ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ, ಬೇಕಿದ್ದರೇ ಕಟೀಲ್ ಚರ್ಚೆಗೆ ಬರಲಿ : ಡಿಕೆಶಿ ಸವಾಲ್
ಚಿತ್ರದುರ್ಗ : ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನುಡಿದಂತೆ ನಡೆದಿದ್ದಾಋಎ. ಕೊಟ್ಟ ಮಾತು ತಪ್ಪಿಲ್ಲ. ಈ ಬಗ್ಗೆ ಚರ್ಚಿಸಲು ನಳಿನ್ ಕುಮಾರ್ ಕಟೀಲ್ ಬೇಕಿದ್ದರೆ ಪಬ್ಲಿಕ್ ಡಿಬೇಟ್ ಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲ್ ಹಾಕಿದ್ದಾರೆ.
ಸಿದ್ದರಾಮಯ್ಯ ಆಡಳಿತದ ಬಗ್ಗೆ ಕಟೀಕೆ ಟೀಕೆಗೆ ಚಿತ್ರದುರ್ಗದಲ್ಲಿ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನುಡಿದಂತೆ ನಡೆದಿದ್ದಾರೆ. ಕೊಟ್ಟ ಮಾತು ತಪ್ಪಿಲ್ಲ. ಬಸವ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿದ ಅವರು, ವಿಧಾನಸೌಧ ಪ್ರವೇಶ ಮಾಡಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ ಶೇ.99ರಷ್ಟು ಕೆಲಸ ಮಾಡಿದ್ದಾರೆ. ಈ ಬಗ್ಗೆ ನಳಿನ್ ಕಟೀಲ್ ಬೇಕಿದ್ದರೆ ನೇರ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ಇದೇ ವೇಳೆ ಇಂಧನ ದರ ಏರಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಈಗಾಗಲೇ ಕಾಂಗ್ರೆಸ್ ಧರಣಿ ನಡೆಸಿ ಪ್ರತಿಭಟಿಸಿದರೂ ಕೇಂದ್ರ ಬಿಜೆಪಿ ಸರ್ಕಾರ ತನ್ನ ಧೋರಣೆ ನೀತಿಯನ್ನೇ ಅನುಸರಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ತಿಳಿಸಿದರು.
ಮುಂದುವರೆದು ರಾಜ್ಯ ಕಾಂಗ್ರೆಸ್ ನಲ್ಲಿ ಮ್ಯಾಜಿಕ್ ಚೇರ್ ಆಟ ಎಂದ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಬಿಜೆಪಿಯಲ್ಲಿ ನಡೆಯುತ್ತಿರೋದು ಯಾವ ಆಟ. ಕಾಂಗ್ರೆಸ್ ನಲ್ಲಿ ಮ್ಯಾಜಿಕ್ ಚೇರ್ ಆಟ ನಡೆಯುತ್ತಿದೆಯೋ ಅಥವಾ ಬೇರೆ ಯಾವುದೋ..? ಆದಕ್ಕೂ ಮೊದಲು ಬಿಜೆಪಿಯಲ್ಲಿ ನಡೆಯುತ್ತಿದೆಯಲ್ಲ ಅದು ಯಾವ ಚೇರ್ ಆಟ..? ಎಂಬುದನ್ನು ಕಟೀಲ್ ತಿಳಿಸಬೇಕು ಎಂದು ಕುಟುಕಿದರು.