ಜನ ಸಾಮಾನ್ಯರ ಸಾರಿಗೆಗೆ ಮೋದಿ ಸರ್ಕಾರದಿಂದ ಅನ್ಯಾಯ
ಬೆಂಗಳೂರು : ಖಾಸಗಿಯವರಿಗೆ ಪ್ರತಿ ಲೀಟರ್ ಡೀಸೆಲ್ 88 ರೂಪಾಯಿಗೆ ಲಭಿಸಿದರೆ, ಸರ್ಕಾರದ ನಿಗಮಗಳು 113 ರೂ. ಪಾವತಿಸಬೇಕಾಗಿದೆ. ಇದು ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಸಾರಿಗೆಗೆ ಮಾಡುತ್ತಿರುವ ಅನ್ಯಾಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಲ್ಕ್ ಡೀಸೆಲ್ ಖರೀದಿಯ ಮೇಲೆ ರಾಜ್ಯ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ 25 ರೂ. ಹಣ ವಸೂಲಿ ಮಾಡುತ್ತಿರುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ… ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈ ನಿಗಮಗಳು ಖರೀದಿಸುವ ಪ್ರತಿ ಲೀಟರ್ ಡೀಸೆಲ್ ಮೇಲೆ ಖಾಸಗಿಯವರಿಗಿಂತ 25 ರೂ. ಹೆಚ್ಚು ಸಂಗ್ರಹಿಸುತ್ತಿದೆ.

ಬಲ್ಕ್ ಆಗಿ ಖರೀದಿಸುವವರು ಪ್ರತಿ ಲೀಟರ್ ಮೇಲೆ 25 ರೂ.ಗಳನ್ನು ಹೆಚ್ಚು ಪಾವತಿಸಬೇಕು ಎಂಬ ನಿಯಮದಿಂದಾಗಿ ಈ ಸಮಸ್ಯೆ ಬಂದೊದಗಿದೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳು ಪ್ರತಿ ದಿನ ಸುಮಾರು 13 ಲಕ್ಷ ಲೀಟರ್ ಡೀಸೆಲ್ ಬಳಸುತ್ತವೆ. ಲೀಟರ್ ಮೇಲೆ 25 ರೂ. ಹೆಚ್ಚಿಗೆ ಪಾವತಿಸಬೇಕಾಗಿರುವುದರಿಂದ ಪ್ರತಿ ದಿನ 3.25 ಕೋಟಿ ರೂಪಾಯಿಗಳನ್ನು, ವರ್ಷಕ್ಕೆ 1,187 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಿದೆ.
ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ಎರಡೂವರೆ ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ. ಈ ನೌಕರರು ರಾಜ್ಯದ ಇತರೆ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಗಳಿಗಿಂತ ಶೇ.40 ರಷ್ಟು ಕಡಿಮೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.








