ಚೀನಾದಿಂದ ರಾಷ್ಟ್ರಧ್ವಜ ಬರುತ್ತಿರುವುದನ್ನ ಸಮರ್ಥಿಸುವಿರಾ..?
ಬೆಂಗಳೂರು : ಮೇಕ್ ಇನ್ ಇಂಡಿಯಾದ ಪ್ರಚಾರ ಮಾಡುವ ಬಿಜೆಪಿ ಸರ್ಕಾರ ಧ್ವಜಸಂಹಿತೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆ ಬಳಸಲು ಅವಕಾಶ ನೀಡಿರುವುದರಿಂದ ಚೀನಾದಂತಹ ದೇಶಗಳಿಂದ ಕಡಿಮೆ ಬೆಲೆಯ ರಾಷ್ಟ್ರಧ್ವಜಗಳು ಬಂದು ರಾಶಿಬೀಳುತ್ತಿರುವುದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಬಸವರಾಜ ಬೊಮ್ಮಾಯಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಸಾಕಷ್ಟು ಪ್ರಶ್ನೆಗಳನ್ನುಗೈದಿದ್ದಾರೆ.
ಸಿದ್ದರಾಮಯ್ಯ ಅವರ ಟ್ವೀಟ್ ನಲ್ಲಿ.. “ರಾಷ್ಟ್ರಧ್ವಜವನ್ನು ಭಾರತೀಯರು ಒಪ್ಪಲಾರರು, ಮೂರು ಎನ್ನುವುದೇ ಅಪಶಕುನ. ತ್ರಿವರ್ಣಧ್ವಜ ಖಂಡಿತ ದೇಶದ ಮೇಲೆ ಮಾನಸಿಕವಾಗಿ ದುಷ್ಪರಿಣಾಮವನ್ನು ಬೀರಲಿರುವುದು ಮಾತ್ರವಲ್ಲ ಹಾನಿಕಾರಿಯಾಗಬಹುದು” ಎಂದು 1947ರಲ್ಲಿಯೇ ಆರ್.ಎಸ್.ಎಸ್ ಮುಖವಾಣಿ ಆರ್ಗನೈಸರ್ ಪ್ರಕಟಿಸಿದ್ದ ಲೇಖನವನ್ನು ನೀವು ಒಪ್ಪುವಿರಾ?

ರಾಷ್ಟ್ರಧ್ವಜದ ಬಗೆಗಿನ ನಿಲುವನ್ನು ಆರ್ ಎಸ್ ಎಸ್ ಬದಲಾಯಿಸಿಕೊಂಡು ‘ಹರ್ ಘರ್ ಮೇ ತಿರಂಗಾ’ ಕಾರ್ಯಕ್ರಮವನ್ನು ಬೆಂಬಲಿಸುತ್ತದೆ ಎಂದು ನಿಮಗನಿಸುತ್ತಿದೆಯೇ? ಬದಲಾಯಿಸಿಕೊಂಡಿದ್ದರೆ ಅದಕ್ಕೆ ಕಾರಣಗಳೇನು ಎಂದು ತಿಳಿಸುವಿರಾ ಬಸವರಾಜ ಬೊಮ್ಮಾಯಿ?
ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ದೇಶದ ಜನ ತಮ್ಮ ಟ್ವೀಟರ್ ಡಿಪಿಯಲ್ಲಿ ರಾಷ್ಟ್ರಧ್ವಜವನ್ನ ಹಾಕಬೇಕೆಂದು ತಿಳಿಸಿದರೂ ಆರ್ ಎಸ್ ಎಸ್ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮಾತ್ರ ಪ್ರಧಾನಿ ನರೇಂದ್ರ ಮೋದಿ ಕರೆಯನ್ನು ಪಾಲಿಸದೆ ಇರಲು ಕಾರಣವೇನು?
ಕಳೆದ 75 ವರ್ಷಗಳಿಂದ ಚಾಲ್ತಿಯಲ್ಲಿದ್ದ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿ ಹತ್ತಿ ಮತ್ತು ರೇಷ್ಮೆ ಬಟ್ಟೆಯ ಬದಲಿಗೆ ಪಾಲಿಸ್ಟರ್ ಬಟ್ಟೆಯಲ್ಲಿಯೂ ರಾಷ್ಟ್ರಧ್ವಜ ತಯಾರಿಸಲು ಅನುಮತಿ ನೀಡಿರುವುದು ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನ ಎಂದು ನಿಮಗೆ ಅನಿಸುವುದಿಲ್ಲವೇ ಬಸವರಾಜ ಬೊಮ್ಮಾಯಿ ಎಂದು ಪ್ರಶ್ನಿಸಿದ್ದಾರೆ.