ಮೈಸೂರು : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಮರ ಸಾರಿದ್ದು, ಲೆಕ್ಕ ಕೊಡಿ ಎಂದು ಅಭಿಯಾನ ಆರಂಭಿಸಿದೆ. ಈ ಬಗ್ಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಲೆಕ್ಕ ಕೇಳುತ್ತಿರುವುದು ಸರಿಯಲ್ಲ. ಅದಕ್ಕೆ ಸಮಯ ಇದಲ್ಲ ಎಂದಿದ್ದಾರೆ.
ತಮ್ಮ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಪಂಚವೇ ಭೀಕರ ಸಾಂಕ್ರಾಮಿಕ ರೋಗದಿಂದ ತಲ್ಲಣಗೊಂಡಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೆಕ್ಕ ಕೊಡಿ ಎಂದು ಕೇಳುತ್ತಿರುವುದು ಸರಿಯಲ್ಲ. ಲೆಕ್ಕ ಕೊಡಿ ಎಂದು ಕೇಳುವುದು ತಪ್ಪಲ್ಲ. ಆದರೆ ಅದಕ್ಕೆ ಇದು ಸರಿಯಾದ ಸಮಯ ಅಲ್ಲ ಎಂದರು.
ಇಡೀ ಪ್ರಪಂಚವೇ ಭೀಕರ ಸಾಂಕ್ರಾಮಿಕ ರೋಗದಿಂದ ತಲ್ಲಣಗೊಂಡಿದ್ದು, ಈ ಸಮಯದಲ್ಲಿ ಲೆಕ್ಕ ಇಡಲು ಸಾಧ್ಯವೇ ಎಂದು ಪ್ರಶ್ನಿಸಿದ ಸಂಸದರು, ಲೆಕ್ಕ ಕೇಳುವುದನ್ನು ಬಿಟ್ಟು ಸರ್ಕಾರದ ಜೊತೆ ಸಹಕಾರ ನೀಡಬೇಕು. ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೆ ಅಲ್ಲಿ ಲೆಕ್ಕ ಸಿಗುತ್ತದೆ. ಲೆಕ್ಕ ಕೊಡದೆ ಯಾರು ಎಲ್ಲಿಯೂ ಓಡಿ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.








