ಸಮಸಮಾಜಕ್ಕಾಗಿ ಹೋರಾಟ ನಡೆಸಿದ್ದ ಮನುಷ್ಯಪ್ರೇಮಿಗಳೆಲ್ಲರೂ ನನಗೆ ಆದರ್ಶ

1 min read
Siddaramaiah

ಸಮಸಮಾಜಕ್ಕಾಗಿ ಹೋರಾಟ ನಡೆಸಿದ್ದ ಮನುಷ್ಯಪ್ರೇಮಿಗಳೆಲ್ಲರೂ ನನಗೆ ಆದರ್ಶ

ಬೆಂಗಳೂರು : ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ನೀವು ಅಧಿಕಾರದಲ್ಲಿದ್ದಾಗ ಟಿಪ್ಪು ಸುಲ್ತಾನ್ ಸ್ತಬ್ಧ ಚಿತ್ರ ಕಳುಹಿಸಿದ್ದು ಯಾಕೆ ಎಂಬ ಸಚಿವ ಸುನಿಲ್ ಕುಮಾರ್ ಅವರ ಪ್ರಶ್ನೆಗೆ ಟ್ವಿಟ್ಟರ್ ನಲ್ಲಿ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಗಣರಾಜ್ಯೋತ್ಸವದ ಪರೇಡ್ ಗೆ ಟಿಪ್ಪು ಸುಲ್ತಾನ್ ಸ್ತಬ್ಧ ಚಿತ್ರ ಕಳಿಸಿದ್ದು ನಿಜ. ಅವಕಾಶ ಸಿಕ್ಕಿದ್ದರೆ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನೂ ಕಳುಹಿಸುತ್ತಿದ್ದೆ. ಟಿಪ್ಪು ವಿರೋಧಿಸುತ್ತಿರುವವರು ನಾರಾಯಣ ಗುರುಗಳನ್ನೂ ವಿರೋಧಿಸುತ್ತಿರುವುದು ಯಾಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಮಾತ್ರವಲ್ಲ, ಅಪ್ರತಿಮ ದೇಶಪ್ರೇಮಿ ಸುಭಾಷ್ ಚಂದ್ರ ಬೋಸ್ ಅವರ ಸ್ತಬ್ದಚಿತ್ರವನ್ನೂ ಕೇಂದ್ರ ಬಿಜೆಪಿ ಸರ್ಕಾರ ತಿರಸ್ಕರಿಸಿದೆ. ಇದು ಯಾವ ಧರ್ಮಪ್ರೇಮ? ಯಾವ ದೇಶಪ್ರೇಮ?

 ಟಿಪ್ಪು ಸುಲ್ತಾನ್ ಅವರನ್ನು ಹಾಡಿ ಹೊಗಳಿ ದೊಡ್ಡ ಗ್ರಂಥವನ್ನೇ ರಚಿಸಿದ್ದು ಜಗದೀಶ್ ಶೆಟ್ಟರ್  ನೇತೃತ್ವದ ಬಿಜೆಪಿ ಸರ್ಕಾರ. ಅದನ್ನು ಪ್ರಕಟಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೇರೆಯವರ ಮೇಲೆ ಆರೋಪಿಸಲು ದೊಡ್ಡಬಾಯಿ ಬಿಡುವ ಸುನಿಲ್ ಕುಮಾರ್ ಆಗ ಬಾಯಿ ಮುಚ್ಚಿಟ್ಟುಕೊಂಡಿದ್ದು ಯಾಕೆ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರವೇ ಪ್ರಕಟಿಸಿದ್ದ ಟಿಪ್ಪು ಸುಲ್ತಾನ್ ಕುರಿತ ಗ್ರಂಥ ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗ್ರಂಥಾಲಯದಲ್ಲಿದೆ. ಈ ಗ್ರಂಥ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಈಗ ಸಚಿವರಾಗಿರುವ ಸುನಿಲ್ ಕುಮಾರ್ ಗಮನಕ್ಕೆ ಇನ್ನೂ ಬಂದಿಲ್ಲವೇ? ಯಾಕೆ ಈ ಆತ್ಮವಂಚನೆ?

2017ರಲ್ಲಿ ಕರ್ನಾಟಕ ವಿಧಾನಮಂಡಲದ ವಜ್ರಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಟಿಪ್ಪು ಸುಲ್ತಾನ್ ಅವರನ್ನು ಸ್ವಾತಂತ್ರ್ಯಯೋಧ ಎಂದು ಹಾಡಿ ಹೊಗಳಿದ್ದಾಗ ಸುನಿಲ್ ಕುಮಾರ್ ಮತ್ತು ಇತರೆ ಬಿಜೆಪಿ ನಾಯಕರು ಎಲ್ಲಿ ಅಡಗಿಕೊಂಡಿದ್ದರು?

ನಾರಾಯಣ ಗುರು ಸ್ತಬ್ಧ ಚಿತ್ರದ ವಿವಾದ ಹುಟ್ಟಿಕೊಂಡ ದಿನದಿಂದ ನರೇಂದ್ರ ಮೋದಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳ ಮೂಟೆ ಉರುಳಿಸುತ್ತಿರುವ ಸಚಿವ ಸುನಿಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪ್ರಹ್ಲಾದ್ ಜೋಶಿ ರಂಥವರು ನಾರಾಯಣ ಗುರುಗಳನ್ನು ತಾವು ಒಪ್ಪುವುದಿಲ್ಲ ಎಂಬ ಒಂದು ಸತ್ಯವನ್ನು ಯಾಕೆ ಹೇಳಬಾರದು.

ನಾರಾಯಣ ಗುರುಗಳು ನನ್ನ ಸೈದ್ಧಾಂತಿಕ ಗುರುಗಳು. ಆ ಗೌರವದ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿಯೇ ನಾರಾಯಣ ಗುರುಗಳ ಜಯಂತಿಯನ್ನು ರಾಜ್ಯ ಸರ್ಕಾರವೇ ಅಧಿಕೃತವಾಗಿ ಆಚರಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೆ. ಇದರಿಂದಾಗಿ ಗುರುಗಳ ಸಂದೇಶ ಮನೆಮನೆಗಳನ್ನು ಮುಟ್ಟುವಂತಾಗಿದೆ.

ಟಿಪ್ಪು ಸುಲ್ತಾನ್ ಮಾತ್ರವಲ್ಲ ಸಮಸಮಾಜಕ್ಕಾಗಿ ಹೋರಾಟ ನಡೆಸಿದ್ದ ಮನುಷ್ಯಪ್ರೇಮಿಗಳೆಲ್ಲರೂ ನನಗೆ ಆದರ್ಶಪ್ರಾಯರು. ಮುಖ್ಯಮಂತ್ರಿಯಾಗಿ ನಾನು ಈ ಮಹಾಪುರುಷರ ಚಿಂತನೆಗೆ ಸರ್ಕಾರದ ಯೋಜನೆಗಳ ರೂಪಕೊಟ್ಟು ಅನುಷ್ಠಾನಗೊಳಿಸಿದ್ದೆ. ನಾನು BJP ನಾಯಕರಂತೆ ಆತ್ಮವಂಚಕನಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಬೆಂಕಿಕಾರಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd