆಂಗಳೂರು: ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿ ಪದಕ ಗೆದ್ದ ಕರ್ನಾಟಕದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ನೀಡುವುದರ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಹಿಂದೆ ತಾವು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಪದಕ ವಿಜೇತರಿಗೆ ಸರ್ಕಾರಿ ಗ್ರೂಪ್ ಎ, ಬಿ ಹುದ್ದೆಗಳ ನೇಮಕಾತಿ ಆದೇಶ ಪತ್ರವನ್ನು ಕೂಡ ಸಿಎಂ ನೀಡಿದ್ದಾರೆ.
12 ಜನ ವಿಜೇತರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಆಫರ್ ಲೆಟರ್ ವಿತರಣೆ ಮಾಡಿದ್ದಾರೆ. ಹೆಚ್.ಎನ್ ಗಿರೀಶ್, ಟಿ.ಎಸ್ ದಿವ್ಯಾ, ಎನ್.ಉಷಾರಾಣಿ, ಸುಷ್ಮಿತಾ ಪವಾರ್, ನಿಕ್ಕಿನ್ ತಿಮ್ಮಯ್ಯ, ಎಸ್.ವಿ ಸುನೀಲ್, ಮಲಪ್ರಭಾ ಯಲ್ಲಪ್ಪ, ಗುರುರಾಜ, ಎಂ.ಎಸ್ ಶರತ್, ವಿ.ರಾಧಾ, ರಾಘವೇಂದ್ರ, ಕಿಶನ್ ಗಂಗೊಳ್ಳಿ ಅವರಿಗೆ ನೇಮಕಾತಿ ಪತ್ರವನ್ನು (Recruitment Letter) ಸಿಎಂ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಸಿಎಂ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್ (Siddaramaiah), ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ (Para Asiad Games), ಕಾಮನ್ವೆಲ್ತ್ ಗೇಮ್ಸ್ಗಳಲ್ಲಿ ಪದಕ ಪಡೆದ 12 ಜನ ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿ ನೀಡಲಾಗಿದೆ. 2016-17 ರಲ್ಲಿ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಘೋಷಣೆ ಮಾಡಲಾಗಿತ್ತು. ಆನಂತರ ಬಂದ ಸರ್ಕಾರ ಇದನ್ನು ಮುಂದುವರೆಸಿಕೊಂಡು ಹೋಗಿರಲಿಲ್ಲ. ಆದರೆ, ನಾನು ಈಗ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಪದಕ ಪಡೆದವರಿಗೆ ಆದ್ಯತೆ ಮೇರೆಗೆ ಕೆಲಸ ನೀಡುವ ಘೋಷಣೆ ಮಾಡಿದ್ದೆ. ಈಗ ನೇಮಕ ಮಾಡಿಕೊಳ್ಳುತ್ತೇವೆ. ಪದವಿ ಪಡೆದು ಪದಕ ಪಡೆದವರಿಗೆ ಕ್ಲಾಸ್ 1, ಕ್ಲಾಸ್ 2 ಹುದ್ದೆ ಕೊಡುತ್ತಿದ್ದೇವೆ. ಒಬ್ಬರಿಗೆ ಕ್ಲಾಸ್ 1 ಉಳಿದ 11 ಮಂದಿಗೆ ಕ್ಲಾಸ್ 2 ಉದ್ಯೋಗ ನೀಡಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ, ಉದ್ಯೋಗ ಮೀಸಲಾತಿಯನ್ನು 45 ವರ್ಷದವರಿಗೂ ನೀಡಲಾಗಿದೆ. ನಮ್ಮ ಸರ್ಕಾರ ಕ್ರೀಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.