ಸಿದ್ದರಾಮಯ್ಯ ಸಿಎಂ ಅಭ್ಯರ್ಥಿ ಆದ್ರೆ ಕಾಂಗ್ರೆಸ್ ಗೆ 150 ಸೀಟ್ ಪಕ್ಕಾ
ಬೆಂಗಳೂರು : ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೊಷಿಸಿ ಚುನಾವಣೆ ಎದುರಿಸಿದ್ರೆ ಕಾಂಗ್ರೆಸ್ 130 ರಿಂದ 150 ಸೀಟುಗಳನ್ನು ಗೆಲ್ಲುವುದು ಖಚಿತ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ, 2013-18ರವರೆಗೆ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದವರು. ಇದೀಗ ಜನರು ಕೂಡ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯಾಗಬೇಕು ಅಂತಿದ್ದಾರೆ. ನನ್ನ ಅಭಿಪ್ರಾಯ ಕೂಡ ಅದೇ ಆಗಿದ್ದು, ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಪಕ್ಷದ ನಾಯಕರು.ಸದ್ಯ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಿದರೆ ಕಾಂಗ್ರೆಸ್ 130 ರಿಂದ 150 ಸೀಟುಗಳನ್ನು ಗೆಲ್ಲುವುದು ಖಚಿತ. ಹಾಗಾಗಿ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕು ಎಂದರು.
ಇನ್ನು ಸಿದ್ದರಾಮಯ್ಯ ಅವರನ್ನು ಮುಂದಿನ ಸಿಎಂ ಅಭ್ಯರ್ಥಿ ಎಂದು ಘೋಷಿಸುವಂತೆ ಅವರ ಪರವಿರುವ ಕಾಂಗ್ರೆಸ್ ನಾಯಕರೆಲ್ಲ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುತ್ತೇವೆ. ಹೆಸರು ಘೋಷಿಸುವಂತೆ ಅವರ ಮೇಲೆ ಒತ್ತಡ ತರುತ್ತೇವೆ ಎಂದು ಹೇಳಿದರು.