ಹಾವೇರಿ: ಎರಡನೇ ಹೆರಿಗೆಯಲ್ಲಿ ಕೂಡ ಹೆಣ್ಣು ಮಗು ಹುಟ್ಟಿದ್ದಕ್ಕೆ ಪಾಪಿ ತಂದೆ ಮಗುವನ್ನು ಮಾರಾಟ ಮಾಡಲು ಯತ್ನಿಸಿರುವ ಘಟನೆಯೊಂದು ನಡೆದಿದೆ.
ಪತಿಯ ವರ್ತನೆಗೆ ಬೇಸತ್ತ ಪತ್ನಿ ಹಸುಗೂಸು ಕರೆದುಕೊಂಡು ಎಸ್ಪಿ ಕಚೇರಿಗೆ ಹೋಗಿ, ದೂರು ನೀಡಿದ್ದಾರೆ. ಜಿಲ್ಲೆಯ ಬ್ಯಾಡಗಿ ತಾಲೂಕು ಆಸ್ಪತ್ರೆಯಿಂದ ಬಾಣಂತಿ ಗೀತಾ ಎಂಬುವವರ ಪತಿ ಸಿದ್ದಲಿಂಗಪ್ಪ ಹಸುಗೂಸನ್ನು ಅಪಹರಿಸಲು ಯತ್ನಿಸಿದ್ದಾನೆ. ಕೂಡಲೇ ಪತ್ನಿ ಗೀತಾ ಆಂಬುಲೆನ್ಸ್ ನಲ್ಲಿ ಎಸ್ಪಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.
ಮಾರಲು ಮುಂದಾಗಿದ್ದ ಸಿದ್ದಲಿಂಗಪ್ಪನ ಕೈಯಿಂದ ಪರಿಚಯಸ್ಥ ಯುವಕರು ಮಗುವನ್ನು ಕಾಪಾಡಿದ್ದರು. ಅವರ ವಿರುದ್ಧವೇ ಸಿದ್ಧಲಿಂಗಪ್ಪ ಕಿಡ್ನಾಪ್ ಆರೋಪ ಮಾಡಿ ದೂರು ನೀಡಿದ್ದಾನೆ. ಈ ಪ್ರಕರಣದಡಿ ಓರ್ವ ಜೈಲು ಪಾಲಾಗಿದ್ದಾನೆ. ಹೀಗಾಗಿ ಮಹಿಳೆ ಅವರು ಸಹಾಯಕ್ಕೆ ಬಂದಿದ್ದಾರೆ. ಅವರನ್ನು ಬಿಡಿ, ಈತನೆ ಮಾರಾಟ ಮಾಡಲು ಮುಂದಾಗಿದ್ದ ಎಂದು ಪತ್ನಿ ಮನವಿ ಮಾಡಿದ್ದಾರೆ. ಅವರಿಗೆ ಗಂಡು ಹುಟ್ಟಿಲ್ಲಾ ಎಂದು ಬೇಸರವಿದೆ. ಬೇರೆ ಮಹಿಳೆಯರ ಜೊತೆ ಅನೈತಿಕ ಸಂಬಂಧವಿದೆ ಅಂತ ಪತ್ನಿ ಗೀತಾ ಆರೋಪಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತಿಯನ್ನು ಕೂಡ ಜೈಲಿಗೆ ಕಳುಹಿಸಿದ್ದಾರೆ.







