Siddaramaiah | ಸಿಎಂ ಬೊಮ್ಮಾಯಿಗೆ ಪ್ರಶ್ನೆಗಳ ಸುರಿಮಳೆಗೈದ ಹುಲಿಯಾ-Siddaramaiah questions CM Bommai on twitter
ಬೆಂಗಳೂರು : ಹರ್ ಘರ್ ತಿರಂಗಾ ಅಬಿಯಾನದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿವರಣೆ ನೀಡಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ಹಲವು ಪ್ರಶ್ನೆಗಳಗೈದಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ನಲ್ಲಿ…
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಏಕೆ ತ್ರಿವರ್ಣಧ್ವಜ? ಎಂಬ ನಿಮ್ಮ ವಿವರಣೆ ಓದಿ ಸಂತೋಷವಾಯಿತು. ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿದ್ದಕ್ಕಾಗಿ ರಾಜ್ಯದ ಜನರ ಪರವಾಗಿ ನಿಮಗೆ ಧನ್ಯವಾದಗಳು. ಇದರ ಜೊತೆಗೆ ಜನರ ಪರವಾಗಿ ನಾನು ಕೇಳುವ ಹದಿಮೂರು ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸುವಿರೆಂದು ನಂಬಿದ್ದೇನೆ.
ಸ್ವತಂತ್ರ ಭಾರತದಲ್ಲಿ 52 ವರ್ಷಗಳ ವರೆಗೆ ದೇಶ ಹೆಮ್ಮೆ ಪಡುವ ರಾಷ್ಟ್ರಧ್ವಜವನ್ನು ಆರ್.ಎಸ್.ಎಸ್ ಕಚೇರಿ ಮೇಲೆ ಹಾರಿಸದೆ ಇರಲು ಕಾರಣವೇನು? 2001ರಲ್ಲಿ ದೇಶಭಕ್ತ ಯುವಕರು ರಾಷ್ಟ್ರಧ‍್ವಜ ಹಾರಿಸಲು ಬಂದಾಗ ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿರುವುದು ಏಕೆ ಬಸವರಾಜ ಬೊಮ್ಮಾಯಿ?
ದೇಶಕ್ಕೆ ತ್ರಿವರ್ಣ ಧ್ವಜ ಅಲ್ಲ ಭಗವಾಧ‍್ವಜವೇ ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಆರ್.ಎಸ್.ಎಸ್ ಸರಸಂಘಚಾಲಕರಾದ ಕೆ.ಬಿ.ಹೆಡಗೆವಾರ್, ಎಂ.ಎಸ್ ಗೋಲ್ವಾಲ್ಕರ್ ಅವರ ನಿಲುವಿನ ಬಗ್ಗೆ ನಿಮ್ಮ ಮತ್ತು ನಿಮ್ಮ ಪಕ್ಷದ ಈಗಿನ ಅಭಿಪ್ರಾಯವೇನು ಬಸವರಾಜ ಬೊಮ್ಮಾಯಿ ?
“ತ್ರಿವರ್ಣ ಧ್ವಜ ರಾಷ್ಟ್ರೀಯ ಮುನ್ನೋಟ, ಸತ್ಯ, ಇತಿಹಾಸ ಇಲ್ಲವೇ ಪರಂಪರೆಯಿಂದ ಪ್ರೇರಣೆ ಪಡೆದು ತಯಾರಿಸಿದ್ದಲ್ಲ, ಇದು ಫ್ರೆಂಚ್ ಕ್ರಾಂತಿಯ ಘೋಷಣೆಗಳ ಎರವಲು” ಎಂದು ಆರ್.ಎಸ್.ಎಸ್ ಸರಸಂಘಚಾಲಕ ಗೋಲ್ವಾಲ್ಕರ್ ತಮ್ಮ ‘ಬಂಚ್ ಆಫ್ ಥಾಟ್ಸ್’ ನಲ್ಲಿ ಹೇಳಿರುವುದನ್ನು ನೀವು ಧಿಕ್ಕರಿಸುತ್ತೀರಾ ಬಸವರಾಜ ಬೊಮ್ಮಾಯಿ ?
“ತ್ರಿವರ್ಣ ಧ್ವಜ ಎನ್ನುವುದು ಫ್ರೆಂಚ್ ಕ್ರಾಂತಿಯ ಘೋಷಣೆಗಳಾದ ಸ್ವಾತಂತ್ರ್ಯ, ಸಮಾನತೆ, ಮತ್ತು ಭಾತೃತ್ವದ ಬಗೆಗಿನ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಗೀಳಿನಿಂದ ಹುಟ್ಟು ಪಡೆದಿರುವುದು” ಎಂದು ಗೋಲ್ವಾಲ್ಕರ್ ಹೇಳಿರುವುದನ್ನು ಈಗಲೂ ನೀವು ಒಪ್ಪುವಿರಾ ಬಸವರಾಜ ಬೊಮ್ಮಾಯಿ ಎಂದು ಪ್ರಶ್ನಿಸಿದ್ದಾರೆ.