ಯುಟ್ಯೂಬ್ ಸ್ಟಾರ್ ಈಗ ನ್ಯಾಷನಲ್ ಕ್ರಶ್
`ಕಣ್ಣೇ ಅದಿರಿಂದಿ’ ಮಂಗ್ಲಿ ( ಸತ್ಯವತಿ ) ರಿಯಲ್ ಸ್ಟೋರಿ
`ಕಣ್ಣೇ ಅದಿರಿಂದಿ’ ಸದ್ಯ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿರುವ ಹಾಡಿದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ ಹಾಡಿನ ತೆಲುಗು ವರ್ಷನ್ ಈ `ಕಣ್ಣೇ ಅದಿರಿಂದಿ’.
ಹೈದರಾಬಾದ್ ನಲ್ಲಿ ನಡೆದ ರಾಬರ್ಟ್ ಪ್ರಿ ರಿಲೀಸ್ ಇವೆಂಟ್ ನಲ್ಲಿ ಅಕ್ಷರಶಃ ಮ್ಯಾಜಿಕ್ ಕ್ರಿಯೆಟ್ ಮಾಡಿದ್ದ ಧ್ವನಿ ಈಗ ಕರ್ನಾಟಕದ ಕ್ರಶ್ ಆಗಿದೆ. ರಾತ್ರೋರಾತ್ರಿ ಕರ್ನಾಟಕದ ಕ್ರಶ್ ಆಗಿರುವ `ಕಣ್ಣೇ ಅದಿರಿಂದಿ ಗಾಯಕಿ, ಬೇರ್ಯಾರು ಅಲ್ಲ,ಕಪ್ಪು ಸುಂದರಿ ಮಂಗ್ಲಿ. ಮಂಗ್ಲಿ ಅವರ ಈ ಧ್ವನಿ ಈಗ ಕೋಟ್ಯಾಂತರ ಮೊಬೈಲ್ ಗಳಲ್ಲಿ ಖಾಯಂ ಸ್ಟೇಟಸ್ ಆಗಿದೆ. ಎಲ್ಲರ ವಾಟ್ಸಾಪ್ ಸ್ಟೇಟಸ್ ನಲ್ಲಿ ಮಂಗ್ಲಿ ಅವರ ಕಣ್ಣೇ ಅದಿರಿಂದಿ ಸಾಂಗ್ ರಾರಾಜಿಸುತ್ತಿದೆ.
ಈ ಮಧ್ಯೆ ಈ ಮಂಗ್ಲಿ ಯಾರು..? ಅನ್ನೋ ಹುಡುಕಾಟ ಕೂಡ ಜೋರಾಗಿ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪಡ್ಡೆ ಹೈಕಳೆಲ್ಲಾ ಮಂಗ್ಲಿ ಹಿಂದೆ ಬಿದ್ದಿದ್ದಾರೆ. ಹಾಗಾದ್ರೆ ಕೃಷ್ಣವರ್ಣದ ಈ ಸುಂದರಿ ಯಾರು..?
ಹಬ್ಬ ಬಂದ್ರೆ ತೆಲುಗು ಮಂದಿಗೆ ಮಂಗ್ಲಿ ಹಾಡು ಇರಲೇಬೇಕು. ತನ್ನ ಮಾತು, ಹಾಡಿನಿಂದ ತೆಲುಗು ಜನರ ಮನೆಮನದಲ್ಲಿ ಸ್ಥಾನ ಪಡೆದಿರುವ ಮಂಗ್ಲಿಯ ಮೂಲ ಹೆಸರು ಸತ್ಯವತಿ. ಆದ್ರೆ ಮಂಗ್ಲಿಯನ್ನ ಯಾರು ಸತ್ಯವತಿ ಅಂತ ಕರೆಯೋದೆ ಇಲ್ಲ. ಬಹಳಷ್ಟು ಮಂದಿಗೆ ಮಂಗ್ಲಿಯ ಮೂಲ ಹೆಸರು ಸತ್ಯವತಿ ಅಂತ ಗೊತ್ತೆ ಇಲ್ಲ. ಆದ್ರೆ ಮಂಗ್ಲಿ ಅಂದ್ರೆ ಆಂಧ್ರ ತೆಲಂಗಾಣದಲ್ಲಿ ವಲ್ರ್ಡ್ ಫೇಮಸ್.
ಬಂಜಾರಾ ಸಮುದಾಯದ ಮಂಗ್ಲಿ ಶಾಲಾ ದಿನಗಳಲ್ಲೇ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆರಂಭದಲ್ಲಿ ಆಲ್ಬಂಗಳಲ್ಲಿ ಹಾಡೋಕೆ ಶುರು ಮಾಡಿದ ಅವರು, ಮುಂದೆ ಲೈವ್ ಪರ್ಫಾಮನ್ಸ್, ಆಂಕರಿಂಗ್, ಡಾನ್ಸ್ ಮಾಡುತ್ತಾ ಫೇಮಸ್ ಆಗಿದ್ದಾರೆ. ಈಗಲೂ ಹಾಗಾಗ ಬಂಜಾರಾ ವೇಷಧಾರಣೆಯಲ್ಲಿ ಕಂಗೊಳಿಸುವ ಮಂಗ್ಲಿ ರೇಲಾರೇ ರೇಲಾ
ಹಾಡಿ ಮೂಲಕ ತೆಲುಗು ಜನರಿಗೆ ಹತ್ತಿರವಾದ್ರು. ಆರಂಭದಲ್ಲಿ ಜಾನಪದ ಹಾಡುಗಳಿಂದ ಎಲ್ಲರನ್ನು ತನ್ನತ್ತ ಸೆಳೆದುಕೊಂಡ ಮಂಗ್ಲಿ ಈಗ ಎಲ್ಲ ರೀತಿಯ ಹಾಡುಗಳಿಗೆ ಧ್ವನಿಯಾಗಿ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ತೆಲಂಗಾಣ ಹೂದೋಟದಲ್ಲಿ ಅಪರೂಪದ ಹೂವಾಗಿ ಪರಮಳಿಸುತ್ತಿರುವ ಮಂಗ್ಲಿ ಹುಟ್ಟಿದ್ದು, ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಬಸನೇಪಲ್ಲಿ ತಾಂಡದಲ್ಲಿ. ತಂದೆ ಬಾಲೋನಾಯ್ಕ್, ತಾಯಿ ಲಕ್ಷ್ಮೀ ನಾಯಕ್. ಮಂಗ್ಲಿ ತಮ್ಮ ಸ್ವಂತ ಊರಿನ ಐದನೇ ತರಗತಿಯವರೆಗು ಇರುವ ಪ್ರಾಥಮಿಕ ಪಾಠ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ್ರು. ನಂತ್ರ ಗುತ್ತಿಯಲ್ಲಿ ಹತ್ತನೇ ತರಗತಿ, ಪಿಯುಸಿ ಮುಗಿಸಿದ್ರು..
ತಾಂಡಾದಲ್ಲಿ ಎಲ್ಲರೂ ಬಂಜಾರಾ ಹಾಡುಗಳನ್ನ ಹಾಡುತ್ತಲೇ ಇರ್ತಾರೆ. ಹಾಗೆ ಮಂಗ್ಲಿ ಕೂಡ ಚಿಕ್ಕ ವಯಸ್ಸಿನಿಂದಲೇ ಹಾಡುಗಳನ್ನ ಹಾಡುತ್ತ ಬೆಳೆದ್ರು. ಬಳಿಕ ತಿರುಪತಿ ವಿಶ್ವವಿದ್ಯಾಲಯದಲ್ಲಿ ಸಂಗೀತ,ಭರತನಾಟ್ಯ ಕಲಿತುಕೊಂಡ್ರು. ಅಲ್ಲೇ ಕರ್ನಾಟಕ ಸಂಗೀತದಲ್ಲಿ ಡಿಪ್ಲಮೋ ಪಡೆದುಕೊಂಡರು. ಅಲ್ಲಿಂದ ಸಂಗೀತ ಟೀಚರ್ ಆಗಬೇಕೆಂದು ಮಂಗ್ಲಿ ಹೈದರಾಬಾದ್ ಗೆ ಬಂದ್ರು. ಈ ಹಂತದಲ್ಲಿ ಒಂದು ಖಾಸಗಿ ಚಾನೆಲ್ ನಲ್ಲಿ ಜಾನಪದ ಹಾಡುಗಳ ಕಾರ್ಯಕ್ರಮದಲ್ಲಿ ಮಂಗ್ಲಿ ಸ್ಫರ್ಧಿಯಾಗಿ ಭಾಗವಹಿಸಿದ್ರು. ಬಳಿಕ ಅದೇ ಚಾನೆಲ್ ನಲ್ಲಿ ಆಂಕರ್ ಆದ್ರು. ಇದಾದ ಬಳಿಕ 2013ರಲ್ಲಿ ತೆಲಂಗಾಣ ಭಾಷೆ ಮಾತನಾಡುತ್ತಾ ಆಂಕರ್ ಆಗಿ ಗುರುತಿಸಿಕೊಂಡ ಮಂಗ್ಲಿಗೆ ತೀನ್ ಮಾರ್ ಕಾರ್ಯಕ್ರಮ ಹೆಸರು ತಂದುಕೊಡ್ತು. ನಂತ್ರ ಟಿವಿ ತ್ಯೆಜಿಸಿ ಯೂಟೂಬ್ ಚಾನೆಲ್ ಸೇರಿದ ಮಂಗ್ಲಿ ಜನರಿಗೆ ಇನ್ನಷ್ಟು ಹತ್ತಿರವಾದ್ರು. ಇದಲ್ಲದೆ ತೆಲಂಗಾಣ ನಾಡಹಬ್ಬಕ್ಕೆ, ಸಂಕ್ರಾಂತಿಗೆ ಹಾಡುಗಳನ್ನ ಹಾಡಿ ಯುಟ್ಯೂಬ್ ನಲ್ಲಿ ದಾಖಲೆ ಬರೆದ್ರು. ಇವರ ಹಾಡುಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದವು. ರೇಲಾರೆ ರೈಲಾ, ಬದುಕಮ್ಮ ಸಾಂಗ್, ಸಮ್ಮಕ್ಕ ಸಾರಕ್ಕ ಹಾಡು ಮಂಗ್ಲಿಯನ್ನ ಯುಟ್ಯೂಬ್ ಸ್ಟಾರ್ ಮಾಡಿದ್ವು. ಇನ್ನೊಂದು ವಿಶೇಷ ಏನಂದ್ರೆ ಮಂಗ್ಲಿ ಎಲ್ಲೇ ಸ್ಟೇಜ್ ಫರ್ಪಾಮೆನ್ಸ್ ಗಳಲ್ಲಿ ಬಂಜಾರ ಡ್ರಸ್ ನಲ್ಲೇ ಕಾಣಿಸಿಕೊಳ್ಳುತ್ತಿದ್ರು. ಇದು ಮಂಗ್ಲಿಗೆ ಒಂದು ಪ್ರತ್ಯೇಕವಾದ ಆಕರ್ಷಣೆಯನ್ನ ತಂದುಕೊಡ್ತು.
