ಬೆಂಗಳೂರು : ಸ್ವಾತಂತ್ರ‍್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರನ್ನು ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ‘ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರನ್ನು ನಿಂದಿಸಿ ಅತ್ಯಂತ ಕೀಳಾಗಿ ಮಾತನಾಡಿರುವ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಂಡು ಅವರ ಬಾಯಿ ಮುಚ್ಚಿಸಿ, ಇಲ್ಲವಾದರೆ ಅವರ ಅಭಿಪ್ರಾಯ ನಿಮ್ಮ ಸರ್ಕಾರದ ಅಭಿಪ್ರಾಯ ಎಂದು ಒಪ್ಪಿಕೊಳ್ಳಿ’ ಎಂದು ಗುಡುಗಿದ್ದಾರೆ.
ಇದೇ ವೇಳೆ, ಮತ್ತೊಂದು ಟ್ವೀಟ್ ಮಾಡಿರುವ ಅವರು, ‘ಕೈ ಮೀರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ. ದೆಹಲಿ ಗಲಭೆ ಕಣ್ಣ ಮುಂದಿದೆ. ಒಬ್ಬರಾದ ಮೇಲೆ ಒಬ್ಬರಂತೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ರಾಜ್ಯದ ಬಿಜೆಪಿ ನಾಯಕರ ನಾಲಗೆಗೆ ತಕ್ಷಣ ಕಡಿವಾಣ ಹಾಕದಿದ್ದರೆ ಅನಾಹುತ ಕಾದಿದೆ’ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.







