ಬೆಂಗಳೂರು: ನಿನ್ನೆಯಿಂದ ವಿಧಾನಸಭಾ ಕಲಾಪ ಆರಂಭವಾಗಿದ್ದು, ಯಾವ ಯಾವ ವಿಚಾರಗಳನ್ನು ಚರ್ಚಿಸಬೇಕು ಎಂಬ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದಿದ್ದಾರೆ. ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ನಲ್ಲಿ ಯಾವ ವಿಚಾರಗಳನ್ನು ಪ್ರಸ್ತಾಪಿಸಬೇಕೆಂಬ ವಿಚಾರವಾಗಿ ಸಿದ್ದರಾಮಯ್ಯ ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಮಾರ್ಚ್ 2 ಮತ್ತು 3 ರಂದು ಸಂವಿಧಾನದ ಬಗ್ಗೆ ಎರಡು ದಿನಗಳ ಕಾಲ ವಿಶೇಷ ಚರ್ಚೆ ನಡೆಸಲು ಸಮಯ ನಿಗದಿ ಮಾಡಲಾಗಿದೆ. ಈ ವೇಳೆ ಪೌರತ್ವ ತಿದ್ದುಪಡಿ ಕಾಯಿದೆ ಜಾರಿ ವಿಚಾರವನ್ನು ಸಮರ್ಥಿಸಿಕೊಂಡು ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ನಿರ್ಣಯ ಮಂಡಿಸುವ ಯೋಚನೆಯನ್ನು ಸರ್ಕಾರ ಮಾಡಿದೆ. ಅಲ್ಲದೆ ಸಂವಿಧಾನಕ್ಕೆ ಮಾಡಿದ ಹಲವು ತಿದ್ದುಪಡಿ ವಿಚಾರಗಳು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಿಷಯದಲ್ಲಿ ಪ್ರತಿಪಕ್ಷದ ನಡೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.








