ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿ.ಎಸ್ ಯಡಿಯೂರಪ್ಪರ ಅಭಿನಂದನಾ ಸಮಾರಂಭಕ್ಕೆ ಹೋದಾಗಿನಿಂದಲೂ ಅವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ರಾಜ್ಯದಲ್ಲಿ ಹರಿದಾಡುತ್ತಲೇ ಇವೆ. ಇದೀಗ ಈ ಬಗ್ಗೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರು ಹೊಸ ಬಾಂಬ್ ಸಿಡಿಸಿದ್ದು, ಇದು ರಾಜ್ಯ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಅದರಲ್ಲೂ ಇಷ್ಟು ದಿನ ಸಿದ್ದರಾಮಯ್ಯ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಚಿಂಚನಸೂರ ಅವರು ಸ್ಪಷ್ಟನೆ ನೀಡಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶೀಘ್ರದಲ್ಲಿಯೇ ಬಿಜೆಪಿ ಸೇರಲಿದ್ದು, ಪಕ್ಷ ಸೇರ್ಪಡೆಯಾದ ನಂತರ ಕೇಂದ್ರ ಸಚಿವರಾಗುತ್ತಾರೆ ಎಂದು ಹೇಳಿದ್ದಾರೆ. ಕೇವಲ ಸಿದ್ದರಾಮಯ್ಯ ಮಾತ್ರವಲ್ಲದೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಚಿಂಚನಸೂರ ಅವರು ತಿಳಿಸಿದ್ದಾರೆ.
ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಮಾಜಿ ಸಚಿವ ಬಾಬುರಾವ್ ಅವರ ಹೇಳಿಕೆ ಬಿರುಗಾಳಿ ಎಬ್ಬಿಸಿದ್ದು, ಸಿದ್ದರಾಮಯ್ಯ ಕೈ ತೊರೆದು ಕಮಲ ಹಿಡಿಯುತ್ತಾರಾ ಎಂಬುವುದು ಕಾದು ನೋಡಬೇಕಾಗಿದೆ.