5 ಸುಲಭ ಮತ್ತು ರುಚಿಕರ ಅಡುಗೆ ರೆಸಿಪಿಗಳು ನಿಮಗಾಗಿ…!
ಬಾದಾಮಿ ಬರ್ಫಿ
ಬೇಕಾಗಿರುವ ಸಾಮಾಗ್ರಿಗಳು
ಬಾದಾಮಿ – 1ಕಪ್
ಗೋಡಂಬಿ – 1/4ಕಪ್
ಸಕ್ಕರೆ – 1 ಕಪ್
ಹಾಲು – 1/2 ಕಪ್
ಹಾಲಿನ ಪುಡಿ – 1/4 ಕಪ್
ತುಪ್ಪ – 2ಚಮಚ
ಮಾಡುವ ವಿಧಾನ
ಮೊದಲಿಗೆ ಬಾದಾಮಿ ನೆನೆಸಿ ಸಿಪ್ಪೆ ತೆಗೆದಿಡಿ. ನಂತರ ಬಾದಾಮಿ, ಗೋಡಂಬಿ, ಹಾಲು ಸೇರಿಸಿ ಚೆನ್ನಾಗಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ. ಬಳಿಕ ಬಾಣಲೆಗೆ ತುಪ್ಪ ಸೇರಿಸಿ ಬಿಸಿ ಮಾಡಿ. ನಂತರ ರುಬ್ಬಿರುವ ಪೇಸ್ಟ್ ಸೇರಿಸಿ ಕೈಯಾಡಿಸುತ್ತಾ ಇರಿ. ಅದಕ್ಕೆ ಸಕ್ಕರೆ ಸೇರಿಸಿ, ಸ್ವಲ್ಪ ಗಟ್ಟಿ ಆದಾಗ ಹಾಲಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ. ಮಿಶ್ರಣವು ಬರ್ಫಿ ಹದಕ್ಕೆ ಬಂದಾಗ ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಕೈಯಾಡಿಸಿ. ನಂತರ ತುಪ್ಪ ಸವರಿದ ಪ್ಲೇಟ್ ಗೆ ಹಾಕಿ ಕತ್ತರಿಸಿ.
ಸೆಟ್ ದೋಸೆ
ಬೇಕಾಗುವ ಸಾಮಗ್ರಿಗಳು
ಅಕ್ಕಿ – 1 ಕಪ್
ಉದಿನ ಬೇಳೆ – 1/2 ಕಪ್
ಅವಲಕ್ಕಿ 1/2 ಕಪ್
ಮೆಂತೆ – 1 ಚಮಚ
ಅಡಿಗೆ ಸೋಡಾ – ಚಿಟಿಕೆಯಷ್ಟು
ಕ್ಯಾರೆಟ್ ತುರಿ – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಅಕ್ಕಿ ಮತ್ತು ಉದ್ದಿನಬೇಳೆಯನ್ನು ಮತ್ತು ಮೆಂತೆಯನ್ನು ಪ್ರತ್ಯೇಕವಾಗಿ ನೆನೆಸಿಡಿ
ರುಬ್ಬುವ 30 ನಿಮಿಷಗಳ ಮೊದಲು ಅವಲಕ್ಕಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಿ
ನಂತರ ಎಲ್ಲವನ್ನು ಚೆನ್ನಾಗಿ ರುಬ್ಬಿ … ಉಪ್ಪು ಸೇರಿಸಿ … ರಾತ್ರಿಯಿಡೀ ಹುದುಗಿಸಿ …
ದೋಸೆ ಮಾಡುವ ಮೊದಲು ಅಡಿಗೆ ಸೋಡಾ ಸೇರಿಸಿ
ದೋಸೆ ತವಾಗೆ ಎಣ್ಣೆ ಸವರಿ ಬಿಸಿ ಮಾಡಿ. ಹಿಟ್ಟನ್ನು ಹೊಯ್ದು ವೃತ್ತಾಕಾರವಾಗಿ ಹರಡಿ … ಅದರ ಮೇಲೆ ತುರಿದ ಕ್ಯಾರೆಟ್ ಮತ್ತು ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ …. ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ.. ಚಟ್ನಿಗಳೊಂದಿಗೆ ಸೆಟ್ ದೋಸೆ ಸವಿಯಿರಿ.
