ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದೇ RSS ಟೀಕಿಸಿ – ಸಿದ್ದು ವಿರುದ್ಧ ಕಿಡಿಕಾರಿದ ಸಿಎಂ
RSS ಚಡ್ಡಿಯನ್ನು ಸುಡುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಹರಿಹಾಯ್ದಿದ್ದಾರೆ. ಪದೇಪದೇ RSS ವಿರುದ್ಧ ಟೀಕೆ ಮಾಡುವ ವಿಪಕ್ಷ ನಾಯಕರಿಗೆ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಬಸವರಾಜ್ ಬೊಮ್ಮಾಯಿ, ಆರ್ ಎಸ್ಎಸ್ ಕಳೆದ 75 ವರ್ಷಗಳಿಂದ ದೇಶಸೇವೆ ಮಾಡಿಕೊಂಡು ಬಂದಿದೆ. ದೇಶಸೇವೆಗೆ, ರಾಷ್ಟ್ರನಿರ್ಮಾಣದಲ್ಲಿ ದೇಶಭಕ್ತಿಯನ್ನು ಜನರಲ್ಲಿ ಮೂಡಿಸುವ ಸಂಸ್ಥೆ ಆರ್ ಎಸ್ಎಸ್. ಬೇರೆ ಬೇರೆ ರಾಜ್ಯಗಳಲ್ಲಿ ಆರ್ ಎಸ್ ಎಸ್ ಉತ್ತಮ ಕೆಲಸ ಮಾಡಿಕೊಂಡು ಬಂದಿದೆ. ಆದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರು ರಾಜಕೀಯ ಲಾಭಕ್ಕಾಗಿ ಆರ್ ಎಸ್ ಎಸ್ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಜನತೆಗೆ ಆರ್ ಎಸ್ ಎಸ್ ಎಂದರೆ ಏನು ಎಂದು ಗೊತ್ತಿದೆ. ಕಾಂಗ್ರೆಸ್ ನವರು ಹೀಗೆ ಮಾತನಾಡುತ್ತಾ ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಇದೀಗ ಕರ್ನಾಟಕದಲ್ಲಿ ಕೂಡ ಕಳೆದುಕೊಳ್ಳುತ್ತಾರೆ. ಆರ್ ಎಸ್ ಎಸ್ ವಿರುದ್ಧ ಕಾಂಗ್ರೆಸ್ ನವರು ಹೀಗೆ ಮಾತನಾಡುತ್ತಾ ಹೋದರೆ ತಕ್ಕ ಪಾಠ ಕಲಿಸುತ್ತಾರೆ ಎಂದರು.








