ಬೆಂಗಳೂರು : ಬಡವರಿಗೆ, ಕೊರೊನಾ ಸೋಂಕಿತರಿಗೆ ಸಹಾಯ ಮಾಡುವ ಉದ್ದೇಶದಿಂದ ಕೆಪಿಸಿಸಿ ಕೊರೊನಾ ಪರಿಹಾರ ನಿಧಿ ಆರಂಭಿಸಿದೆ. ಈ ಕೊರೊನಾ ಪರಿಹಾರ ನಿಧಿಗೆ ವೈಯಕ್ತಿಕವಾಗಿ ತಲಾ ಕನಿಷ್ಠ ಒಂದು ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡುವಂತೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ರಾಜ್ಯದ ಜನತೆಯನ್ನು ಸಂಕಷ್ಟಕ್ಕೀಡು ಮಾಡಿದೆ. ಇದರಿಂದಾಗಿ ದುಡಿಯುವ ವರ್ಗಕ್ಕೆ ಉದ್ಯೋಗಗಳಿಲ್ಲದೆ ಆಹಾರ,ನೀರು,ಔಷಧಿಗಳಿಗೆ ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳೆರಡೂ ಸನ್ನಿವೇಶವನ್ನು ಸಮರ್ಪಕವಾಗಿ ನಿಭಾಯಿಸಬೇಕಾಗಿತ್ತು. ಆದರೆ ಎರಡೂ ಸರ್ಕಾರಗಳಿಂದಲೂ ಪರಿಹಾರ ಕಾರ್ಯ ಸೂಕ್ತವಾಗಿ ನಡೆಯುತ್ತಿಲ್ಲ.
ಈ ಸಂದರ್ಭದಲ್ಲಿ ನಾವೆಲ್ಲರೂ ಜನ ಕಂಗೆಡದಂತೆ ಅವರ ಜೊತೆ ನಿಂತು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾಗಿದೆ. ಆದ್ದರಿಂದ ನಮ್ಮ ಪಕ್ಷದ ಶಾಸಕರು, ಸಂಸದರು ವೈಯಕ್ತಕವಾಗಿ ತಲಾ ಕನಿಷ್ಟ ಒಂದು ಲಕ್ಷ ರೂ. ಗಳ ದೇಣಿಗೆ ನೀಡಬೇಕೆಂದು ಕೋರುತ್ತೇನೆ, ಹಾಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿದ್ದುಕೊಂಡು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದು ಶಾಸಕರಿಗೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.