ಹೀಗೆ ಯುಟ್ಯೂಬ್ ನಲ್ಲಿ ಸಂಚಲನ ಸೃಷ್ಠಿಸುತ್ತಿದ್ದ ಮಂಗ್ಲಿ, ಕಿಂಗ್ ನಾಗಾರ್ಜುನಾ ಪುತ್ರ ನಾಗಚೇತನ್ಯ ಅಭಿನಯದ ಶೈಲಜಾರೆಡ್ಡಿ ಅಲ್ಲುಡು ಸಿನಿಮಾದಲ್ಲಿ ಟೈಟಲ್ ಸಾಂಗ್ ಹಾಡಿದ್ರು. ಇದಲ್ಲದೇ 2017ರಲ್ಲಿ ರೇಲಾರೇ ರೇಲಾ ಎಂಬ ಹೆಸರಲ್ಲಿ ಹಾಡುಗಳ ಪ್ರಸ್ತಾನ ಆರಂಭಿಸಿ 30 ಕ್ಕೂ ಹೆಚ್ಚು ವಿಭಿನ್ನ ಹಾಡುಗನ್ನ ಹಾಡಿ ಎಲ್ಲರನ್ನು ರಂಜಿಸಿದ್ರು. ಮಂಗ್ಲಿ ಹಾಡಿದ ಪ್ರತಿ ಹಾಡು ಯುಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ನಿಲ್ಲುತ್ತಿವೆ. ಇದಕ್ಕೆ ಮಂಗ್ಲಿಯ ಹಾಡುಗಾರಿಕೆಯ ಶೈಲಿ ಮತ್ತು ಅವರ ಧ್ವನಿಯೇ ಅದಕ್ಕೆ ಕಾರಣ.
ಕಳೆದ ವರ್ಷ ಅಲಾವೈಕುಂಟಪುರಮುಲೋ ಸಿನಿಮಾದಲ್ಲಿ ಮಂಗ್ಲಿ ಹಾಡಿದ್ದ ರಾಹುಲಾ ಸಾಂಗ್ ಸಂಗೀತ ಪ್ರಿಯರ ಹೃದಯ ಗೆದ್ದಿತ್ತು. ಇದೀಗ ರಾಬರ್ಟ್ ಸಿನಿಮಾದ ಕಣ್ಣೆ ಅದಿರಿಂದಿ ಸಾಂಗು ಕೂಡ ಮಂಗ್ಲಿಯನ್ನ ಸ್ಟಾರ್ ಪಟ್ಟಕ್ಕೇರಿಸಿದೆ. ಕೃಷ್ಣವರ್ಣದ ಈ ಸುಂದರಿ ಮುಖದ ಮೇಲೆ ಹೊಳೆಯುವ ಬೊಟ್ಟು, ಎಲ್ಲಾ ಸೇರಿ ಮಂಗ್ಲಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ.
ಪ್ರತೀ ಸೀಸನ್ ನಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾರಲ್ಲ, ಹಾಗೆ ಸದ್ಯಕ್ಕೆ ಭಾರತದ ಕ್ರಶ್ ಆಗಿದ್ದಾರೆ ಗಾಯಕಿ ಮಂಗ್ಲಿ. ಆಂಧ್ರದ ಎಲ್ಲೋ ಒಂದು ಮೂಲೆಯಲ್ಲಿ ಜನಿಸಿ ಇದೀಗ ಕೋಟ್ಯಂತರ ಮಂದಿಯನ್ನ ರಂಜಿಸುತ್ತಿರುವ ಮಂಗ್ಲಿ ಅಲಿಯಾಸ್ ಸತ್ಯವತಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ…
