ಹಾವೇರಿ : ಕೊರೊನಾ ಬಂದಾಗಿನಿಂದಲೂ ಪ್ರಧಾನಿ ನರೇಂದ್ರ ಮೋದಿ ಎಲ್ಲೂ ಹೋಗಿಲ್ಲ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಚಿವ ಬೈರತಿ ಬಸವರಾಜು ಪ್ರತಿಕ್ರಿಯೆ ನೀಡಿದ್ದು, ಕೊರೊನಾ ಟೈಂನಲ್ಲಿ ಸಿದ್ದರಾಮಯ್ಯ ಕೂಡ ಎಲ್ಲೂ ಹೋಗಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಹಾವೇರಿಯ ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗಿಯಾಗಿ ನಂತರ ಮಾತನಾಡಿದ ಸಚಿವರು, ಕೋವಿಡ್-19 ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂಬುವುದು ಮಾಜಿ ಸಿಎಂ ಸಿದ್ದರಾಮಯ್ಯನವರ ಆರೋಪ ಆಧಾರ ರಹಿತವಾಗಿವೆ. ಎಲ್ಲೆಲ್ಲಿ ಏನಾಗಿದೆ ಎಂಬುದರ ದಾಖಲೆ ಇದ್ದರೆ ಕೊಡಲಿ. ಆ ಬಳಿಕ ಟೀಕೆ ಮಾಡಲಿ. ಸಿದ್ದರಾಮಯ್ಯ ದಾಖಲೆ ನೀಡಿದರೆ ಅದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಅಲ್ಲದೆ ಕೋವಿಡ್-19 ನಿಯಂತ್ರಣಕ್ಕೆ ತರುವ ವಿಚಾರದಲ್ಲಿ ನಮ್ಮ ಸರ್ಕಾರ ಹಿಂದೆ ಬಿದ್ದಿಲ್ಲ. ಇಡೀ ದೇಶದಲ್ಲಿ ಕರ್ನಾಟಕ ಸರ್ಕಾರಕ್ಕೆ ಕೊರೊನಾ ವಿಚಾರದಲ್ಲಿ ಮೆಚ್ಚುಗೆ ಸಿಕ್ಕಿದೆ. ಕೊರೊನಾ ಸಮಯದಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಬೇಕಿತ್ತು. ಆದರೆ ಸಿದ್ದರಾಮಯ್ಯ ಎಲ್ಲೂ ಹೋಗಿಲ್ಲ, ಮನೆಯಲ್ಲಿ ಕುಳಿತಿದ್ದಾರೆ. ಹೀಗಾಗಿ ಕೇವಲ ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಬೈರತಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ಲಾಕ್ ಡೌನ್ ಬಗ್ಗೆ ಮಾತನಾಡಿದ ಬೈರತಿ ಬಸವರಾಜು, ಮತ್ತೆ ಲಾಕ್ ಡೌನ್ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲೆಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿ ಆಗಿವೆ. ಅಲ್ಲಿ ಮಾತ್ರ ಸೀಲ್ ಡೌನ್ ಮಾಡುತ್ತೇವೆ ಎಂದು ಹೇಳಿದ್ದಾರೆ.