ಬ್ರೆಡ್ ಉಳಿದಿದ್ದರೆ ತಯಾರಿಸಿ ರುಚಿಯಾದ ಚಾಟ್
ಬೇಕಾಗುವ ಸಾಮಾಗ್ರಿಗಳು
ಬ್ರೇಡ್ ತುಂಡುಗಳು – 4
ಆಲೂಗಡ್ಡೆ – 1
ಟೊಮೆಟೊ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ಈರುಳ್ಳಿ – 1
ಜೀರಿಗೆ ಪುಡಿ – 1/2 ಚಮಚ
ಕೆಂಪು ಮೆಣಸಿನಹುಡಿ – 1/2 ಚಮಚ
ಚಾಟ್ ಮಸಾಲಾ 1/4 ಚಮಚ
ಮೊಸರು – 1 ಚಮಚ
ಹಸಿರು ಚಟ್ನಿ -1/2 ಚಮಚ
ಹುಣಸೆ ಚಟ್ನಿ – 1/2 ಚಮಚ
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ. ನಂತರ ಬ್ರೆಡ್ ಅನ್ನು ಅದರಲ್ಲಿ ಬಿಸಿ ಮಾಡಿ. ಬ್ರೆಡ್ ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಮತ್ತು ಗರಿಗರಿಯಾಗುವವರೆಗೆ ಕಾಯಿಸಿ.
ಈಗ ಬ್ರೆಡ್ ಗಳನ್ನು ಪ್ರತ್ಯೇಕ ತಟ್ಟೆಯಲ್ಲಿ ಇರಿಸಿಕೊಳ್ಳಿ.
ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಮ್ಯಾಶ್ ಮಾಡಿ. ನಂತರ ಅದಕ್ಕೆ ಕತ್ತರಿಸಿದ ಟೊಮೆಟೊ, ಕೊತ್ತಂಬರಿ ಮತ್ತು ಈರುಳ್ಳಿ ಸೇರಿಸಿ. ಇದಕ್ಕೆ ಹುರಿದ ಜೀರಿಗೆ, ಉಪ್ಪು, ಕೆಂಪು ಮೆಣಸಿನಹುಡಿ, ಚಾಟ್ ಮಸಾಲಾ ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿ. ಮಸಾಲೆಗಳು ಚೆನ್ನಾಗಿ ಬೆರೆಯುವಂತೆ ಎಲ್ಲವನ್ನೂ ಬೆರೆಸಿ.
ಈ ಆಲೂಗಡ್ಡೆ ಮಿಶ್ರಣವನ್ನು ಬ್ರೆಡ್ ಮೇಲೆ ಇರಿಸಿ. ಅದರ ಮೇಲೆ ಮೊಸರು, ಹಸಿರು ಚಟ್ನಿ, ಹುಣಸೆ ಚಟ್ನಿ ಸವರಿ
ಈಗ ಸ್ವಲ್ಪ ಕಪ್ಪು ಉಪ್ಪು, ಖಾರ ಅಥವಾ ಭುಜಿಯಾ ಮತ್ತು ಪಾಪಡಿ ಇದ್ದರೆ, ಅವುಗಳನ್ನು ಪುಡಿಮಾಡಿ ಹಾಕಿ.
ಕೊನೆಯಲ್ಲಿ ಸಣ್ಣದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕೆಲವು ದಾಳಿಂಬೆಗಳನ್ನು ಸೇರಿಸಿ ಅಲಂಕರಿಸಿ.
ನಿಮ್ಮ ರುಚಿಗೆ ತಕ್ಕಂತೆ ಹಸಿ ಮೆಣಸಿನಕಾಯಿ ಚಟ್ನಿ ಸೇರಿಸಬಹುದು.
ಕೆಸುವಿನ ಗೆಡ್ಡೆ ಫ್ರೈ
ಬೇಕಾಗುವ ಸಾಮಗ್ರಿಗಳು
ಕೆಸುವಿನ ಗೆಡ್ಡೆ – 1/2 ಕೆಜಿ
ಹುಣಸೆಹಣ್ಣು ರಸ – 1/4 ಕಪ್
ಸಾಸಿವೆ – 1/2 ಚಮಚ
ಅರಿಶಿನ ಹುಡಿ – 1/4 ಚಮಚ
ಮೆಣಸಿನ ಪುಡಿ – 1ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಮೊದಲಿಗೆ ಕೆಸುವಿನ ಗೆಡ್ಡೆಯನ್ನು ಚೆನ್ನಾಗಿ 2 – 3 ಬಾರಿ ತೊಳೆಯಿರಿ. ನಂತರ ಹುಣಸೆಹಣ್ಣಿನ ರಸ ಸೇರಿಸಿ ಕುಕ್ಕರ್ ನಲ್ಲಿ 2 ವಿಸಲ್ ಬರುವವರೆಗೆ ಬೇಯಿಸಿಕೊಳ್ಳಿ. ಕೆಸುವಿನ ಗೆಡ್ಡೆ ಆರಿದ ನಂತರ ಅದರ ಸಿಪ್ಪೆಯನ್ನು ತೆಗೆದು ಗುಂಡಗೆ ತೆಳುವಾಗಿ ಕತ್ತರಿಸಿಕೊಳ್ಳಿ.
ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಸಾಸಿವೆ ಸೇರಿಸಿ, ಸಿಡಿದ ಬಳಿಕ ಅರಿಶಿನ ಹುಡಿ ಹಾಕಿ, ಚಿಕ್ಕದಾಗಿ ಕತ್ತರಿಸಿದ ಗೆಡ್ಡೆ ಸೇರಿಸಿ ಚೆನ್ನಾಗಿ ಬೆರೆಸಿ. ಸಣ್ಣ ಉರಿಯಲ್ಲಿ 15 ನಿಮಿಷ ಚೆನ್ನಾಗಿ ಹುರಿದು ನಂತರ ಮೆಣಸಿನ ಪುಡಿ ಸೇರಿಸಿ. ಉಪ್ಪು ಸೇರಿಸಿ ಡೀಪ್ ಫ್ರೈ ಮಾಡಿ. ಈಗ ರುಚಿಯಾದ ಕೆಸುವಿನ ಗೆಡ್ಡೆಯ ಪಲ್ಯ ಸವಿಯಲು ಸಿದ್ಧವಾಗಿದೆ.
ಧಿಡೀರ್ ಟೊಮೆಟೊ ದೋಸೆ
ಬೇಕಾಗುವ ಸಾಮಾಗ್ರಿಗಳು
ಟೊಮೆಟೊ – 2
ಒಣಮೆಣಸು – 2
ಶುಂಠಿ – 1/2 ಇಂಚು
ರವೆ – 1/2 ಕಪ್
ಅಕ್ಕಿ ಹಿಟ್ಟು – 1/4 ಕಪ್
ನೀರು – ಅಗತ್ಯವಿರುವಷ್ಟು
ಈರುಳ್ಳಿ – 1
ಜೀರಿಗೆ – 1 ಚಮಚ
ಗೋಧಿ ಹಿಟ್ಟು – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ.
ಮಾಡುವ ವಿಧಾನ
ಮೊದಲಿಗೆ ಟೊಮೆಟೊ, ಶುಂಠಿಗಳನ್ನು ಚಿಕ್ಕದಾಗಿ ಕತ್ತರಿಸಿ. ಮಿಕ್ಸಿ ಜಾರಿಗೆ ಹಾಕಿ, ಒಣಮೆಣಸು ಸೇರಿಸಿ ಚೆನ್ನಾಗಿ ರುಬ್ಬಿ.
ಈಗ ಒಂದು ಅಗಲವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ರವೆ, ಗೋಧಿ ಹಿಟ್ಟು ಸೇರಿಸಿ, 1 ಕಪ್ ನೀರು ಸೇರಿಸಿ ಚೆನ್ನಾಗಿ ಬೆರೆಸಿ. ನಂತರ ರುಬ್ಬಿಟ್ಟುಕೊಂಡ ಟೊಮೆಟೊ ಮಿಶ್ರಣ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು, ಈರುಳ್ಳಿ ಜೀರಿಗೆ, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಅರ್ಧ ಗಂಟೆ ಈ ಹಿಟ್ಟಿನ ಮಿಶ್ರಣವನ್ನು ಹಾಗೆ ಬಿಡಿ.
ನಂತರ ದೋಸೆ ಹಿಟ್ಟಿನ ಹದಕ್ಕೆ ಹಿಟ್ಟನ್ನು ಕಲಸಿ. ಈಗ ತವಾದ ಮೇಲೆ ಎಣ್ಣೆ ಸವರಿ ದೋಸೆ ಹೊಯ್ಯಿರಿ. ಎರಡೂ ಕಡೆ ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿಕೊಳ್ಳಿ. ಈಗ ರುಚಿಯಾದ ಬಿಸಿ ಬಿಸಿ ಟೊಮೆಟೊ ದೋಸೆಯನ್ನು ಚಟ್ನಿ ಜೊತೆ ಸವಿಯಿರಿ.