ಬಾಗಲಕೋಟೆ : ದೇಶದಲ್ಲಿ ಕೊರೊನಾ ಸೋಂಕು ಜನತೆಯನ್ನು ತಲ್ಲಣಗೊಳಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಅದರಂತೆ ನಮ್ಮ ರಾಜಕೀಯ ನಾಯಕರೂ ಸಹ ಕೊರೊನಾ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಅಲ್ಲದೆ ಮಾಸ್ಕ್, ದಿನಸಿ ವಿತರಿಸುತ್ತಿದ್ದಾರೆ. ಅದರಂತೆ ಬಾಗಲಕೋಟೆ ಜಿಲ್ಲೆಯಾದ್ಯಂತ ಆರೋಗ್ಯ ದೃಷ್ಟಿಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ 1.66 ಲಕ್ಷ ಮಾಸ್ಕ್ ಗಳ ವಿತರಣೆಗೆ ವ್ಯವಸ್ಥೆ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರ ಅಭಿಮಾನಿ ಬಳಗ ಬಾಗಲಕೋಟೆಯ ಬದಾಮಿಯಲ್ಲಿ 1 ಲಕ್ಷದ 66 ಸಾವಿರ ಜನರಿಗೆ ಉಚಿತ ಮಾಸ್ಕ್ ಗಳನ್ನು ವಿತರಿಸಲು ಮುಂದಾಗಿದೆ. ಈಗಾಗಲೇ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಅಧಿಕಾರಿಗಳಿಗೆ ಮಾಸ್ಕ್ ಗಳನ್ನು ಹಸ್ತಾಂತರಿಸಲಾಗಿದೆ. ಬದಾಮಿ ಕ್ಷೇತ್ರದ 114 ಗ್ರಾಮ, ಬದಾಮಿ, ಗುಳೇದಗುಡ್ಡ, ಕೆರೂರು ಪಟ್ಟಣಗಳಲ್ಲಿ ಉಚಿತ ಮಾಸ್ಕ್ ವಿತರಣೆ ಮಾಡಲಾಗುವುದು. ಬದಾಮಿ ಕ್ಷೇತ್ರದಲ್ಲಿ ಅಂದಾಜು 1 ಲಕ್ಷಕ್ಷೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಪ್ರತಿ ಕುಟುಂಬಕ್ಕೂ ಎರಡೆರಡು ಮಾಸ್ಕ್ ವಿತರಣೆ ಮಾಡಲಾಗುವುದು.








