ರಾಜ್ಯಪಾಲರು ಭಾಷಣದಲ್ಲಿ ಏನೂ ಹೇಳಿಲ್ಲ, ಕಾರಣ ಬಿಜೆಪಿ ಸಾಧನೆ ಶೂನ್ಯ
ಬೆಂಗಳೂರು : ರಾಜ್ಯಪಾಲ ಭಾಷಣದಲ್ಲಿ ಏನೂ ಹೇಳಿಲ್ಲ. ಇದಕ್ಕೆ ಕಾರಣ ರಾಜ್ಯ ಬಿಜೆಪಿ ಸರ್ಕಾರದ ಶೂನ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ವಿಧಾನ ಮಂಡಲ ಅಧಿವೇಶನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿಲುವು, ಯೋಜನೆಗಳು, ಮುನ್ನೋಟದ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟತೆ ಇರಬೇಕು. ಆದರೆ, ರಾಜ್ಯಪಾಲರು ಇಂದು ಮಾಡಿದ ಭಾಷಣದಲ್ಲಿ ಆ ಯಾವುದೂ ಇಲ್ಲ. ಇದೊಂದು ಸುಳ್ಳಿನ ಕಂತೆ. ರಾಜ್ಯಪಾಲರ ಮೂಲಕ ಸರ್ಕಾರ ಸುಳ್ಳು ಹೇಳಿಸಿದೆ ಎಂದು ಆರೋಪಿಸಿದರು.
ಯಾವುದೇ ಒಂದು ಸರ್ಕಾರಕ್ಕೆ ದೂರದೃಷ್ಟಿ ಇರಬೇಕು. ಈ ಸರ್ಕಾರದ ಅವಧಿ ಇನ್ನೂ ಎರಡೂವರೆ ವರ್ಷ ಇದೆ. ಈ ಅವಧಿಯಲ್ಲಿ ನಾವು ಏನು ಮಾಡಲಿದ್ದೇವೆ ಎಂಬುದನ್ನು ಹೇಳಬೇಕಿತ್ತು. ರಾಜ್ಯದ ಹಣಕಾಸು ಪರಿಸ್ಥಿತಿ, ನೀರಾವರಿ ಯೋಜನೆಗಳ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪ ಮಾಡಬೇಕಿತ್ತು. ರಾಜ್ಯ ಅಭಿವೃದ್ಧಿಯಲ್ಲಿ 10 ವರ್ಷ ಹಿಂದಕ್ಕೆ ಹೋಗಿದೆ. ಹಣಕಾಸು ಪರಿಸ್ಥಿತಿ ಹದಗೆಡಲು, ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳಲು, ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡದಿರಲು ಕೊರೊನಾ ಕಾರಣ ಎಂದು ಮುಖ್ಯಮಂತ್ರಿ ಅವರು ನೆಪ ಹೇಳುತ್ತಾರೆ.
ಬಿಜೆಪಿ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾಗಿದೆ. ಈ ಅವಧಿಯಲ್ಲಿನ ಯೋಜನೆ, ಕಾರ್ಯಕ್ರಮಗಳು, ಮುನ್ನೋಟ, ದೂರದೃಷ್ಟಿ ಏನು ಎಂಬುದರ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಏನೂ ಹೇಳಿಲ್ಲ. ಇದಕ್ಕೆ ಕಾರಣ, ರಾಜ್ಯ ಬಿಜೆಪಿ ಸರ್ಕಾರದ ಶೂನ್ಯ ಸಾಧನೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರವಿದ್ದಾಗ ಪ್ರತಿ ವರ್ಷವೂ ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಸಿದ್ದೇವೆ. ಸುವರ್ಣ ಸೌಧ ಕಟ್ಟಿಸಿದ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಸರ್ಕಾರಿ ಕಚೇರಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ, ಉತ್ತರ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದವರು ಈಗ ಅಧಿವೇಶನ ನಡೆಸಲೂ ತಯಾರಿಲ್ಲ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಅಧಿವೇಶನ ನಡೆಸದೆ ಆ ಭಾಗದ ಜನತೆಗೆ ಸರ್ಕಾರ ದ್ರೋಹ ಮಾಡಿದೆ. ಹೀಗಾಗಿ ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಿದ್ದೇವೆ. ವರ್ಷಕ್ಕೆ ಒಮ್ಮೆಯಾದರೂ ಬೆಳಗಾವಿಯಲ್ಲಿ ಅಧಿವೇಶನ ನಡೆಯಲೇಬೇಕು ಎಂದು ಆಗ್ರಹಿಸಿದರು.
