`ಸಿದ್ಧ’ವಾಯ್ತು ಮಾಸ್ಟರ್ ಪ್ಲಾನ್ : ಒಟ್ಟಾಗಿ ಪಕ್ಷ ಕಟ್ಟಲು ಮುಂದಾದ ಹುಲಿಯಾ-ಹೆಬ್ಬುಲಿ
ಬೆಂಗಳೂರು : ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ಪಕ್ಷ ಸಂಘಟನೆಯತ್ತ ಮುಖಮಾಡಿದೆ. ಕಳೆದ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋಲನುಭವಿಸಿದ್ದು, ಕಾರ್ಯಕರ್ತರು ಕುಗ್ಗಿ ಹೋಗಿದ್ದಾರೆ. ಹೀಗಾಗಿ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿ, ಪಕ್ಷದಲ್ಲಿ ಹೊಸ ಹುರುಪು ತುಂಬುವ ಉದ್ದೇಶದಿಂದ ರಾಜ್ಯಪ್ರವಾಸ ಕೈಗೊಳ್ಳಲು ರಾಜ್ಯ ಕಾಂಗ್ರೆಸ್ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ.
ಪಕ್ಷ ಸಂಘಟನೆಗೆ ಮುಂದಾದ ಹುಲಿಯಾ-ಹೆಬ್ಬುಲಿ
ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಸದ್ಯ ಸಾಲು ಸಾಲು ಸೋಲುಗಳಿಂದ ಕಂಗಾಲಾಗಿದ್ದಾರೆ. ಅವರಲ್ಲಿ ಬೂಸ್ಟ್ ತುಂಬಬೇಕಾದ ಅನಿವಾರ್ಯತೆ ಇದೆ. ಇದೇ ನಿಟ್ಟಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಟ್ಟಾಗಿ ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ.
ಮಾರ್ಚ್ ಮೊದಲ ವಾರದಲ್ಲಿ ರಾಜ್ಯಾದ್ಯಂತ 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುವ ಸಂಬಂಧಪಟ್ಟ ಕಾಂಗ್ರೆಸ್ ನಾಯಕರು ಇಂದು ಮಹತ್ವದ ಸಮಾಲೋಚನೆ ನಡೆಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಯಲ್ಲಿ ಸಭೆ ಸೇರಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ನಾಯಕ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣ ಭೈರೇಗೌಡ ಸೇರಿದಂತೆ ಅನೇಕ ನಾಯಕರು ಪ್ರವಾಸ ಕಾರ್ಯಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆ.
ಮಾರ್ಚ್ ನ ಮೊದಲ ವಾರ ಮೊದಲ ಹಂತದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡ ಕ್ಷೇತ್ರಗಳಿಂದ ಕಾಂಗ್ರೆಸ್ ನಾಯಕರು ಪ್ರವಾಸ ಮಾಡಲಿದ್ದಾರೆ. ಅಲ್ಲಿ ಸಭೆಗಳನ್ನು ನಡೆಸಿ ಪಕ್ಷ ಸಂಘಟಿಸಲಿದ್ದಾರೆ. ಬಳಿಕ ಎರಡನೆ ಹಂತದಲ್ಲಿ ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿ ಬಲ ಪ್ರದರ್ಶನ ಮಾಡುವ ಪ್ಲಾನ್ ಮಾಡಿದ್ದಾರೆ.
