ಬೆಂಗಳೂರು: ನ್ಯಾಯ ಬೆಲೆ ಅಂಗಡಿಗಳಲ್ಲಿ ಜನರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ದೂರುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹೀಗಾಗಿ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
“ರಾಜ್ಯದ ಪಡಿತರ ಅಂಗಡಿಗಳಲ್ಲಿ ಗೋಧಿ ಮತ್ತು ಸೀಮೆ ಎಣ್ಣೆ ನೀಡದೆ ಇದ್ದರೂ ಅವುಗಳನ್ನು ನೀಡಲಾಗಿದೆ ಎಂದು ಪಾವತಿ ರಶೀದಿಯಲ್ಲಿ ನಮೂದಿಸಿ ಬಳಕೆದಾರರಿಂದ ಸಹಿ ಹಾಕಿಸಿಕೊಳ್ಳುತ್ತಿರುವ ವಂಚನೆಯ ಪ್ರಕರಣಗಳ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಮುಖ್ಯಮಂತ್ರಿ ತಕ್ಷಣ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.
ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ ತೊಂದರೆಯಾಗಬಾರದು ಎಂದು ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲು ಸರ್ಕಾರ ನಿರ್ಧರಿಸಿದೆ. ಈ ಎಲ್ಲಾ ನ್ಯಾಯ ಬೆಲೆ ಅಂಗಡಿಗಳಿಗೂ ಸೂಚನೆ ನೀಡಲಾಗಿದೆ. ಇದರ ಮಧ್ಯೆ ಪ್ರತಿ ದಿನ ನ್ಯಾಯಬೆಲೆ ಅಂಗಡಿಗಳಲ್ಲಿ ಜನರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಲೇ ಇವೆ.
ಇದಕ್ಕೆ ಕಡಿವಾಣ ಹಾಕಲು ಸ್ವತಃ ಆಹಾರ ಸಚಿವ ಕೆ.ಗೋಪಾಲಯ್ಯ ಅವರು ಕೆಲವು ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಿರ್ಲಕ್ಷ್ಯ ತೋರಿದ ಕೆಲವು ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ.