ಒಂದಷ್ಟು ಸುಳ್ಳು, ಇನ್ನೊಂದಿಷ್ಟು ತಪ್ಪು ಮಾಹಿತಿ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ರಾಜ್ಯಪಾಲರ ಭಾಷಣದಲ್ಲಿ ಹೇಳಿಸುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹತಾಶ ಪ್ರಯತ್ನ ನಡೆಸಿದೆ. ಕೊರೊನಾದಂತಹ ಮಾರಕ ರೋಗವನ್ನು ಬ್ರಹ್ಮಾಂಡ ಭ್ರಷ್ಟಚಾರವೆಸಗಲು ದುರುಪಯೋಗ ಪಡಿಸಿಕೊಂಡ ಬಿಜೆಪಿ ಸರ್ಕಾರ, ರೋಗ ನಿಯಂತ್ರಣದಲ್ಲಿನ ವೈಫಲ್ಯಗಳನ್ನು ಸುಳ್ಳು ಅಂಕಿ ಅಂಶಗಳ ಮೂಲಕ ಮರೆಮಾಚಲು ಪ್ರಯತ್ನಿಸಿದೆ.
ತೆರಿಗೆಯಲ್ಲಿ ಪಾಲು, 15ನೇ ಹಣಕಾಸು ಆಯೋಗದ ಅನುದಾನ ಮತ್ತು ಜಿಎಸ್ ಟಿ ಪರಿಹಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ವಿವರವನ್ನು ರಾಜ್ಯಪಾಲರ ಭಾಷಣದಲ್ಲಿ ನೀಡಿದ್ದರೆ ಬಿಎಸ್ ವೈ ಸರ್ಕಾರದ ಬಣ್ಣ ಸಂಪೂರ್ಣ ಬಯಲಾಗುತ್ತಿತ್ತು. ಕಳೆದ ವರ್ಷ ಅತಿವೃಷ್ಟಿಯಿಂದ 9,94,556 ಹೆಕ್ಟೇರ್ ಬೆಳೆ ನಾಶವೂ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.25,518 ಕೋಟಿ ಪರಿಹಾರ ಕೇಳಿದ್ದ ರಾಜ್ಯ ಬಿಜೆಪಿ ಸರ್ಕಾರ, ಈ ಬಾರಿ 20,86,703 ಹೆಕ್ಟೇರ್ ಬೆಳೆ ನಾಶ ಸೇರಿದಂತೆ ಒಟ್ಟು ನಷ್ಟಕ್ಕೆ ರೂ.24,941.73 ಕೋಟಿ ಪರಿಹಾರವನ್ನು ಕೇಳಿ ರಾಜ್ಯಕ್ಕೆ ದ್ರೋಹ ಬಗೆದಿದೆ.
ಕಳೆದ ವರ್ಷ ರೂ.25,518 ಕೋಟಿ ಪರಿಹಾರ ಕೇಳಿದರೂ ಕೇಂದ್ರದಿಂದ ಕೇಳಿದರೂ ಸಿಕ್ಕಿರುವುದು ಮಾತ್ರ ರೂ.1,634 ಕೋಟಿ ಮಾತ್ರ. ರಾಜ್ಯ ಬಿಜೆಪಿ ಸರ್ಕಾರ ಸಮರ್ಪಕ ಸಮೀಕ್ಷಾ ವರದಿ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರಿದರೆ ಮಾತ್ರ ಹೆಚ್ಚಿನ ಪರಿಹಾರ ಸಿಗಲು ಸಾಧ್ಯ. ಮಳೆ ಮತ್ತು ಪ್ರವಾಹದ ನಷ್ಟಕ್ಕೆ ರಾಜ್ಯ ಸರ್ಕಾರ ಇಲ್ಲಿಯ ವರೆಗೆ ನೀಡಿರುವ ಪರಿಹಾರ ಕೇವಲ ರೂ.36.57 ಕೋಟಿ ಮಾತ್ರ. ಎರಡನೇ ಹಂತದಲ್ಲಿ ಗುರುತಿಸಲಾದ ಸಂತ್ರಸ್ತರಲ್ಲಿ ಯಾರೊಬ್ಬರಿಗೂ ಸೂಕ್ತ ಪರಿಹಾರಧನ ಈ ವರೆಗೆ ತಲುಪಿಲ್ಲ ಎಂದು ವಿವರಣೆ ನೀಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel