Siddaramaiah | ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಆದೇಶ ನೀಡಿ
1 min read
1 month ago
Siddaramaiah | ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಆದೇಶ ನೀಡಿ
ಬೆಂಗಳೂರು : ಧಾರವಾಡ ನುಗ್ಗೀಕೇರಿ ಆಂಜನೇಯ ದೇವಸ್ಥಾನ ಆವರಣದಲ್ಲಿ ಮುಸ್ಲಿಂರಿಗೆ ಸೇರಿದ ನಾಲ್ಕು ಅಂಗಡಿಗಳನ್ನು ಶ್ರೀ ರಾಮಸೇನೆ ಕಾರ್ಯಕರ್ತರು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ರಾಜ್ಯದ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಇನ್ನೂ ಅಧಿಕಾರದಲ್ಲಿದ್ದರೆ ತಕ್ಷಣ ಧಾರವಾಡದ ಮುಸ್ಲಿಂ ವರ್ತಕರ ಮೇಲೆ ದೌಜ್ಯನ್ಯವೆಸಗಿದ್ದ ಶ್ರೀರಾಮ ಸೇನೆಯ ಪುಂಡರನ್ನು ಒದ್ದು ಒಳಗೆ ಹಾಕಲು ಪೊಲೀಸರಿಗೆ ಆದೇಶ ನೀಡಬೇಕು, ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ನೀಡಿ ಕುರ್ಚಿಯ ಮಾನ ಕಾಪಾಡಿ ಎಂದು ಗರಂ ಆಗಿದ್ದಾರೆ.
ಭಾರತೀಯ ಜನತಾ ಪಕ್ಷ ಹೇಳಿಕೊಂಡು ಬರುತ್ತಿರುವ ‘ರಾಮ ರಾಜ್ಯ’ದ ಒಂದು ಚಿತ್ರವನ್ನು ರಾಮ ನವಮಿಯ ಹಿನ್ನೆಲೆಯಲ್ಲಿ ಧಾರವಾಡದ ಶ್ರೀರಾಮಸೇನೆಯ ಗೂಂಡಾಗಳು ಜಗತ್ತಿನ ಮುಂದೆ ಇಟ್ಟಿದ್ದಾರೆ. ಇಂತಹ ಗೂಂಡಾಗಳಿಗೆ ರಾಮನ ಹೆಸರು ಹೇಳುವ ಯಾವ ಯೋಗ್ಯತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಧಾರವಾಡದಲ್ಲಿ ನಡೆದ ಹಲ್ಲೆ ಕೇವಲ ಮುಸ್ಲಿಂ ವ್ಯಾಪಾರಿಗಳ ಮೇಲೆ ನಡೆದದ್ದಲ್ಲ, ಅದು ಅವರು ಮಾರಾಟ ನಡೆಸುತ್ತಿದ್ದ ಕಲ್ಲಂಗಡಿ ಬೆಳೆಯುವ ರೈತರ ಮೇಲೆ ನಡೆದಿರುವ ದೌರ್ಜನ್ಯವೂ ಆಗಿದೆ. ಈ ಗೂಂಡಾಗಳನ್ನು ಹೀಗೆ ಸ್ವತಂತ್ರವಾಗಿ ಬಿಟ್ಟರೆ ಇವರು ಎಲ್ಲರ ಮನೆ ಬಾಗಿಲು ತಟ್ಟಲಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ಗಮನವನ್ನು ಬೇರೆಡೆ ಸೆಳೆದು, ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಸರ್ಕಾರವನ್ನೇ ಸಂಘ ಪರಿವಾರಕ್ಕೆ ಔಟ್ ಸೋರ್ಸ್ ಮಾಡಿ, ಅಲ್ಲಿನ ಪುಂಡರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಹಾಗೆ ಕಾಣುತ್ತಿದೆ. ರಾಜ್ಯದ ಇತಿಹಾಸದಲ್ಲಿ ಇದೊಂದು ಶಾಶ್ವತ ಕಳಂಕ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ಸಂಪುಟ ಇಲ್ಲವೇ ಪಕ್ಷದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಸರ್ಕಾರವನ್ನು ಸಂಘಪರಿವಾರಕ್ಕೆ ಅಡವಿಟ್ಟರೆ ತಮ್ಮ ಕುರ್ಚಿ ಉಳಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿಗಳು ಕನಸುಕಾಣುತ್ತಿದ್ದಾರೆ. ಈ ಪುಂಡಾಟಿಕೆ ಅವರ ಕುರ್ಚಿಯನ್ನೂ ಕಿತ್ತುಕೊಳ್ಳಲಿದೆ ಎನ್ನುವುದು ಅವರಿಗೆ ತಿಳಿದಿಲ್ಲ ಎಂದು ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ. Siddaramaiah slams bommai in communal issue