ಮೈಸೂರು : ಎಸ್ ಡಿಪಿಐ ರಕ್ಷಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಎಸ್ ಡಿಪಿಐ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಎಸ್ ಡಿಪಿಐ ನಿಷೇಧ ಮಾಡಲು ಸರ್ಕಾರ ಮುಂದಾಗಿದ್ದಕ್ಕೆ ಸಿದ್ದರಾಮಯ್ಯನವರಿಗೆ ಯಾಕಿಷ್ಟು ನೋವು ಆಗ್ತಿದೆ ಅಂತ ಗೊತ್ತಾಗುತ್ತಿಲ್ಲ. ಕಳೆದ 30 ವರ್ಷಗಳಲ್ಲಿ ನಡೆದ ಗಲಾಟೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯನವರು ಹೇಳುತ್ತಿದ್ದಾರೆ. 2015ರಲ್ಲಿ ಎಸ್‍ಡಿಪಿಐ ಮತ್ತು ಕೆಎಫ್ ಐ ವಿರುದ್ಧ ದಾಖಲಾಗಿದ್ದ 175 ಕ್ರಿಮಿನಲ್ ಪ್ರಕರಣಗಳನ್ನು ಇದೇ ಸಿದ್ದರಾಮಯ್ಯನವರು ಹಿಂಪಡೆದುಕೊಂಡಿದ್ದನ್ನು ಮರೆತಿದ್ದೀರಾ ಎಂದು ಪ್ರತಾಪ್ ಸಿಂಹ ಪ್ರಶ್ನೆ ಮಾಡಿದ್ದಾರೆ. ಇನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿರುವ ಸಿದ್ದರಾಮಯ್ಯ, ಪ್ರಕರಣವನ್ನು ಮುಂದಕ್ಕೆ ತಳ್ಳಿ ಎಸ್ ಡಿಪಿಐ ರಕ್ಷಣೆ ಮಾಡಲು ಮುಂದಾಗ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಗಲಭೆಗೆ ಗುಪ್ತಚರ ಇಲಾಖೆ ವೈಫಲ್ಯ ಕಾರಣ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ, ಸಿದ್ದರಾಮಯ್ಯನವರ ಆಡಳಿತದಲ್ಲಿ 12ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ಕೊಲೆಯಾದಾಗ ಗುಪ್ತಚರ ವಿಫಲವಾಗಿತ್ತಾ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ಅನಾವಶ್ಯಕವಾಗಿ ಆರೋಪಗಳನ್ನ ಮಾಡೋದು ಸರಿ ಅಲ್ಲ ಎಂದ ಪ್ರತಾಪ್ ಸಿಂಹ, ತಮ್ಮ ಆಡಳಿತಾವಧಿಯಲ್ಲಿ ದಲಿತರನ್ನ ವ್ಯವಸ್ಥಿತವಾಗಿ ಮಟ್ಟ ಹಾಕುವಂತ ಕೆಲಸ ಮಾಡಲಾಯ್ತು. ಶ್ರೀನಿವಾಸ ಪ್ರಸಾದ್ ಅವರಿಂದ ಹಿಡಿದು ಜಿ.ಪರಮೇಶ್ವರ್ ದಲಿತ ನಾಯಕರನ್ನ ಮುನ್ನಲೆಗೆ ತರಲಿಲ್ಲ. ಪರಮೇಶ್ವರ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದ ಹಾಗೆ ಒಳ ಪಿತೂರಿ ಮಾಡಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಾಗ ಮಲ್ಲಿಕಾರ್ಜುನ ಖರ್ಗೆ ಮತ್ತು ಮುನಿಯಪ್ಪರನ್ನ ಸೋಲಿಸಿದರು. ದಲಿತ ಶಾಸಕರ ಮೇಲೆ ಪುಂಡ ಮುಸ್ಲಿಮರು ದಾಳಿ ನಡೆಸಿದ್ದಾರೆ ಎಂದು ಒಮ್ಮೆಯಾದ್ರೂ ಹೇಳಿದ್ದೀರಾ ಎಂದು ಪ್ರಶ್ನಿಸಿದ್ದಾರೆ.