ಮೈಸೂರು : ರಾಜ್ಯ ಕಾಂಗ್ರೆಸ್ ಹಮ್ಮಿಕೊಂಡಿರುವ ‘ನಿದ್ದೆಯಿಂದ ಎದ್ದೇಳಿ ಸಿಎಂ’ ಅಭಿಯಾನದ ಕುರಿತು ಸಚಿವ ಎಸ್.ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದು, ‘ಮೊದಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿದ್ದೆಯಿಂದ ಎದ್ದೇಳಲಿ” ಎಂದು ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ” ಸಿದ್ದರಾಮಯ್ಯ ಅವರು ಎದ್ದು ಮೊದಲು ರಾಜ್ಯ ಪ್ರವಾಸ ಮಾಡಲಿ. ಕೋವಿಡ್ ಬಂದಾಗ ಮಲಗಿದ್ದರು, ಮಳೆಯಿಂದ ಪ್ರವಾಹ ಬಂದಾಗಲೂ ಮಲಗಿದ್ದರು. ಈ ಹಿಂದೆ ಐದು ವರ್ಷ ಆಡಳಿತ ಮಾಡಿದಾಗಲೂ ಮಲಗೇ ಇದ್ದರೂ. ಸಭೆಗಳಲ್ಲೂ ಗೊರಕೆ ಹೊಡೆಯುತ್ತಿದ್ದರು. ಆದರೆ ಈಗ ‘ನಿದ್ದೆಯಿಂದ ಎದ್ದೇಳು ಸರ್ಕಾರ’ ಎಂಬ ಅಭಿಯಾನ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದೇ ವೇಳೆ ಸಿದ್ದರಾಮಯ್ಯ ಟ್ವೀಟ್ ಗಳ ಬಗ್ಗೆ ಮಾತನಾಡಿದ ಸೋಮಶೇಖರ್, ಕೇವಲ ಟ್ವೀಟ್ ಮಾಡೋದಕ್ಕೆ ನಿಮಗೆ ಸರ್ಕಾರದ ಸವಲತ್ತು ಬೇಕಾ? ಪ್ರತಿಪಕ್ಷ ನಾಯಕರಾಗಿ ನಿಮ್ಮ ಜವಾಬ್ದಾರಿ ಏನು ಎಂದು ಪ್ರಶ್ನಿಸಿದ್ದಾರೆ.
ನೀವು ಐದು ವರ್ಷ ಮುಖ್ಯಮಂತ್ರಿ ಆಗಿದ್ದಿರಿ, ಆಗ ನಿಮ್ಮ ದಿನಚರಿ ಏನಿತ್ತು ಎಂದು ನೆನಪಿಸಿಕೊಳ್ಳಿ. ಕೋವಿಡ್ ಸಂದರ್ಭದಲ್ಲಿ ಯಡಿಯೂರಪ್ಪ ಅವರ ದಿನಚರಿಯನ್ನು ನೋಡಿ. ಇಬ್ಬರ ದಿನಚರಿಯನ್ನು ಹೋಲಿಸಿ, ಯಾವುದು ಸರಿ ಅಂತ ನೀವೇ ನಿರ್ಧಾರ ಮಾಡಿ. ಸಿದ್ದರಾಮಯ್ಯ ಆಗೊಮ್ಮೆ ಈಗೊಮ್ಮೆ ಟ್ವೀಟ್ ಮಾಡುತ್ತಾರೆ. ಆ ಮೂಲಕ ಕಾಂಗ್ರೆಸ್‍ನಲ್ಲಿ ಅವರು ಇನ್ನೂ ಆಕ್ಟೀವ್ ಆಗಿದ್ದಾರೆ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದ ನಾಯಕರಾಗಿ ಟ್ವೀಟ್ ಮಾಡೋದೆ ನಿಮ್ಮ ಕೆಲಸವೇ? ಮೊದಲು ಸರ್ಕಾರ ಮಾಡುತ್ತಿರುವ ಒಳ್ಳೆ ಕೆಲಸಗಳ ಬಗ್ಗೆ ನೋಡಿ ನಂತರ ಮಾತಾಡಿ ಎಂದು ಸಿದ್ದರಾಮಯ್ಯಗೆ ಸೋಮಶೇಖರ್ ತಿವಿದಿದ್ದಾರೆ.
https://youtu.be/lwfLpyPrcX0








